30 ವಷ೯ಗಳ ಬಳಿಕ ಬಾಗಲಕೋಟೆಯಲ್ಲಿ ಗ್ರಾಮದೇವಿ ಜಾತ್ರೆ!
ಊರಲ್ಲಿ ಕುಟ್ಟೋ ಹಾಗಿಲ್ಲ, ಬೀಸೋ ಹಾಗಿಲ್ಲ, ರೊಟ್ಟಿ ಮಾಡೋಂಗಿಲ್ಲ!
ಬಾಗಲಕೋಟೆಯ ಸಾಂಪ್ರದಾಯಿಕ ಗ್ರಾಮದೇವಿ ಜಾತ್ರೆ ಎಫೆಕ್ಟ್
30 ವಷ೯ಗಳ ಬಳಿಕ ನಡೆಯುತ್ತಿರೋ ಅದ್ದೂರಿ ಗ್ರಾಮದೇವಿ ಜಾತ್ರೆ
ಬಾಗಲಕೋಟೆ (ಡಿ.23): ಆ ಊರಲ್ಲಿ ಮಂಗಳವಾರ ಬಂದ್ರೆ ಸಾಕು ಮನೆಯಲ್ಲಿ ಹೆಣ್ಣು ಮಕ್ಕಳು ಕುಟ್ಟೋ ಹಾಗಿಲ್ಲ, ಬೀಸೋ ಹಾಗಿಲ್ಲ, ಗಂಡು ಮಕ್ಕಳಂತೂ ಕೂಲಿ ಕೆಲಸ ಮಾಡೋಂಗಿಲ್ಲ, ಇನ್ನು ರೈತ್ರು ಸಹ ಕೃಷಿ ಚಟುವಟಿಕೆ ಮಾಡಂಗಿಲ್ಲ. ಇಂತಹವೊಂದು ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದು 30 ವಷ೯ಗಳ ನಂತ್ರ ನಡೆಯುತ್ತಿರೋ ಗ್ರಾಮದೇವಿ ಜಾತ್ರೆ. ಒಂದಲ್ಲ , ಎರಡಲ್ಲ ಬರೋಬ್ಬರಿ 30 ವಷ೯ಗಳ ಬಳಿಕ ಬಾಗಲಕೋಟೆ ನಗರದಲ್ಲಿ ಗ್ರಾಮದೇವತೆಯರ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಇದ್ರಿಂದ ನಗರದ ಕಿಲ್ಲಾಗಲ್ಲಿಯಲ್ಲಿರೋ ದ್ಯಾಮವ್ವ ದುರಗಮ್ಮ ದೇವತೆಯರ ಗುಡಿಯಲ್ಲಿ ಉಭಯ ದೇವಿಯರ ಮೂತಿ೯ ಪ್ರತಿಷ್ಠಾಪಿಸಲಾಗಿದೆ. ಊರಿನ ಪ್ರತಿ ಮನೆ ಮನೆಯಲ್ಲಿ ದೇವಿ ಜಾತ್ರೆ ನಿಮಿತ್ತ ಸಂಪ್ರದಾಯ ಆಚರಣೆ ಮಾಡಲಾಗುತ್ತಿದೆ. ಮುಖ್ಯವಾಗಿ 4 ಮಂಗಳವಾರದ ದಿವಸ ಮನೆಯಲ್ಲಿ ಕುಟ್ಟೋ ಹಾಗಿಲ್ಲ, ಬೀಸೋ ಹಾಗಿಲ್ಲ, ಉತ್ತರ ಕನಾ೯ಟಕದ ಫೇಮಸ್ ರೊಟ್ಟಿ ಸಹ ಬೇಯಿಸೋವಂಗಿಲ್ಲ, ಜೊತೆಗೆ ರೈತಾಪಿ ವಗ೯ದವರು ಕೃಷಿ ಚಟುವಟಿಕೆ ಮಾಡೋದಿಲ್ಲ, ಜೊತೆಗೆ ಕೂಲಿ ಕಾಮಿ೯ಕರು ಸಹ ಅಂದು ಕೆಲಸ ಮಾಡದೇ ಗ್ರಾಮ ದೇವತೆಯರ ಆರಾಧನೆಯಲ್ಲಿ ಮುಳುಗಿತಾ೯ರೆ. ಹೀಗೆ ಮಾಡುತ್ತ ಬಂದು ಕೊನೆಯ ಮಂಗಳವಾರ ವೈಭವದ ಜಾತ್ರೆ ನಡೆಸುವ ಮೂಲಕ ಶುಕ್ರವಾರ ಜಾತ್ರೆಗೆ ತೆರೆ ಬೀಳಲಿದೆ. ಹೀಗಾಗಿ ಎಲ್ಲರ ಮನೆಯ ಹೆಣ್ಣು ಮಕ್ಕಳು ಸಹ ತಮ್ಮ ತಮ್ಮ ತವರು ಮನೆಗೆ ಬಂದು ಗ್ರಾಮದೇವತೆ ಜಾತ್ರೆಗೆ ಬಂದು ದೇವಿ ದಶ೯ನ ಪಡೆದು ಪುನೀತರಾಗುತ್ತಿದ್ದಾರೆ.
Bagalkot: ಖಗೋಳ, ಭೂಗೋಳ ಶಾಸ್ತ್ರದ ಜ್ಞಾನ ಭಂಡಾರ 2ನೇ ತರಗತಿ ಬಾಲಕ
ಇನ್ನು ನಿರಂತರ 5 ದಿನಗಳ ಕಾಲ ನಡೆಯುವ ಜಾತ್ರೆ ಹಿನ್ನೆಲೆ ನಗರದ ತುಂಬೆಲ್ಲಾ ಎಲ್ಲೆಲ್ಲೂ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದು, ಇಡೀ ನಗರ ಕೇಸರಿಮಯವಾಗಿದೆ. ಮೊದಲ ದಿನ ನೂರಾರು ಮಹಿಳೆಯರ ಕುಂಭಮೇಳ ನಡೆದರೆ, ಇನ್ನುಳಿದ ದಿನ ಹೋಮ ಹವನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನು ಜಾತ್ರೆಗೆ ಜಿಲ್ಲೆಯಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಸಹ ಭಕ್ತರು ಆಗಮಿಸಿದ್ದು, ನಿತ್ಯ ಭಕ್ತರಿಗೆ ಬೆಲ್ಲದ ಪಾಯಿಸ ಸೇರಿದಂತೆ ಅನ್ನ ಸಂತಪ೯ಣೆ ಕಾಯ೯ ನಡೆಸಲಾಯಿತು.