ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶಕ ಯೋಗರಾಜ್ ಭಟ್ ವಿಶೇಷ ಶುಭಹಾರೈಕೆ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ‘ಜೈ ಟಾಕ್ಸಿಕ್, ಜೈ ಚಿತ್ರತಂಡ, ಜೈ ಯಶ್’ ಎಂದು ಬರೆದಿರುವ ಅವರು, ‘ಟಾಕ್ಸಿಕ್ ಹೊಸ ಇತಿಹಾಸ ಕೆತ್ತಲಿ’ ಎಂದು ಹಾರೈಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಭರ್ಜರಿ ಓಪನಿಂಗ್ ಪಡೆದು ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಿಂದ ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಇದೀಗ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಕೂಡ ತಮ್ಮದೇ ಶೈಲಿಯಲ್ಲಿ ‘ಟಾಕ್ಸಿಕ್’ಗೆ ಶುಭ ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪುಟ್ಟ ಪದ್ಯದಂತೆ ಸಾಲುಗಳನ್ನು ಹಂಚಿಕೊಂಡಿರುವ ಯೋಗರಾಜ್ ಭಟ್, ‘ನಾಡಿಗೆ ನಮಸ್ತೆ, ಜೈ ಟಾಕ್ಸಿಕ್‌, ಜೈ ಚಿತ್ರತಂಡ, ಜೈ ಗೀತು ಮೋಹನ್‌ದಾಸ್‌, ಜೈ ಕೆವಿಎನ್‌, ಜೈ ಜನತೆ, ಜೈ ಸಿನಿಮಾ & ಜೈ ರಾಕಿಂಗ್‌ ಸ್ಟಾರ್‌ ಯಶ್’ ಎಂದು ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ, ‘ಅಭೂತಪೂರ್ವ ಪ್ರಯತ್ನ ಟಾಕ್ಸಿಕ್‌ ಹೊಸ ಇತಿಹಾಸ ಕೆತ್ತಲೆಂದು ಹಾರೈಸುತ್ತಾ’ ಎಂದು ಹೇಳುವ ಮೂಲಕ ಸಿನಿಮಾದ ಯಶಸ್ಸಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಭಾರೀ ನಿರೀಕ್ಷೆಗಳ ನಡುವೆ ವಿಶ್ವಾದ್ಯಂತ 6 ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆರೆಕಂಡಿದೆ. ಭಾರತದಲ್ಲೇ 5,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ 500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಪ್ರೇಕ್ಷಕರನ್ನು ತಲುಪಿದೆ. ಬಿಡುಗಡೆಯ ಮೊದಲ ದಿನದಿಂದಲೇ ಯಶ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಇದೀಗ ಯೋಗರಾಜ್ ಭಟ್ ಅವರ ಶುಭಹಾರೈಕೆ ಕೂಡ ಚಿತ್ರದ ಮೇಲಿನ ನಿರೀಕ್ಷೆ ಮತ್ತು ಚರ್ಚೆಗೆ ಮತ್ತಷ್ಟು ಕಳೆ ತಂದಿದೆ.

ರಾಯನ ಸುತ್ತ ಸಿನಿಮಾ

ಇನ್ನು ಈ ಸಿನಿಮಾದಲ್ಲಿ ಯಶ್ ತಂದೆ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಸಹೋದರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿದ್ದು, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ. ಗೋವಾ ಹಿನ್ನೆಲೆಯಲ್ಲಿ, ಅಪರಾಧ ಜಗತ್ತಿನಲ್ಲಿ ಭಾಗಿಯಾಗಿರುವ ಪ್ರಬಲ ದರೋಡೆಕೋರ ರಾಯನ ಸುತ್ತ ಸಿನಿಮಾ ಸಾಗುತ್ತದೆ. ಯಶ್​ ಮಾಲೀಕತ್ವದ ಮಾನ್ಸ್ಟರ್​ ಮೈಂಡ್​ ಕ್ರಿಯೇಶನ್ಸ್ ಮತ್ತು ವೆಂಕಟ್​ ಕೆ ನಾರಾಯಣ್​ ಅವರ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದೆ.