ಕಿಚ್ಚ ಸುದೀಪ್ ಎಂದರೆ ಅಭಿಮಾನಿಗಳಿಗೆ ಕೇವಲ ನಟನಲ್ಲ, ಅವರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸ್ಟಾರ್. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ ರಾಮನಗರ ಕರಗ ಉತ್ಸವದಲ್ಲಿ ನಡೆದ ಘಟನೆ. ಮಳೆಯ ನಡುವೆಯೂ..

ಕಿಚ್ಚ ಸುದೀಪ್ ಎಂದರೆ ಅಭಿಮಾನಿಗಳಿಗೆ ಕೇವಲ ನಟನಲ್ಲ, ಅವರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸ್ಟಾರ್. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ ರಾಮನಗರ ಕರಗ ಉತ್ಸವದಲ್ಲಿ ನಡೆದ ಘಟನೆ. ಮಳೆಯ ನಡುವೆಯೂ ಸುದೀಪ್ ಅಭಿಮಾನಿಗಳಿಗಾಗಿ ಛತ್ರಿಯನ್ನು ಬದಿಗಿಟ್ಟು ವೇದಿಕೆ ಮೇಲೆ ನಿಂತು ಮಾತನಾಡಿದ್ದಾರೆ. ಅವರ ಈ ಸರಳ ನಡೆಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ರಾಮನಗರ ಕರಗ ಉತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದ ಸುದೀಪ್ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಸುದೀಪ್ ವೇದಿಕೆ ಏರುತ್ತಿದ್ದಂತೆ ಮಳೆ ಕೂಡ ಆರಂಭವಾಗಿತ್ತು.

ಸಹಾಯಕರು ಸುದೀಪ್ ಅವರಿಗೆ ಛತ್ರಿ ಹಿಡಿದಿದ್ದರು. ಆದರೆ ಅಭಿಮಾನಿಗಳು ಮಳೆಯಲ್ಲಿ ನಿಂತಿರುವುದನ್ನು ಕಂಡ ಕಿಚ್ಚ, ‘ಪರವಾಗಿಲ್ಲ, ನಾವೂ ಸ್ವಲ್ಪ ಒದ್ದೆ ಆಗೋಣ’ ಎಂದು ಹೇಳಿ ಛತ್ರಿಯನ್ನು ದೂರ ಮಾಡಿಸಿದ್ದಾರೆ. ಬಳಿಕ ಮಳೆಯಲ್ಲೇ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸುದೀಪ್, ಅವರ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. ಸ್ಟಾರ್‌ಡಂನ ಯಾವುದೇ ಅಂತರವಿಲ್ಲದೆ ಅಭಿಮಾನಿಗಳ ಜೊತೆಯೇ ಮಳೆಯಲ್ಲಿ ನಿಂತ ಕಿಚ್ಚನ ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

‘ರಾಮನಗರದ ಜನರ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲ!’

ಮಳೆಯ ನಡುವೆಯೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದನ್ನು ಕಂಡು ಸುದೀಪ್ ಖುಷಿಪಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಮಳೆ ಬರುತ್ತಿರುವುದರಿಂದ ಜನರು ಕಾರ್ಯಕ್ರಮಕ್ಕೆ ಬರುತ್ತಾರೆಯೇ ಎಂಬ ಅನುಮಾನ ತಮಗೂ ಇತ್ತು ಎಂದು ಹೇಳಿದ್ದಾರೆ. ‘ಮಳೆ ಬರುತ್ತಾ ಇದೆ, ಜನ ಬರ್ತಾರಾ ಎಂದು ನಾನು ಮೊಹಮ್ಮದ್ ನಲಪಾಡ್ ಬಳಿ ಕೇಳಿದೆ. ರಾಮನಗರದ ಜನರ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲ, ಬನ್ನಿ ಎಂದು ಕರೆದುಕೊಂಡು ಬಂದರು’ ಎಂದು ಸುದೀಪ್ ಹೇಳಿದ್ದಾರೆ. ಮಳೆ ಲೆಕ್ಕಿಸದೆ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿರುವುದನ್ನು ಕಂಡು ಕಿಚ್ಚ ಭಾವುಕರಾಗಿದ್ದು, ರಾಮನಗರದ ಜನರ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಇದು ಗೆಳೆಯರ ವೇದಿಕೆ, ಇಲ್ಲಿ ಬಿಗ್‌ಬಾಸ್ ಬೇಡ!’

