India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು

ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಜಾನ್ ಹಾಗೂ ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಗಳು ಭಾರತದಲ್ಲಿ ಭಾರೀ ಹೂಡಿಕೆ ಮಾಡಲು ಮುಂದಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿ ಭೇಟಿಯಾದ ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಳ್ಲಾ 1.5 ಲಕ್ಷ ಕೋಟಿ ರು. ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ, ಅಮೆಜಾನ್ ಕೂಡ 3.1 ಲಕ್ಷ ಕೋಟಿ ರು.ಹೂಡಿಕೆಗೆ ತಯಾರಿ ನಡೆಸುತ್ತಿದೆ. ಎಐ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮುಂದಿನ 4 ವರ್ಷದಲ್ಲಿ 1.5 ಲಕ್ಷ ಕೋಟಿ ರು. ಹೂಡಿಕೆ ಮಾಡಲು ಮುಂದಾಗಿರುವ ಮೈಕ್ರೋಸಾಫ್ಟ್, ಇದೇ ವರ್ಷದಲ್ಲಿ 26 ಸಾವಿರ ಕೋಟಿ ರು. ಹೂಡಿಕೆ ಮಾಡಿತ್ತು.
ಪ್ರಸ್ತುತ ಕ್ವಿಕ್-ಕಾಮರ್ಸ್ ಅಮೆಜಾನ್, ದಿನ 5 ವರ್ಷಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಎಐ ಕ್ಷೇತ್ರಕ್ಕೂ ಕಾಲಿಡಲು ಸಿದ್ಧವಾಗುತ್ತಿದೆ. 2030ರ ವೇಳೆಗೆ ಎಐ ಹಾಗೂ ಸರಕುಸಾಗಣೆ ಮೂಲಸೌಕರ್ಯಗಳ ಮೇಲಿನ ಹೂಡಿಕೆಯಿಂದ 10 ಲಕ್ಷ ಉದ್ಯೋಗವನ್ನೂ ಸೃಷ್ಟಿಸುವುದಾಗಿ ಕಂಪನಿ ಹೇಳಿದೆ. 2010ರಿಂದ ಅಮೆಜಾನ್ ಭಾರತದಲ್ಲಿ 3.5 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ.