ಅತ್ಯಾ*ಚಾರ ಪ್ರಕರಣದ ಆರೋಪಿಯೊಬ್ಬ, ಕಾನೂನಿನಿಂದ ತಪ್ಪಿಸಿಕೊಳ್ಳಲು ಆತ್ಮ*ಹತ್ಯೆ ನಾಟಕವಾಡಿದ್ದಾನೆ. ನದಿಗೆ ಹಾರಿದಂತೆ ನಂಬಿಸಿ, ಡೆತ್ ನೋಟ್ ಬಿಟ್ಟು ಹೋಗಿದ್ದ ಈತನನ್ನು, ಮೂರು ದಿನಗಳ ಶೋಧದ ನಂತರ ಪೊಲೀಸರು ಕಡೆಗೂ ಬಂಧಿಸಿದ್ದಾರೆ.

ರಾಜಸ್ಥಾನದ ಅಜ್ಮೀರ್‌ನಲ್ಲಿ ಅತ್ಯಾ*ಚಾರ ಪ್ರಕರಣದ ಆರೋಪಿಯೋರ್ವ ಈ ಪ್ರಕರಣದಿಂದ ಎಸ್ಕೇಪ್ ಆಗಲು ಆತ್ಮ*ಹತ್ಯೆ ಮಾಡಿಕೊಂಡಂತೆ ಭಾಸವಾಗುವಂತೆ ನಾಟಕವಾಡಿದ್ದಾನೆ. ಈತನ ನಾಟಕವನ್ನು ಕೆಲ ದಿನಗಳಲ್ಲಿ ಪೊಲೀಸರು ಬೇಧಿಸಿದ್ದು, ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಆದರೆ ಅದಕ್ಕೂ ಮೊದಲು ಪೊಲೀಸರು ಈತನ ಸಾವಿನ ನಾಟಕದಿಂದ ಬೇಸ್ತು ಬಿದ್ದಿದ್ದಾರೆ. ಈತ ನದಿಗೆ ಹಾರಿ ಸತ್ತು ಹೋಗಿದ್ದಾನೆ ಎಂದು ಭಾವಿಸಿದ ಪೊಲೀಸರು ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಮುಳುಗುತಜ್ಞರನ್ನು ಕರೆಸಿ ಆತನ ಆತ್ಮ*ಹತ್ಯೆ ಪತ್ರ ಸಿಕ್ಕ ಸೇತುವೆಯ ಕೆಳಗಿರುವ ನದಿಯಲ್ಲಿ ಮೂರು ದಿನಗಳಿಂದ ತೀವ್ರ ಹುಡುಕಾಟ ನಡೆಸಿದ್ದರು.

ಡಿಸೆಂಬರ್ 3 ರಂದು, ಅಜ್ಮೀರ್‌ನ ರಾಜ್ಯ ಹೆದ್ದಾರಿ-26 ರಲ್ಲಿರುವ ಬನಾಸ್ ನದಿ ಸೇತುವೆಯಿಂದ ಹಾರಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಜ್ಮೀರ್ ನಿಯಂತ್ರಣ ಕೊಠಡಿಗೆ ವರದಿ ಬಂದಿತು. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಅಲ್ಲಿ ಅವರಿಗೆ ಆತ್ಮ*ಹತ್ಯೆ ಪತ್ರ, ಆಧಾರ್ ಕಾರ್ಡ್‌ಗಳ ಮೂರು ಕಾಪಿಗಳು, ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ ಹಾಗೂ ಬೈಕ್ ಪತ್ತಯಾಗಿದೆ. ಈ ದಾಖಲೆಗಳಿಂದ ಪೊಲೀಸರು ಆ ವ್ಯಕ್ತಿಯನ್ನು ಭಿಲ್ವಾರದ ನಿವಾಸಿ ಧನ್ನಾ ರಾಯ್‌ಗರ್ ಅವರ ಪುತ್ರ ರಾಮಲಾಲ್ ಅಲಿಯಾಸ್ ಕಲುರಾಮ್ ಎಂದು ಗುರುತಿಸಿದರು.