ಕರಗ ಉತ್ಸವದ ವೇಳೆ ಸುದೀಪ್ ಅವರಿಗೆ ಬಿಗ್‌ಬಾಸ್ ಕನ್ನಡ ಸೀಸನ್ 13ರ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ಆದರೆ ಈ ಸಂದರ್ಭದಲ್ಲಿ ಬಿಗ್‌ಬಾಸ್ ಚರ್ಚೆಯನ್ನು ಬದಿಗಿಟ್ಟು, ಕಾರ್ಯಕ್ರಮದ ಆತ್ಮೀಯತೆಯನ್ನು ಮುಂದಿಟ್ಟಿದ್ದಾರೆ. ‘ಇದು ಗೆಳೆಯರ ವೇದಿಕೆ. ಗೆಳೆಯರು ಕರೆದ ವೇದಿಕೆ. ಇಲ್ಲಿ ಬಿಗ್‌ಬಾಸ್ ಬೇಡ. ಬಿಗ್‌ಬಾಸ್ ಎಲ್ಲಿ ನಡೆಯಬೇಕೋ, ಹೇಗೆ ನಡೆಯಬೇಕೋ ನಡೆಯುತ್ತಲೇ ಇರುತ್ತದೆ. ಜನರು ನೋಡುತ್ತಲೇ ಇರುತ್ತಾರೆ’ ಎಂದು ಸುದೀಪ್ ನಗುತ್ತಲೇ ಹೇಳಿದ್ದಾರೆ. ಸುದೀಪ್ ಅವರ ಈ ಮಾತು ಬಿಗ್‌ಬಾಸ್ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ. ಹೊಸ ಸೀಸನ್‌ನಲ್ಲಿ ಏನೆಲ್ಲ ಬದಲಾವಣೆ ಇರಲಿದೆ ಎಂಬ ಚರ್ಚೆ ಈಗಾಗಲೇ ಜೋರಾಗಿದ್ದು, ಕಿಚ್ಚನ ಮಾತು ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಗ್‌ಬಾಸ್‌ಗಾಗಿ ಕಾದಿರುವ ಕಿಚ್ಚನ ಫ್ಯಾನ್ಸ್

ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್‌ಬಾಸ್ ಕನ್ನಡದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 16ರಿಂದ ‘ಅಗ್ನಿಪರೀಕ್ಷೆ’ ಆರಂಭವಾಗಲಿದೆ ಎನ್ನಲಾಗಿದ್ದು, ಸೆಪ್ಟೆಂಬರ್ 6ರಿಂದ ಅಸಲಿ ಆಟ ಶುರುವಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದರ ಜೊತೆಗೆ ಸುದೀಪ್ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ. ಅವರ ಬಹುನಿರೀಕ್ಷಿತ ‘ಬಿಲ್ಲ ರಂಗ ಭಾಷ’ ಚಿತ್ರದ ಕೆಲಸಗಳು ನಡೆಯುತ್ತಿದ್ದು, ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ ಸದ್ಯ ರಾಮನಗರದಲ್ಲಿ ಮಳೆಯನ್ನು ಲೆಕ್ಕಿಸದೆ ಅಭಿಮಾನಿಗಳ ಜೊತೆ ನೆನೆದ ಕಿಚ್ಚ ಸುದೀಪ್ ಅವರ ಸರಳತೆಯೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅಭಿಮಾನಿಗಳ ಪ್ರೀತಿಗೆ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿದ ಕಿಚ್ಚನ ಈ ನಡೆ ಮತ್ತೊಮ್ಮೆ ‘ಅಭಿಮಾನಿಗಳೇ ನನ್ನ ಶಕ್ತಿ’ ಎನ್ನುವ ಮಾತಿಗೆ ಅರ್ಥ ನೀಡಿದೆ.