ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶೋಧ ನಡೆಸಿದ್ದು, ಸುಮಾರು 2 ಕೋಟಿ ರೂ. ನಗದು ಪತ್ತೆಯಾಗಿದೆ. ಇದು ನಮ್ಮದೇ ಹಣ, ದಾಖಲೆ ನೀಡುತ್ತೇವೆ ಎಂದಿರುವ ಜಾರಕಿಹೊಳಿ, ಈ ದಾಳಿಯ ಹಿಂದೆ ರಾಜಕೀಯ ವಾಸನೆ ಇದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ಸೆ.11): ಜಾರಿ ನಿರ್ದೇಶನಾಲಯ (ಇ.ಡಿ) ಶೋಧದ ವೇಳೆ ನಮ್ಮ ಮನೆಯಲ್ಲಿ ಸುಮಾರು 2 ಕೋಟಿ ರು. ನಗದು ಸಿಕ್ಕಿದೆ. ಅದು ನಮ್ಮದೇ ಹಣ. ನೋಟಿಸ್‌ ನೀಡಿದ ಬಳಿಕ ದಾಖಲೆ ಕೊಡುತ್ತೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಗುರುವಾರ ರಾತ್ರಿ ಇ.ಡಿ.ದಾಳಿ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ. ಏನಾದರೂ ಅನುಮಾನಗಳಿದ್ದಲ್ಲಿ ನೋಟಿಸ್‌ ಕೊಟ್ಟರೆ ಅದಕ್ಕೂ ಉತ್ತರ ಕೊಡುತ್ತೇನೆ. ಗೊತ್ತಿರುವುದಕ್ಕೆ ಉತ್ತರ ನೀಡಿದ್ದೇನೆ. ಗೊತ್ತಿಲ್ಲದ್ದಕ್ಕೆ ಗೊತ್ತಿಲ್ಲ ಎಂದಿದ್ದೇನೆ. ಇದು ದಾಳಿ ಅಲ್ಲ, ಕೇವಲ ಶೋಧ. ಅವರು ಕೆಲ ದಾಖಲೆ ತಂದಿದ್ದರು. ನಮ್ಮ ಕಡೆಯಿಂದ ಕೆಲ ದಾಖಲೆ ತೆಗೆದುಕೊಂಡು ಹೋಗಿದ್ದಾರೆ ಎಂದರು.

ಫೆಮಾ ಕಾಯ್ದೆಯಡಿ ನೋಟಿಸ್‌ ನೀಡಿ ಕೆಲ ದಾಖಲೆ ತೋರಿಸಿ ವಿಚಾರಣೆ ಮಾಡಿದರು. ವಿದೇಶದಲ್ಲಿ ಹೂಡಿಕೆ ಮಾಡಿದ್ದೀರಾ? ಎಂದು ಕೇಳಿದರು. ಇನ್ನೂ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದ್ದೇನೆ. ಇನ್ನು ಕಾನೂನು ಅನುಮತಿ, ಆರ್‌ಬಿಐ ಅನುಮತಿ ಸೇರಿ ಕೆಲ ಅನುಮತಿ ಪಡೆಯಬೇಕು ಎಂದಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ಗೊತ್ತಿರುವ ಉತ್ತರವಷ್ಟೇ ನೀಡಿದ್ದೇನೆ. ನೋಟಿಸ್‌ ಕೊಟ್ಟರೆ ಹೆಚ್ಚಿನ ಉತ್ತರ ಕೊಡುತ್ತೇನೆ ಎಂದರು.

ದಾಳಿ ಹಿಂದೆ ರಾಜಕೀಯ ವಾಸನೆ:

ನೋಟಿಸ್‌ ಕೊಟ್ಟಿದ್ದರೆ ಉತ್ತರ ಕೊಡಬಹುದಿತ್ತು. ದಾಳಿ ಮಾಡುವ ಅಗತ್ಯವಿರಲಿಲ್ಲ. ದೇಶದಲ್ಲಿ ಇದಕ್ಕಿಂತ ದೊಡ್ಡವರು ಇದ್ದಾರೆ. ಇದು ಚರ್ಚೆಗೆ ಆಸ್ಪದವಾಗಿದೆ. ಈ ದಾಳಿ ಹಿಂದೆ ರಾಜಕೀಯದ ವಾಸನೆ ಬರುತ್ತಿದೆ. ಸದ್ಯಕ್ಕೆ ಶೋಧ ನಡೆಸಿ ಹೋಗಿದ್ದಾರೆ. ಅವರು ಎಷ್ಟು ತೃಪ್ತರಾಗಿದ್ದರೋ ಗೊತ್ತಿಲ್ಲ. ಮುಂದೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇ.ಡಿ.ಅಧಿಕಾರಿಗಳು ಬೆಂಗಳೂರು, ಗೋಕಾಕ, ಬೆಳಗಾವಿ ಸೇರಿ ಕೆಲ ಕಡೆ ಶೋಧಿಸಿದ್ದಾರೆ. ಅವರು ನಮಗೆ ಸಹಕರಿಸಿದರು. ನಾವೂ ಅವರಿಗೆ ಸಹರಿಸಿದ್ದೇವೆ. ಮತ್ತೆ ಅವರು ನೋಟಿಸ್‌ ಕೊಟ್ಟಾಗ ವಿಚಾರಣೆಗೆ ಹೋಗುತ್ತೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಬಿಜೆಪಿಯಲ್ಲಿ ದೊಡ್ಡ ಮೀನುಗಳಿವೆ:

