ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ ವಿಧಿಸಲಾಗಿದೆ. ಅಚಾನಕ್ಕಾಗಿ ವೃದ್ಧ ಉಗುಳಿದ್ದಾನೆ. ಗಿಡದ ಎಲೆ ಮೇಲೆ ಉಗುಳಿದ ಕಾರಣಕ್ಕೆ 86 ವರ್ಷದ ವೃದ್ಧನಿಗೆ ದಂಡ ವಿಧಿಸಲಾಗಿದೆ.
ಲಂಡನ್ (ಡಿ.11) ಭಾರತದ ರಸ್ತೆ, ಪಾರ್ಕ್ , ನಿಲ್ದಾಣಗಳು ಕೆಂಪಾಗಿರುವುದು ಹೊಸದೇನಲ್ಲ. ಪಾನ್ ಮಸಾಲ, ಎಲೆ ಅಡಿಕೆ ಜಗಿದು ಎಲ್ಲೆಂದರಲ್ಲಿ ಉಗುಳುವ ಸಂಪ್ರದಾಯ ನಮ್ಮದು. ಶುಚಿತ್ವದ ಕಡೆಗೆ ಒಂದಿಂಚು ಸಾಗಿದ್ದೇವೆ, ಆದರೆ ಇನ್ನೂ ದೇಶದಲ್ಲಿ ಜಾಗೃತಿ ಮೂಡಿಲ್ಲ. ಇದರ ನಡುವೆ ಲೇಕ್ ಪಾರ್ಕ್‌ನಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ತುಪುಕ್ ಎಂದು ಉಗುಳಿದ್ದಾನೆ. ಇದು ಗಿಡದ ಎಲೆ ಮೇಲೆ ಬಿದ್ದಿದೆ. ಇಷ್ಟೇ ನೋಡಿ, 86 ವರ್ಷದ ವೃದ್ಧನಿಗೆ 26,000 ರೂಪಾಯಿ ದಂಡ ವಿಧಿಸಿದ್ದಾರೆ. ಭಾರತ ಇಷ್ಟೊಂದು ಮುಂದುವರಿತಾ ಎಂದುಕೊಳ್ಳಬೇಡಿ, ಈ ದಂಡ ವಿಧಿಸಿದ ಪ್ರಕರಣ ನಡೆದ್ದು ಬ್ರಿಟನ್‌ನ ಲಿಂಕನ್‌ಶೇರ್‌ನಲ್ಲಿ.
ಅಚಾನಕ್ಕಾಗಿ ಉಗುಳಿದ ವೃದ್ಧ
86 ವರ್ಷದ ರಾಯ್ ಮಾರ್ಶ್ ಎಲ್ಲೆಂದರಲ್ಲಿ ಉಗುಳುವ ಮನುಷ್ಯ ಅಲ್ಲ. ಇಂಗ್ಲೆಂಡ್‌ನಲ್ಲಿ ಈ ರೀತಿಯ ಸಂಪ್ರದಾಯವೂ ಇಲ್ಲ. ರಾಯ್ ಮಾರ್ಶ್ ಲೇಕ್ ಪಾರ್ಕ್‌ನಲ್ಲಿ ವಾಕಿಂಗ್ ತೆರಳಿದ್ದಾರೆ. ವಾಕಿಂಗ್ ಮಾಡಿ ಮರದ ಕೆಳಗೆ ಬಂದಿದ್ದಾನೆ. ಮರದ ಎಲೆಯೊಂದು ರಾಯ್ ಮಾರ್ಶ್ ಮೇಲೆ ಬಿದ್ದಿದೆ. ಮೊದಲೇ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ರಾಯ್ ಮಾರ್ಶ್‌ಗೆ ಈ ಮರದ ಎಲೆ ಹಾಗೂ ಅದರ ವಾಸನೆಯಿಂದ ಕೆಮ್ಮು, ಕಫ ಬಂದಿದೆ. ಹೀಗಾಗಿ ಮಾರ್ಶ್ ತಕ್ಷಣವೇ ಉಗುಳಿದ್ದಾರೆ. ಇದು ಮರದ ಕೆಳಗಿನ ಗಿಡಗಳ ಎಲೆ ಮೇಲೆ ಬಿದ್ದಿದೆ.
