ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಎಂ ಎಸ್ ಧೋನಿ ಜೊತೆಗಿನ ತಮ್ಮ ಹಳೆಯ ನೆನಪೊಂದನ್ನು ಹಂಚಿಕೊಂಡಿದ್ದಾರೆ. 2004ರಲ್ಲಿ ರೂಮ್‌ಮೇಟ್ ಆಗಿದ್ದಾಗ, ಸಸ್ಯಾಹಾರಿಯಾಗಿದ್ದ ಚೋಪ್ರಾ ಅವರಿಗಾಗಿ ಧೋನಿ ಒಂದು ತಿಂಗಳ ಕಾಲ ಕೇವಲ ಸಸ್ಯಾಹಾರವನ್ನೇ ಸೇವಿಸಿದ್ದರು.
ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಹಾಗೂ ದಿಗ್ಗಜ ವಿಕೆಟ್ ಕೀಪರ್ ಬ್ಯಾಟರ್ ಎಂ ಎಸ್ ಧೋನಿ 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇದಾಗಿ ಐದು ವರ್ಷ ಕಳೆದರೂ ಧೋನಿ, ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. 2026ರ ಐಪಿಎಲ್‌ನಲ್ಲಿ ಧೋನಿ ಮತ್ತೊಮ್ಮೆ ಸಿಎಸ್‌ಕೆ ಪರ ಮೈದಾನಕ್ಕಿಳಿಯಲಿದ್ದಾರೆ.
44 ವರ್ಷದ ಧೋನಿ ಇಂದಿಗೂ ಯುವ ಕ್ರಿಕೆಟಿಗರು ನಾಚುವಂತೆ ವಿಕೆಟ್ ಕೀಪಿಂಗ್ ಮಾಡುತ್ತಾರೆ. ಅವರ ಫಿಟ್ನೆಸ್ ಕೂಡಾ ಹಲವು ಯುವ ಕ್ರಿಕೆಟಿಗರಿಗೆ ಸ್ಪೂರ್ತಿ ಎನಿಸಿಕೊಂಡಿದೆ. ಹೀಗಿರುವ ಧೋನಿ ಅಷ್ಟಕ್ಕೂ ಏನ್ ತಿನ್ನುತ್ತಾರೆ ಎನ್ನುವ ಕುತೂಹಲ ಹಲವರಲ್ಲಿದೆ. ಧೋನಿಗೆ ಯಾವ ಆಹಾರ ಇಷ್ಟ? ಈ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಧೋನಿಯ ಹಳೆಯ ರೂಮ್‌ಮೇಟ್ ಆಕಾಶ್ ಚೋಪ್ರಾ ಹಲವು ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ.
ಧೋನಿಗೆ ಯಾವ ಊಟ ಇಷ್ಟ ಎನ್ನುವುದು ಗೊತ್ತಾ?
ಅಂದಹಾಗೆ ಆಕಾಶ್ ಚೋಪ್ರಾ ಲಲನ್‌ಟಾಪ್‌ನ ಒಂದು ಸಂದರ್ಶನದಲ್ಲಿ 2004ರಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ಆಗ ಭಾರತ 'ಎ' ತಂಡವು ಜಿಂಬಾಬ್ವೆ ಹಾಗೂ ಕೀನ್ಯಾ ಪ್ರವಾಸ ಕೈಗೊಂಡಿತ್ತು. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಒಂದು ಕ್ಯಾಂಪ್ ಮಾಡಲಾಗಿತ್ತು. ಆಗ ಧೋನಿ, ಆಕಾಶ್ ಚೋಪ್ರಾ ಅವರ ರೂಮ್‌ಮೇಟ್ ಆಗಿದ್ದರು. ಆಗ ಧೋನಿ ಅಷ್ಟೇನೂ ಚಿರಪರಿಚಿತ ಆಟಗಾರನಾಗಿರಲಿಲ್ಲ. ಅವರೊಬ್ಬ ರಾಂಚಿಯಿಂದ ಬಂದ ಸಾದಾಸೀದ ಆಟಗಾರನಾಗಿದ್ದರು. ಅಷ್ಟರಲ್ಲಾಗಲೇ ಆಕಾಶ್ ಚೋಪ್ರಾ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ತನ್ನದೇ ಆದ ಹೆಜ್ಜೆಗುರುತು ದಾಖಲಿಸಿದ್ದರು. ಈ ಇಬ್ಬರೂ ಸರಿಸುಮಾರು ಒಂದು ತಿಂಗಳ ಕಾಲ ರೂಮ್ ಹಂಚಿಕೊಂಡಿದ್ದರು.
ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ?
ನಾನು ಧೋನಿಯನ್ನು ಕೇಳಿದೆ, ನೀವು ವೆಜ್ ತಿನ್ನುತ್ತೀರೋ? ಅಥವಾ ನಾನ್‌ವೆಜ್ ತಿನ್ನುತ್ತೀರೋ ಎಂದು. ಯಾಕೆಂದರೆ ಇಬ್ಬರೂ ಒಟ್ಟಿಗೆ ಫುಡ್ ಆರ್ಡರ್ ಮಾಡಬೇಕಿತ್ತು. ಒಂದು ರೂಮ್‌ನಲ್ಲಿ ಇಬ್ಬರೂ ಸಸ್ಯಾಹಾರಿಗಳು ಮತ್ತು ಇಬ್ಬರೂ ಮಾಂಸಾಹಾರಿಗಳಾಗಿದ್ದರೆ ವಿಷಯಗಳು ಸುಲಭವಾಗುತ್ತವೆ. ನಾನು ಸಸ್ಯಾಹಾರಿ ಎಂದು ಧೋನಿಗೆ ಹೇಳಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಆಗ ಧೋನಿ ತುಂಬಾ ವಿನಯದಿಂದ ನೀವು ಏನನ್ನು ತಿನ್ನುತ್ತೀರ ಎಂದು ಕೇಳಿದರು. ಆಗ ನಾನು ಸಸ್ಯಹಾರವನ್ನಷ್ಟೇ ತಿನ್ನುತ್ತೇನೆ ಎಂದೆ. ಇದಾದ ನಂತರ ಮುಂದಿನ 30 ದಿನವೂ ಧೋನಿ ನನ್ನ ಜತೆ ಕೇವಲ ಸಸ್ಯಹಾರವನ್ನಷ್ಟೇ ತಿಂದರು. ಆದರೆ ಇದಾದ ನಂತರವೇ ನನಗೆ ಗೊತ್ತಾಗಿದ್ದು ಧೋನಿ ಮಾಂಸಹಾರವನ್ನು ಸೇವಿಸುತ್ತಾರೆ ಎಂದು. ಧೋನಿ ನನ್ನ ಜತೆಯಿದ್ದಾಗ ಯಾವತ್ತೂ ರೂಮ್ ಸರ್ವೀಸ್ ಬಳಿಯಾಗಲಿ, ಫೋನ್ ಮೂಲಕವಾಗಲಿ ಬೇರೆ ಯಾವುದೇ ಡಿಮ್ಯಾಂಡ್ ಇಡುತ್ತಿರಲಿಲ್ಲ. ಸುಮ್ಮನೆ ಏನಿದೆಯೋ ಅದನ್ನು ತಿನ್ನುತ್ತಿದ್ದರು. ಆರಂಭದಲ್ಲಿ ಧೋನಿ ಕೊಂಚ ನಾಚಿಕೆಯ ಸ್ವಭಾವದವರಾಗಿದ್ದರು. ಆದರೆ ಅವರು ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದ್ದರು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.