ಇ.ಡಿ. ಕಾಂಗ್ರೆಸ್‌ ನಾಯಕರನ್ನು ಟಾರ್ಗೆಟ್‌ ಮಾಡಿದೆ ಎಂದು ನಮ್ಮ ಮುಖ್ಯಮಂತ್ರಿ ಪದೇ ಪದೆ ಹೇಳುತ್ತಿದ್ದರು. ನಾವು ಕೊನೆಯ ಟಾರ್ಗೆಟ್‌ ಎಂದುಕೊಂಡಿದ್ದೆ. ಆದರೆ, ಮೊದಲ ಸರದಿ ನಮಗೆ ಬಂದಿದೆ. ನಾವು ಸಣ್ಣ ತಪ್ಪು ಮಾಡಿರಬಹುದು. ನೂರಕ್ಕೆ ನೂರಷ್ಟು ಸರಿ ಯಾರೂ ಇರುವುದಿಲ್ಲ. ಆದರೆ, ನನಗಿಂತ ದೊಡ್ಡ ತಪ್ಪು ಮಾಡಿದವರು ಬಿಜೆಪಿಯಲ್ಲಿ ಸಾಕಷ್ಟು ಜನ ಇದ್ದಾರೆ. ದೊಡ್ಡ ಮೀನುಗಳನ್ನು ಬಿಟ್ಟು ಸಣ್ಣ ಮೀನುಗಳ ಮೇಲೆ ಬಿದ್ದಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ ನಾಯಕರು, ಪ್ರಾದೇಶಿಕ ಪಕ್ಷಗಳ ನಾಯಕರ ಮೇಲೆ ಈ ಇ.ಡಿ. ಐಟಿ, ಸಿಬಿಐ ದಾಳಿಯಾಗುತ್ತಿವೆ. ಇದೇ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇ.ಡಿ ಬಳಿ 8 ಮಂದಿಯ ಟಾರ್ಗೆಟ್‌ ಲಿಸ್ಟ್‌:

ಇ.ಡಿ. ಈಗಷ್ಟೇ ಪ್ರಾರಂಭಿಸಿದೆ. ಇದನ್ನು ಎಲ್ಲಿಯವರೆಗೆ ಕೊಂಡೊಯ್ಯಲಿದೆ ಎಂದು ನೋಡೋಣ. ಚುನಾವಣೆ ವರೆಗೋ ಅಥವಾ ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಲಿದೆಯೋ ಕಾದು ನೋಡೋಣ. ಈಗ ತನಿಖೆ ಹೇಗೆ ಮಾಡುತ್ತಾರೆ ಎಂಬುದನ್ನೂ ನೋಡೋಣ. ನಮ್ಮ ಪಕ್ಷದ ಅಧ್ಯಕ್ಷರು ಬಂದಿದ್ದರು. ಇ.ಡಿ. ಪಟ್ಟಿಯಲ್ಲಿ 8 ಜನ ಇದ್ದಾರೆ ಎಂದು ಹೇಳುತ್ತಿದ್ದರು. ಮುಂದೆ ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಸಚಿವ ಸತೀಶ್‌ ಜಾರಹೊಳಿ ಪ್ರತಿಕ್ರಿಯಿಸಿದರು.

ಇ.ಡಿ. ಅಧಿಕಾರಿಗಳಿಂದ ನೋ ಡ್ರಿಲ್‌, ನೋ ಗ್ರಿಲ್‌. ಆರಾಮವಾಗಿದ್ದೆ. ಇದು ಇನ್ನು ಪ್ರಾಥಮಿಕ ಹಂತ. ಇ.ಡಿ ನ್ಯಾಯಬದ್ಧವಾಗಿ ತನಿಖೆ ಮಾಡುವ ನಂಬಿಕೆ ಇದೆ. ಮುಂದೆ ವಿಚಾರಣೆ ಮಾಡಿದರೆ ಉತ್ತರ ಕೊಡುತ್ತೇನೆ

- ಸತೀಶ್‌ ಜಾರಕಿಹೊಳಿ, ಲೋಕೋಪಯೋಗಿ ಸಚಿವ