ಕಿಚ್ಚ ಸುದೀಪ್‌ ಅವರು ತಮ್ಮ ತಾಯಿ ಸರೋಜಾ ಸಂಜೀವ್‌ ಅವರ ಸ್ಮರಣಾರ್ಥ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ನೀಡಿ ಸ್ವಾವಲಂಬಿ ಬದುಕಿಗೆ ನೆರವಾಗಿದ್ದಾರೆ.

‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್‌ ಅವರು ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿರುವುದು ಗೊತ್ತೇ ಇದೆ. ಆದರೆ, ತೆರೆ ಹಿಂದೆಯೂ ಅವರ ಮಾನವೀಯ ಮುಖ ಆಗಾಗ್ಗೆ ಗಮನ ಸೆಳೆಯುತ್ತಿರುತ್ತದೆ. ಇದೀಗ ತಮ್ಮ ತಾಯಿ ಸರೋಜಾ ಸಂಜೀವ್ ಅವರ ಸ್ಮರಣಾರ್ಥ ಸುದೀಪ್‌ ಕೈಗೊಂಡಿರುವ ವಿಶೇಷ ಕಾರ್ಯವೊಂದು ಮೆಚ್ಚುಗೆಗೆ ಪಾತ್ರವಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ವಿತರಿಸುವ ಮೂಲಕ, ಅವರು ಕೇವಲ ಆರ್ಥಿಕ ನೆರವು ನೀಡದೆ, ತಮ್ಮ ಕಾಲ ಮೇಲೆ ತಾವು ನಿಲ್ಲಲು ಒಂದು ಜೀವನಾಧಾರವನ್ನೇ ಒದಗಿಸಿದ್ದಾರೆ.

ತಾಯಿಯ ನೆನಪಿಗೆ ವಿಭಿನ್ನ ಗೌರವ

ತಮ್ಮ ತಾಯಿಯ ಸ್ಮರಣೆಯನ್ನು ಕೇವಲ ಕಾರ್ಯಕ್ರಮ ಅಥವಾ ಆಚರಣೆಗೆ ಸೀಮಿತಗೊಳಿಸದೆ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಮೂಲಕ ಅರ್ಥಪೂರ್ಣವಾಗಿ ಸ್ಮರಿಸಿದ್ದಾರೆ ಸುದೀಪ್‌. ಉಚಿತ ಆಟೋ ರಿಕ್ಷಾ ಪಡೆದಿರುವ ನಾಲ್ಕು ಕುಟುಂಬಗಳು ಈ ವಾಹನದ ಮೂಲಕ ಸ್ವತಃ ದುಡಿದು ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಇದೇ ಕಾರಣಕ್ಕೆ ಸುದೀಪ್ ಅವರ ಈ ನಡೆ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಪತಿ ಕಳೆದುಕೊಂಡ ಬಳಿಕ ಇಬ್ಬರು ಮಕ್ಕಳ ಹೊಣೆ ಹೊತ್ತಿದ್ದ ಪವಿತ್ರಾ

ಸುದೀಪ್‌ ನೆರವು ಪಡೆದವರಲ್ಲಿ ಪವಿತ್ರಾ ಕೂಡ ಒಬ್ಬರು. 2017ರಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಏಕಾಂಗಿಯಾಗಿ ನಿರ್ವಹಿಸುತ್ತಿದ್ದಾರೆ. ಮಗಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಮಗ ಇನ್ನೂ ಚಿಕ್ಕವನು. ಕುಟುಂಬಕ್ಕೆ ಸ್ಥಿರ ಆದಾಯದ ಮೂಲವಿಲ್ಲದ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗಿತ್ತು. ಇದೀಗ ಸ್ವಂತ ಆಟೋ ಸಿಕ್ಕಿರುವುದರಿಂದ ದುಡಿದು ಕುಟುಂಬವನ್ನು ಮುನ್ನಡೆಸಲು ಪವಿತ್ರಾ ಅವರಿಗೆ ಹೊಸ ಅವಕಾಶ ದೊರೆತಿದೆ.

