ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಬೆಂಕಿ ಹಾಕುವ ಕೆಲಸವನ್ನು ಕೆಲ ಶಕ್ತಿಗಳು ಮಾಡುತ್ತಿವೆ ಎಂದು ಅವರು ಆಪಾದಿಸಿದರು.
ನವದೆಹಲಿ: ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿ, ಹಿಂದೂ ಸಮುದಾಯಕ್ಕೆ ಅಸಮಾಧಾನ ಆಗುವ ರೀತಿ ಸರ್ಕಾರ ನಡೆದುಕೊಳ್ಳುತ್ತಿದೆ. ಮಂಡ್ಯ ಜಿಲ್ಲೆಗೆ ಬೆಂಕಿ ಹಾಕುವ ಕೆಲಸವನ್ನು ಕೆಲ ಶಕ್ತಿಗಳು ಮಾಡುತ್ತಿವೆ. ಜನರು ಅಂಥವರಿಗೆ ಅವಕಾಶ ಕೊಡಬಾರದು. ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತ, ನಡವಳಿಕೆಯಿಂದಲೇ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ಎಸೆಯುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಇಂಥ ಕೆಟ್ಟ ಘಟನೆಗಳು ನಡೆಯಲು ಕಾಂಗ್ರೆಸ್ ಸರ್ಕಾರವೇ ಕಾರಣ. ಶಾಂತಿ ನೆಮ್ಮದಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಹಿಂದೆಂದೂ ಈ ಜಿಲ್ಲೆಯಲ್ಲಿ ಇಂಥ ಘಟನೆಗಳು ಆಗಿಲ್ಲ. ನಾಗಮಂಗಲದಲ್ಲಿ ಕೆಲ ದುಷ್ಟಶಕ್ತಿಗಳು ಬೆಂಕಿ ಹಾಕುವ ಕೆಲಸ ಮಾಡಿದ್ದವು. ಈಗ ಮದ್ದೂರಿನಲ್ಲಿಯೂ ಅಂಥ ಶಕ್ತಿಗಳೇ ಜನರ ನೆಮ್ಮದಿ ಕೆಡಿಸುವ ಹುನ್ನಾರ ನಡೆಸಿವೆ ಎಂದು ಅವರು ಆಪಾದಿಸಿದರು.
ನಿಖಿಲ್ ಭೇಟಿ:
ಈ ಮಧ್ಯೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಸೋಮವಾರ ಮದ್ದೂರಿಗೆ ಭೇಟಿ ನೀಡಿ, ಬಿಜೆಪಿ-ಜೆಡಿಎಸ್ ಪ್ರತಿಭಟನೆಗೆ ಸಾಥ್ ನೀಡಿದರು. ಬಳಿಕ, ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
