ಟಿ20 ಸರಣಿಯಿಂದ ಸಂಜು ಸ್ಯಾಮ್ಸನ್‌ರನ್ನು ಹೊರಗಿಟ್ಟಿದ್ದಕ್ಕೆ ಆರ್. ಅಶ್ವಿನ್ ಕಾರಣ ನೀಡಿದ್ದಾರೆ. ಶುಭಮನ್ ಗಿಲ್‌ರನ್ನು ಉಪನಾಯಕರನ್ನಾಗಿ ಮಾಡಿದ್ದೇ ಸಂಜು ಸ್ಥಾನಕ್ಕೆ ಕುತ್ತು ತಂದಿತು ಎಂದು ಅವರು ವಿಶ್ಲೇಷಿಸಿದ್ದಾರೆ.  

ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ದಾಖಲೆ ಹೊಂದಿದ್ದರೂ, ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಹೊರಗಿಟ್ಟಿದ್ದರ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ಆರ್. ಅಶ್ವಿನ್ ಮಾತನಾಡಿದ್ದಾರೆ. ಶುಭಮನ್ ಗಿಲ್‌ರನ್ನು ತಂಡದ ಉಪನಾಯಕರನ್ನಾಗಿ ಮಾಡಿದಾಗಲೇ, ಆಡುವ 11ರ ಬಳಗದಲ್ಲಿ ಸಂಜು ಸ್ಥಾನ ನಿರ್ಧಾರವಾಗಿತ್ತು ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಚರ್ಚೆಗೆ ಗ್ರಾಸವಾದ ಟೀಮ್‌ ಮ್ಯಾನೇಜ್‌ಮೆಂಟ್ ನಿರ್ಧಾರ

ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಂದಿನಂತೆ, ಸಂಜುರನ್ನು ಯಾಕೆ ಆಡುವ 11ರ ಬಳಗದಿಂದ ಕೈಬಿಡಲಾಯಿತು ಎಂಬುದೇ ಚರ್ಚೆಯ ಮುಖ್ಯ ವಿಷಯ. ಆದರೆ, ಶುಭ್‌ಮನ್ ಗಿಲ್‌ರನ್ನು ಟಿ20 ತಂಡದ ಉಪನಾಯಕರನ್ನಾಗಿ ಮಾಡಿದಾಗಲೇ ಸಂಜು ಸ್ಥಾನಕ್ಕೆ ಕುತ್ತು ಬಂದಿತ್ತು. ಸಂಜುಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆಯೇ ಎಂಬುದು ಕೂಡ ಚರ್ಚೆಯಾಗಬೇಕಾದ ವಿಷಯ. ಆದರೆ ಗಿಲ್‌ರನ್ನು ತಂಡಕ್ಕೆ ಸೇರಿಸಿದ್ದು ಮಾತ್ರವಲ್ಲ, ಅವರನ್ನು ಉಪನಾಯಕರನ್ನಾಗಿ ಮಾಡಿದ್ದೇ ಸಂಜು ಸ್ಥಾನಕ್ಕೆ ದೊಡ್ಡ ಅಪಾಯ ತಂದೊಡ್ಡಿತು ಎಂದು ರವಿಚಂದ್ರನ್ ಅಶ್ವಿನ್ ವಿಶ್ಲೇಷಣೆ ಮಾಡಿದ್ದಾರೆ.

ಸಂಜು ಬದಲಿಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಶುಭಮನ್ ಗಿಲ್ ಇನ್ನೂ ಮಿಂಚಲು ಸಾಧ್ಯವಾಗಿಲ್ಲ. ಆದರೆ ಉಪನಾಯಕನ ಸ್ಥಾನದಲ್ಲಿರುವುದರಿಂದ ಸದ್ಯಕ್ಕೆ ಗಿಲ್ ಸ್ಥಾನಕ್ಕೆ ಯಾವುದೇ ಅಪಾಯವಿಲ್ಲ. ಆದರೂ, ಆರಂಭಿಕನಾಗಿ ಶುಭ್‌ಮನ್ ಗಿಲ್ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಂಜುವಂತ ಪ್ರತಿಭಾನ್ವಿತ ಆಟಗಾರನನ್ನು ಹೊರಗಿಟ್ಟು ಶುಭ್‌ಮನ್ ಗಿಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರುವುದರಿಂದ ಗಿಲ್ ಮೇಲೆ ಎಲ್ಲರ ಕಣ್ಣಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಶುಭ್‌ಮನ್ ಗಿಲ್ ಬಂದ ನಂತರ, ಸಂಜುರನ್ನು ಆರಂಭಿಕ ಆಟಗಾರನಾಗಿ ಪರಿಗಣಿಸುತ್ತಿಲ್ಲ. ಯಾಕೆಂದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಐದನೇ ಸ್ಥಾನ ಸಂಜು ಬ್ಯಾಟಿಂಗ್ ಶೈಲಿಗೆ ಹೊಂದಿಕೆಯಾಗುವುದಿಲ್ಲ. ಸಂಜು, ಜಿತೇಶ್ ಶರ್ಮಾರಂತಹ ಫಿನಿಶರ್ ಅಲ್ಲ. ಹಾಗಾಗಿ, ಸಂಜುರನ್ನು ಆಡಿಸುವುದಾದರೆ, ಆರಂಭಿಕರಾಗಿ ಅಥವಾ ಮೂರನೇ ಕ್ರಮಾಂಕದಲ್ಲಿ ಆಡಿಸಬೇಕು. ಸ್ಪಿನ್ ವಿರುದ್ಧ ಆಡಲು ಸಂಜುಗೆ ಅವಕಾಶ ನೀಡಬೇಕು ಎಂದು ಅಶ್ವಿನ್ ಹೇಳಿದರು.

ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಶುಭ್‌ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ ಕೇವಲ ಎರಡು ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲಾದರೂ ಶುಭ್‌ಮನ್ ಗಿಲ್ ದೊಡ್ಡ ಸ್ಕೋರ್ ದಾಖಲಿಸಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವುದನನ್ನು ಕಾದು ನೋಡಬೇಕಿದೆ. ಯಾಕೆಂದರೆ ಮತ್ತೆ ಗಿಲ್ ಫೇಲ್ ಆದರೆ ಅವರ ಮೇಲೆ ಒತ್ತಡ ಮತ್ತಷ್ಟು ಹೆಚ್ಚಾಗಲಿದೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇಂದಿನ ಪಂದ್ಯವೂ ಸೇರಿದಂತೆ ಭಾರತ ತಂಡವು ಕೇವಲ 9 ಟಿ20 ಪಂದ್ಯಗಳನ್ನಷ್ಟೇ ಆಡಲಿದೆ. ಹೀಗಾಗಿ ಆದಷ್ಟು ಬೇಗ ಭಾರತ ತಂಡವು ತನ್ನ ಆರಂಭಿಕರು ಯಾರು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ.