ಗಣೇಶ ವಿಸರ್ಜನಾ ಸಂದರ್ಭದಲ್ಲಿ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ಮೂವರು ಹೃದಯಾಘಾತ ಸಂಭವಿಸಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ರಾಯಚೂರಿನಲ್ಲಿ ಈ ಘಟನೆಗಳು ನಡೆದಿವೆ. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತರ ವಿವರ ಇಲ್ಲಿದೆ ನೋಡಿ..

ಬೆಂಗಳೂರು/ಮಂಡ್ಯ/ಚಿಕ್ಕಬಳ್ಳಾಪುರ/ರಾಯಚೂರು (ಸೆ.01): ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಮಾಡಿದ ಭಕ್ತರು ವಿಸರ್ಜನಾ ಸಂದರ್ಭದಲ್ಲಿ ಡಿಜೆ, ಸೌಂಡ್ ಸಿಸ್ಟಮ್ ಅಥವಾ ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸುತ್ತಾರೆ. ಡಿಜೆ ಸೌಂಡ್ ಸಿಸ್ಟಮ್ ಮುಂದೆ ತಮ್ಮ ಶಕ್ತಿ ಕುಂದಿದರೂ ಲೆಕ್ಕಿಸದೇ ಕುಣಿದ ಮೂವರು ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ ದುರಂತ ಘಟನೆಗಳು ನಡೆದಿದೆ. ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ರಾಯಚೂರಿನಲ್ಲಿ ಡ್ಯಾನ್ಸ್ ಮಾಡುತ್ತಲೇ ಕುಸಿದುಬಿದ್ದು ಪ್ರಾಣಬಿಟ್ಟ ಪ್ರತ್ಯೇಕ 3 ಘಟನೆಗಳು ವರದಿಯಾಗಿವೆ.

 ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಸಾವು!

ಡಿಜೆ ಸದ್ದಿಗೆ ಡ್ಯಾನ್ಸ್ ಮಾಡುತ್ತಿದ್ದವ ಹೃದಯಾಘಾತಕ್ಕೆ ಬಲಿಯಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರದಲ್ಲಿ ನಡೆದಿದೆ. ಡ್ಯಾನ್ಸ್ ಮಾಡುತ್ತಿರುವಾಗಲೆ ಕುಸಿದುಬಿದ್ದ ಮಂಜುನಾಥ್ (55) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ ಆಗಿದ್ದಾರೆ. ಜೊತ್ತನಪುರ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯುವಕರ ಜೊತೆ ಡಿಜೆ ಸದ್ದಿಗೆ ಮಂಜುನಾಥ್ ಕೂಡ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಆದರೆ, ಡ್ಯಾನ್ಸ್ ಮಾಡುತ್ತಿದ್ದಾಗಲೇ ಮಂಜುನಾಥ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ಹೃದಯಾಘಾತದಿಂದ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಮಂಜುನಾಥ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿಯೂ ವ್ಯಕ್ತಿ ಸಾವು:

ನಿನ್ನೆಯೂ ಕೂಡ ಗಣೇಶ ವಿಸರ್ಜನೆ ವೇಳೆ ಕುಣಿಯುತ್ತಲೇ ಕುಸಿದುಬಿದ್ದು ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಬೋದಗೂರು ಗ್ರಾಮದಲ್ಲಿ ನಡೆದಿತ್ತು. ಗಣೇಶನ ಮುಂದೆ ಡ್ಯಾನ್ಸ್ ಮಾಡುತ್ತಿದ್ದ ಭಕ್ತ ಲಕ್ಷ್ಮೀಪತಿ(40) ಮೃತಪಟ್ಟಿದ್ದರು. ಗಣೇಶನ ವಿಸರ್ಜನೆಯ ಸಮಯದಲ್ಲಿ ನಾಗವಲ್ಲಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಬಿದ್ದರು. ಕೂಡಲೇ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದ್ದಾರೆ. ಬೋದಗೂರು ಗ್ರಾಮದಲ್ಲಿ ಹಬ್ಬದ ಸಂಭ್ರಮ ದೂರಾಗಿ, ಸ್ಮಶಾನ ಮೌನ ಆವರಿಸಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರಿನಲ್ಲಿ 24 ವರ್ಷದ ಅಭಿಷೇಕ್ ಸಾವು:

