ಡಿಸೆಂಬರ್ 22ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಟೀಂ ಇಂಡಿಯಾದ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪ್ರಮುಖ ಚರ್ಚೆಯ ವಿಷಯವಾಗಿದೆ. ಕೇವಲ ಏಕದಿನ ಮಾದರಿಯಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 'ಎ+' ಗ್ರೇಡ್‌ನಿಂದ ಹಿಂಬಡ್ತಿ ಹೊಂದುವ ಸಾಧ್ಯತೆಯಿದೆ.

ಮುಂಬೈ:ಮುಂಬರುವ ಡಿಸೆಂಬರ್ 22ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಸೆಂಟ್ರಲ್ ಕಾಂಟ್ರ್ಯಾಕ್ಟ್ ವಿಚಾರ ಚರ್ಚೆಗೆ ಬರಲಿರುವ ಪ್ರಮುಖ ಅಂಶಗಳಲ್ಲಿ ಒಂದು ಎನಿಸಿಕೊಂಡಿದೆ. ಇನ್ನು ಇದೇ ವೇಳೆ ಮಹಿಳಾ ಕ್ರಿಕೆಟರ್ಸ್‌ ಸೆಂಟ್ರಲ್ ಕಾಂಟ್ರ್ಯಾಕ್ಟ್ ವಿಚಾರವೂ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ಚರ್ಚೆಯ ಅಜೆಂಡಾಗಳಲ್ಲಿ ಒಂದು ಎನಿಸಿಕೊಂಡಿದೆ.

ಪಿಟಿಐ ವರದಿಯ ಪ್ರಕಾರ, 31ನೇ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯು ವರ್ಚುವಲಿಯಾಗಿ ನಡೆಯಲಿದೆ. ಇದೇ ಸಭೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಸೆಂಟ್ರಲ್ ಕಾಂಟ್ರ್ಯಾಕ್ಟ್ ಕುರಿತಂತೆಯೂ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಇಬ್ಬರೂ ಕ್ರಿಕೆಟಿಗರು ಈಗಾಗಲೇ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸದ್ಯ ಈ ಇಬ್ಬರು ಆಟಗಾರರು ಭಾರತ ಏಕದಿನ ತಂಡದಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಹೊರತಾಗಿಯೂ 2024-2025ನೇ ಸಾಲಿನ(ಅಕ್ಟೋಬರ್ 01, 2024ರಿಂದ ಸೆಪ್ಟೆಂಬರ್ 30, 2025) ಸೈಕಲ್‌ನಲ್ಲಿ ಎ+ ಕೆಟೆಗೆರೆಯಲ್ಲಿಯೇ ಮುಂದುವರೆದಿದ್ದಾರೆ. ಇದೇ ಕೆಟೆಗೆರೆಯಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಕೂಡಾ ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ ಕಳೆದ ವರ್ಷ ಭಾರತ ಐಸಿಸಿ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಟಿ20 ಮಾದರಿಗೆ ವಿದಾಯ ಘೋಷಿಸಿದ್ದು, ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇದೀಗ ಹೊಸ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಕೊಹ್ಲಿ ಹಾಗೂ ರೋಹಿತ್ ಎ+ ಕಾಂಟ್ರ್ಯಾಕ್ಟ್‌ನಲ್ಲಿಯೇ ಮುಂದುವರೆಯುತ್ತಾರೆಯೇ ಅಥವಾ ಹಿಂಬಡ್ತಿ ಪಡೆಯುತ್ತಾರೆಯೇ ಎನ್ನುವ ಕುತೂಹಲ ಜೋರಾಗಿದೆ. ಸದ್ಯ 'ಎ+' ಗ್ರೇಡ್ ಹೊಂದಿರುವ ಆಟಗಾರರಿಗೆ ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಸಿಗುತ್ತದೆ. ಇನ್ನು 'ಎ' ಗ್ರೇಡ್ ಹೊಂದಿರುವ ಆಟಗಾರರಿಗೆ 5 ಕೋಟಿ, 'ಬಿ'ಗ್ರೇಡ್ ಪಡೆವ ಆಟಗಾರರಿಗೆ 3 ಕೋಟಿ ಹಾಗೂ 'ಸಿ' ಗ್ರೇಡ್ ಪಡೆವ ಆಟಗಾರರಿಗೆ ಒಂದು ಕೋಟಿ ರುಪಾಯಿ ಸಂಭಾವನೆ ಸಿಗಲಿದೆ.

ವಿರಾಟ್-ರೋಹಿತ್ ಸಂಬಳ ಕಟ್

ಕೆಲ ಮಾಧ್ಯಮಗಳ ವರದಿಗಳ ಪ್ರಕಾರ ಕೇವಲ ಒಂದೇ ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್ ಹಾಗೂ ರೋಹಿತ್‌ಗೆ ಎ+ ಗ್ರೇಡ್‌ನಿಂದ ಎ ಗ್ರೇಡ್‌ಗೆ ಹಿಂಬಡ್ತಿ ನೀಡಲಾಗುವುದು ಎನ್ನಲಾಗುತ್ತಿದೆ. ಹೀಗಾದಲ್ಲಿ ಈ ಇಬ್ಬರು ಕ್ರಿಕೆಟಿಗರಿಗೆ ವಾರ್ಷಿಕ ಸಂಭಾವನೆಯಲ್ಲಿ ಎರಡು ಕೋಟಿ ರುಪಾಯಿ ಸಂಬಳ ಕಟ್ ಆಗಲಿದೆ.

ಶುಭ್‌ಮನ್ ಗಿಲ್‌ಗೆ ಎ+ ಗ್ರೇಡ್‌ಗೆ ಮುಂಬಡ್ತಿ:

ಇನ್ನು ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಶುಭ್‌ಮನ್‌ ಗಿಲ್‌ ಅವರಿಗೆ 'ಎ' ಗ್ರೇಡ್‌ನಿಂದ ಎ+ ಗ್ರೇಡ್‌ಗೆ ಮುಂಬಡ್ತಿ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಕೂಡಾ 'ಎ+' ಗ್ರೇಡ್‌ಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.