ಹುಡುಗ ಡಿಗ್ರಿ ಮಾಡಿಲ್ಲವೆಂದು ಮದುವೆ ರದ್ದು: ಮನನೊಂದ ಯುವತಿ ಆತ್ಮಹ*ತ್ಯೆ
ಮದುವೆ ನಿಶ್ಚಯವಾದ ಹುಡುಗ ಡಿಗ್ರಿ ಓದಿಲ್ಲವೆಂದು ತಿಳಿದ ನಂತರ ಮದುವೆ ರದ್ದಾಗಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ (ಸೆ.06): ಮದುವೆ ನಿಶ್ಚಯವಾದ ಹುಡುಗ ಡಿಗ್ರಿ ಓದಿಲ್ಲವೆಂದು ಮನೆಯವರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ನನ್ನ ಜೊತೆಗೆ ಡಿಗ್ರಿ ಮಾಡಿದ್ದಾಗಿ ಸುಳ್ಳು ಹೇಳಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾನೆಂದು ಮನನೊಂದ ಯುವತಿ ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ನಡೆದಿದೆ.
ಮೃತಳನ್ನು ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ನಿವಾಸಿ ಕಾವ್ಯ (26) ಎಂದು ಗುರುತಿಸಲಾಗಿದೆ. ಸುಮಾರು 15 ದಿನಗಳ ಹಿಂದೆ ಹಾಸನ ಜಿಲ್ಲೆಯ ಯುವಕರೊಬ್ಬರೊಂದಿಗೆ ಮದುವೆ ನಿಶ್ಚಯಗೊಂಡಿತ್ತು. ಮದುವೆಗೂ ಮುನ್ನ ತಾನು ಡಿಗ್ರಿ ಮಾಡಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹುಡುಗಿ ಮನೆಯವರಿಗೆ ಹೇಳಿದ್ದನು.
ಇನ್ನು ಎಂಗೇಜ್ಮೆಂಟ್ ಆದ ನಂತರ ಹುಡುಗನ ಪೂರ್ವಾಪರ ವಿಚಾರಿಸಿದಾಗ ಆತ ಯಾವುದೇ ಡಿಗ್ರಿ ಮಾಡದೇ, ತಂದೆಯ ಸೆಕ್ಯೂರಿಟಿ ಕಂಪನಿಯೊಂದನ್ನು ನಡೆಸಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಯುವತಿಗೆ ಮನೆಯವರು ಸಮಾಧಾನ ಮಾಡಿದ್ದಾರೆ.
ಈ ನಿರ್ಧಾರದಿಂದ ಮನನೊಂದು ಕಾವ್ಯ, ಕೆಲಸ ಮಾಡುತ್ತಿದ್ದ ಕಿಕ್ಕೇರಿ ರೈತ ಸಂಪರ್ಕ ಕೇಂದ್ರದಲ್ಲೇ ನಿನ್ನೆ ನಿದ್ರಾಮಾತ್ರೆ ಸೇವಿಸಿ ಅಸ್ವಸ್ಥಳಾದಳು. ತಕ್ಷಣವೇ ಸಹೋದ್ಯೋಗಿಗಳು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಾವ್ಯ ಪ್ರಾಣ ಕಳೆದುಕೊಂಡರು.
ಘಟನೆಯ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ. ಮದುವೆ ಎಂಬ ಹಬ್ಬದ ಕನಸು ಜೀವವನ್ನೇ ಕಸಿದುಕೊಂಡಿರುವುದು ಕುಟುಂಬದವರಿಗೂ ಸ್ನೇಹಿತರೂ ಸಹ ಅಘಾತ ತಂದಿದೆ.