ವಿಷ್ಣುವರ್ಧನ್ ಅಭಿಮಾನಿಯ ಕಷ್ಟಕ್ಕೂ ಸ್ಪಂದಿಸಿದ ಕಿಚ್ಚ

ಹುಬ್ಬಳ್ಳಿಯ ಮೃತ್ಯುಂಜಯ ಅವರು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ. ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಸಮಾಜಸೇವೆಯ ರೂಪದಲ್ಲೂ ತೋರಿಸಿರುವ ಅವರು, ಹುಬ್ಬಳ್ಳಿಯಲ್ಲಿ 50ಕ್ಕೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಆದರೆ ಕಾಲಕ್ರಮೇಣ ಅವರ ಕುಟುಂಬವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ವಿಚಾರ ತಿಳಿದ ಸುದೀಪ್‌, ಮೃತ್ಯುಂಜಯ ಅವರ ಕುಟುಂಬಕ್ಕೆ ಸ್ವಂತ ಆಟೋ ನೀಡುವ ಮೂಲಕ ನೆರವಾಗಿದ್ದಾರೆ. ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿದ ಕಿಚ್ಚನ ಈ ನಡೆ ಇದೀಗ ಗಮನ ಸೆಳೆಯುತ್ತಿದೆ.

900ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಫೈಟರ್ ಆಗಿದ್ದ ಬಸವರಾಜ್‌ಗೂ ಆಸರೆ

ಸುದೀಪ್‌ ಅವರ ನೆರವು ಪಡೆದ ಮತ್ತೊಬ್ಬರು ಕನ್ನಡ ಚಿತ್ರರಂಗದ ಸಾಹಸ ಕಲಾವಿದ ಬಸವರಾಜ್. ದೀರ್ಘಕಾಲದಿಂದ ಚಿತ್ರರಂಗದಲ್ಲಿ ಫೈಟರ್ ಆಗಿ ಕೆಲಸ ಮಾಡಿರುವ ಬಸವರಾಜ್‌ ಅವರು 900ಕ್ಕೂ ಅಧಿಕ ಸಿನಿಮಾಗಳಲ್ಲಿ ಸಾಹಸ ಕಲಾವಿದರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ಸುದೀಪ್‌ ಅವರ ಜೊತೆಗೂ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟೊಂದು ವರ್ಷ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ಸ್ಥಿರ ಆದಾಯದ ಕೊರತೆಯಿಂದ ಸಂಕಷ್ಟದಲ್ಲಿದ್ದರು. ಇದೀಗ ಸುದೀಪ್‌ ನೀಡಿರುವ ಆಟೋ ಅವರ ಬದುಕಿಗೆ ಹೊಸ ದಾರಿ ತೋರಿಸಿದೆ.