ರಾಯಚೂರಿನ ತೀನ್ ಖಂದಿಲ್ ಸರ್ಕಲ್ ಬಳಿ ಅದ್ಧೂರಿಯಾಗಿ ಗಣೇಶ ವಿಸರ್ಜನೆ ಮಾಡುವ ವೇಳೆ ಡಿಜೆ ಸೌಂಡ್ ಮುಂದೆ ಡ್ಯಾನ್ಸ್ ಮಾಡುತ್ತಿದ್ದ 24ರ ಹರೆಯದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ರಾಯಚೂರು ನಗರದ ಮಂಗಳವಾರ ಪೇಟೆಯ ಯುವಕ ಅಭಿಷೇಕ್ (24) ಮೃತ ದುರ್ದೈವಿ. ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಲೇ ಮೆರವಣಿಗೆ ಸಾಗಿತ್ತು. ಈ ಡ್ಯಾನ್ಸ್‌ನಲ್ಲಿ ಅಭಿಷೇಕ್ ಕೂಡ ಉತ್ಸಾಹದಲ್ಲಿ ಪಾಲ್ಗೊಂಡಿದ್ದನು. ಗೆಳೆಯರ ಜೊತೆಗೂಡಿ ಡಿಜೆ ಸೌಂಡ್ಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದನು. ಆದರೆ ರಾತ್ರಿಯಿಡಿ ಡ್ಯಾನ್ಸ್ ಮಾಡಿ ಸುಸ್ತಾಗಿದ್ದ. ಇತ್ತ ವಿಪರೀತ ಡಿಜೆ ಸೌಂಡ್ ಹಾಗೂ ಡ್ಯಾನ್ಸ್‌ನಿಂದ ಅಭಿಷೇಕ್ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಅಭಿಷೇಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಅಭಿಷೇಕ್‌ಗೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಯುವಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.

ರಾಜ್ಯದಲ್ಲಿ ಯುವಜನರು ಹಾಗೂ ವೃದ್ಧರು ಏಕಾಏಕಿ ಕುಸಿದುಬಿದ್ದು, ದಿಢೀರ್ ಹೃದಯಸ್ತಂಭನ ಉಂಟಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಈ ಆತಂಕದ ನಡುವೆ ಕಳೆದೆರಡು ದಿನಗಳಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕುಣಿಯುತ್ತಲೇ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ವೈದ್ಯರು ಅತಿಯಾಗಿ ನಿದ್ದೆಗೆಡುವುದು, ಮದ್ಯಪಾನ, ಧೂಮಪಾನ ಮಾಡಬಾರದು. ಆರೋಗ್ಯದ ಸ್ಥಿತಿ ಚೆನ್ನಾಗಿಲ್ಲದ ವೇಳೆ ವಿಶ್ರಾಂತಿ ಮಾಡಬೇಕು ಎಂದು ಹೇಳಿದ್ದಾರೆ. ಆದಾಗ್ಯೂ ಗಣೇಶ ಹಬ್ಬದಲ್ಲಿ ಮೂರ್ನಾಲ್ಕು ದಿನ ನಿದ್ದೆಗೆಟ್ಟು ಅದ್ಧೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಖುಷಿ ಪಟ್ಟಿದ್ದಾರೆ. ಆದರೆ, ದೀರ್ಘಾವಧಿ ನಿದ್ದೆ ಕೊರತೆ, ಆಯಾಸ, ಮದ್ಯ ಸೇವನೆ ಸೇರಿ ಇತರೆ ಕಾರಣಗಳಿಂದ ಕುಣಿಯುತ್ತಲೇ ಬಿದ್ದು ಸಾವನ್ನಪ್ಪಿದ ಘಟನೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.