ಮಂಡ್ಯ/ಮದ್ದೂರು: ಭಾನುವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯ ಕೋಮಿನ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಘಟನೆ ಖಂಡಿಸಿ ಬಿಜೆಪಿ-ಜೆಡಿಎಸ್ ಹಾಗೂ ಹಿಂದೂಪರ ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಮೆರವಣಿಗೆ ಮೇಲೆ ಎರಡು ಬಾರಿ ಕಲ್ಲು ತೂರಾಟ, ಮಾರಕಾಸ್ತ್ರ ಝಳಪಿಸಿದ ಘಟನೆಗಳು ನಡೆದಿವೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮಹಿಳೆಯರು ಸೇರಿ 6 ಮಂದಿ ಗಾಯಗೊಂಡಿದ್ದಾರೆ. ಘಟನೆ ಖಂಡಿಸಿ ಇಂದು ಹಿಂದೂಪರ ಸಂಘಟನೆಗಳು ಇಂದು ಮದ್ದೂರು ಬಂದ್ಗೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಇದೇ ವೇಳೆ, ಬುಧವಾರ ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಆಯೋಜಿಸಲಾಗಿದ್ದು, ರಾಜ್ಯ ಬಿಜೆಪಿ ನಾಯಕರ ನಿಯೋಗ ಇದರಲ್ಲಿ ಪಾಲ್ಗೊಳ್ಳಲಿದೆ.