ಸಾಯಿ ಮಧು ಕುಟುಂಬದ ಪಾಲಿಗೆ ಸುದೀಪ್‌ ಆಸರೆ

ಸುದೀಪ್‌ ಅವರ ತಾಯಿಗೆ ಆಪ್ತರಾಗಿದ್ದ ದಿವಂಗತ ಸಾಯಿ ಮಧು ಅವರ ಕುಟುಂಬಕ್ಕೂ ಈ ನೆರವು ತಲುಪಿದೆ. ಸುಮಾರು ಒಂದು ವರ್ಷದ ಹಿಂದೆ ಮಿದುಳಿನ ಪಾರ್ಶ್ವವಾಯುವಿನಿಂದ ಸಾಯಿ ಮಧು ಅಕಾಲಿಕವಾಗಿ ನಿಧನರಾಗಿದ್ದರು. ಅವರ ಕುಟುಂಬದಲ್ಲಿ ಓದುತ್ತಿರುವ ಇಬ್ಬರು ಪುಟ್ಟ ಹೆಣ್ಣುಮಕ್ಕಳಿದ್ದಾರೆ. ಮಗನನ್ನು ಕಳೆದುಕೊಂಡ ಬಳಿಕ ವೃದ್ಧ ತಂದೆಯೇ ಬಾಡಿಗೆ ಆಟೋ ಓಡಿಸಿಕೊಂಡು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಕುಟುಂಬದ ಈ ಪರಿಸ್ಥಿತಿಯನ್ನು ಅರಿತ ಸುದೀಪ್‌, ಬಾಡಿಗೆ ವಾಹನದ ಬದಲು ಸ್ವಂತ ಆಟೋ ರಿಕ್ಷಾವನ್ನೇ ಒದಗಿಸಿದ್ದಾರೆ. ಇದರಿಂದ ಕುಟುಂಬದ ಮೇಲಿದ್ದ ಆರ್ಥಿಕ ಹೊರೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವಂತಾಗಿದೆ.

‘ಸಹಾಯ’ ಮಾತ್ರವಲ್ಲ, ಸ್ವಾವಲಂಬನೆಗೆ ದಾರಿ

ಸುದೀಪ್‌ ಅವರ ಈ ಕಾರ್ಯದಲ್ಲಿ ಗಮನ ಸೆಳೆಯುವ ಪ್ರಮುಖ ಅಂಶವೆಂದರೆ, ಕೇವಲ ಹಣದ ನೆರವು ನೀಡಿ ಮುಗಿಸಿಲ್ಲ ಎಂಬುದು. ಬದಲಾಗಿ ಫಲಾನುಭವಿಗಳು ಮುಂದೆ ತಾವೇ ದುಡಿದು ತಮ್ಮ ಕುಟುಂಬವನ್ನು ಮುನ್ನಡೆಸಲು ಸಾಧ್ಯವಾಗುವಂತಹ ಜೀವನಾಧಾರ ಒದಗಿಸಿದ್ದಾರೆ. ಒಂದು ಆಟೋ ರಿಕ್ಷಾ ಈ ಕುಟುಂಬಗಳಿಗೆ ಕೇವಲ ವಾಹನವಾಗಿರದೆ, ಪ್ರತಿದಿನದ ಆದಾಯಕ್ಕೆ ದಾರಿಯಾಗಲಿದೆ.

ತಾಯಿಯ ನೆನಪನ್ನು ನಾಲ್ಕು ಕುಟುಂಬಗಳ ಬದುಕಿನೊಂದಿಗೆ ಜೋಡಿಸಿದ ಕಿಚ್ಚ

ತಾಯಿ ಸರೋಜಾ ಸಂಜೀವ್ ಅವರ ಮೇಲಿನ ಪ್ರೀತಿಯನ್ನು ಸುದೀಪ್‌ ಮತ್ತೊಂದು ಅರ್ಥಪೂರ್ಣ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಕಷ್ಟದಲ್ಲಿರುವ ನಾಲ್ಕು ಕುಟುಂಬಗಳ ಬದುಕಿಗೆ ಸ್ವಾವಲಂಬನೆಯ ದಾರಿ ತೋರಿಸುವ ಮೂಲಕ ತಾಯಿಯ ಸ್ಮರಣೆಯನ್ನು ಸಮಾಜಮುಖಿ ಕಾರ್ಯದೊಂದಿಗೆ ಜೋಡಿಸಿದ್ದಾರೆ. ಇನ್ನು ಪರದೆಯ ಮೇಲೆ ಹೀರೋ... ಬದುಕಿನಲ್ಲಿ ನಾಲ್ಕು ಕುಟುಂಬಗಳಿಗೆ ಬದುಕಿನ ಆಸರೆ. ಸುದೀಪ್‌ ಅವರ ಈ ನಡೆ ಇದೀಗ ಅಭಿಮಾನಿಗಳಷ್ಟೇ ಅಲ್ಲದೆ, ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗುತ್ತಿದೆ.