ಇದನ್ನೂ ಓದಿ: ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು

ಹೀಗಾಗಿ ಪೊಲೀಸರು ಆತ ನದಿಗೆ ಹಾರಿದ್ದಾನೆ ಎಂದು ಭಾವಿಸಿ ಮೂರು ದಿನಗಳಿಂದ ಎಸ್‌ಡಿಆರ್‌ಎಫ್‌ ತಂಡದ ಸಹಾಯದಿಂದ ನದಿಯಲ್ಲಿ ಹುಡುಕಾಟ ಆರಂಭಿಸಿದರು. ಆದರೆ ಆತನ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ, ಸತತ ಮೂರು ದಿನಗಳ ಕಾಲ ಹುಡುಕಾಟ ನಡೆಸಿ ಶವ ಸಿಗದೇ ಹೋದಾಗ ಪೊಲೀಸರು ಈ ಶೋಧ ಕಾರ್ಯವನ್ನು ನಿಲ್ಲಿಸಿದರು. ನಂತರ ತನಿಖೆಯ ರೀತಿಯನ್ನು ಬದಲಾಯಿಸಿದರು. ಅಲ್ಲದೇ ಪತ್ರ ಬರೆದಿಟ್ಟ ರಾಮ್‌ಲಾಲ್‌ನ ಬಗ್ಗೆ ತನಿಖೆ ನಡೆಯುತ್ತಿದ್ದಾಗ ಆತನ ವಿರುದ್ಧ ಅತ್ಯಾ*ಚಾರ ಪ್ರಕರಣ ದಾಖಲಾಗಿರುವುದು ಪೊಲೀಸರ ಗಮನಕ್ಕೆ ಬಂತು ಹೀಗಾಗಿ ಪೊಲೀಸರಿಗೆ ಈತನ ಸಾವಿಗೆ ಯತ್ನಿಸಿದ್ದೇ ಸುಳ್ಳು ಎಂಬ ಅನುಮಾನ ಮೂಡುವುದಕ್ಕೆ ಶುರುವಾಗಿದೆ.

ಹೀಗಾಗಿ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರೀಕ್ಷಿಸಿದಾಗ ಈತನ ನಾಟಕ ಬೆಳಕಿಗೆ ಬಂದಿದೆ. ಹಾಗೆಯೇ ಡಿಸೆಂಬರ್ 6 ರಂದು, ಪೊಲೀಸ್ ತಾಂತ್ರಿಕ ತಂಡಕ್ಕೆ ಆರೋಪಿ ರಾಮಲಾಲ್ ದೆಹಲಿ ಸಬರಮತಿ ಆಶ್ರಮ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಾವರ್ ಪೊಲೀಸ್ ಠಾಣೆಯ ಅಧಿಕಾರಿಗಳು ಅಜ್ಮೀರ್ ತಲುಪಿದ್ದಾರೆ ಮತ್ತು ಜಿಆರ್‌ಪಿ ಪೊಲೀಸರ ಸಹಾಯದಿಂದ ಅಜ್ಮೀರ್ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ. ಬಂಧನದ ನಂತರ ಪೊಲೀಸರು ಆತನಿಗೆ ಬೆಂಡೆತ್ತಿದ್ದಾಗ ತಾನು ಆತ್ಮ*ಹತ್ಯೆಯ ಬಗ್ಗೆ ನಾಟಕವಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು

ಘಟನೆಗೆ ಸಂಬಂಧಿಸಿದಂತೆ ಸಮಾಜದ ಶಾಂತಿಗೆ ಭಂಗ ತಂದ ಆರೋಪದ ಮೇಲೆ ರಾಮಲಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಾವರ್ ಪೊಲೀಸ್ ಠಾಣೆಯ ಉಸ್ತುವಾರಿ ರಾಧೇಶ್ಯಾಮ್ ಚೌಧರಿ ಹೇಳಿದ್ದಾರೆ. ಆತನ ವಿರುದ್ಧದ ಅತ್ಯಾ*ಚಾರ ಪ್ರಕರಣವೂ ಜಹಾಜ್‌ಪುರ ಪೊಲೀಸ್ ಠಾಣೆಗೆ ಸೇರಿರುವುದರಿಂದ, ಆತನನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವಿಚಾರಣೆಯ ಸಮಯದಲ್ಲಿ ರಾಮ್‌ಲಾಲ್‌, ಅತ್ಯಾ*ಚಾರ ಪ್ರಕರಣದಲ್ಲಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ರೀತಿ ಪ್ಲಾನ್ ಮಾಡಿದ್ದಾಗಿ ಆತ ಹೇಳಿದ್ದಾನೆ. ತಾನು ನದಿಗೆ ಹಾರಿ ಸಾವನ್ನಪ್ಪಿದೆ ಎಂದು ಜನ ತಿಳಿದುಕೊಳ್ಳಲಿ ಎಂದು ತಾನು ಉದ್ದೇಶಪೂರ್ವಕವಾಗಿ ತನ್ನ ಬೈಕ್,ಫೋಟೋಗಳು, ಆಧಾರ್ ಕಾರ್ಡ್‌ ಹಾಗೂ ಡೆತ್‌ನೋಟನ್ನು ಸೇತುವೆಯ ಮೇಲೆ ಬಿಟ್ಟು ಹೋಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ವಿರುದ್ಧ ಈಗ ಬಿಎನ್‌ಎಸ್‌ನ ಸೆಕ್ಷನ್ 170 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.