ವೃದ್ಧನ ವಿರುದ್ಧ ದೂರು
ವೃದ್ಧನ ಉಗುಳಿರುವುದನ್ನು ಕೆಲ ದೂರದಲ್ಲಿದ್ದ ಇತರ ವಿಸಿಟರ್ಸ್ ನೋಡಿದ್ದಾರೆ. ವೃದ್ಧನ ವಿರುದ್ಧ ದೂರು ನೀಡಿದ್ದಾರೆ. ಇತ್ತ ರಾಯ್ ಮಾರ್ಶ್ ಇದ್ಯಾವುದರ ಪರಿವಿಲ್ಲದೆ ತೆರಳಿದ್ದಾನೆ. ಇತ್ತ ರಾಯ್ ಮಾರ್ಶ್ ವಿರುದ್ಧ ಪ್ರಕರಣ ದಾಖಲಾಗಿದೆ. ದೂರು ದಾಖಲಾದ ಬಳಿಕ ಅಧಿಕಾರಿಗಳು ಪಾರ್ಕ್ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಈ ವೇಳೆ ವೃದ್ಧ ಉಗುಳುತ್ತಿರುವುದು ಖಚಿತಗೊಂಡಿದೆ. ಹೀಗಾಗಿ ವೃದ್ಧನಿಗೆ £250 ಪೌಂಡ್ ದಂಡ ವಿಧಿಸಲಾಗಿದೆ.
ಅಚಾನಕ್ಕಾಗಿ ಉಗುಳಿದ್ದೇನೆ, ಮನವಿ ಮಾಡಿದ ವೃದ್ಧ
ದಂಡ ವಿಧಿಸಿದ ಬೆನ್ನಲ್ಲೇ ವೃದ್ಧ ತನ್ನ ಅನಾರೋಗ್ಯದ ಕಾರಣ ಹಾಗೂ ದಾಖಲೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಬಳಿಕ ತಾನು ಅಚಾನಕ್ಕಾಗಿ ಉಗುಳಿದ್ದೇನೆ. ಇದು ನನ್ನ ಹವ್ಯಾಸವಲ್ಲ, ಈ ರೀತಿ ಎಲ್ಲೂ ಮಾಡಿಲ್ಲ. ಆದರೆ ಅಂದು ಅಸ್ತಮಾ ಜೊತೆ ಕೆಮ್ಮು ಬಂದ ಕಾರಣ ಉಗುಳಿದ್ದೇನೆ ಎಂದು ಮನವಿ ಮಾಡಿದ್ದಾರೆ. ವೃದ್ಧನ ಮೇಲೆ ಕರುಣ ತೋರಿಸಿ. ಅಚಾನಕ್ಕಾಗಿ ಆಗಿರುವ ಘಟನೆ ಇದೆ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ. ದಂಡವನ್ನು ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು. ವೃದ್ಧನ ಬಳಿಕ ದಂಡವನ್ನು £150 ಪೌಂಡ್ ಇಳಿಕೆ ಮಾಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
ವೃದ್ಧ ಅಚಾನಕ್ಕಾಗಿ ಉಗುಳಿದರೂ ಬಿಟ್ಟಿಲ್ಲ, ಆದರೆ ಭಾರತದ ಕತೆ ಏನು ಎಂದು ಹಲವರು ಪ್ರಶ್ನಿಸಿದ್ದರೆ. ಎಲ್ಲೆಂದರಲ್ಲಿ ಉಗುಳುವುದು ಸಹಿಸಿಕೊಳ್ಳಬಹುದು, ಪಾನ್ ಮಸಾಲೆ ಜಗಿದು ಉಗಿಯುತ್ತಾರಲ್ಲ ಏನು ಮಾಡುವುದು ಎಂದು ಹಲವರು ಪ್ರಶ್ನಿಸಿದ್ದಾರೆ.

