ಭೀಮ್ ಆರ್ಮಿಯ ಸಹ ಸಂಸ್ಥಾಪಕ, ಅಜಾದ್ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಉತ್ತರ ಪ್ರದೇಶದ ನಾಗಿನಾ ಲೋಕಸಭಾ ಕ್ಷೇತ್ರದ ಸಂಸದ ಚಂದ್ರಶೇಖರ್ ಅಜಾದ್ ರಾವಣ್ ವಿರುದ್ದ ಈಗ ಅವರ ಮಾಜಿ ಗೆಳೆತಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಲಕ್ನೋ: ಭೀಮ್ ಆರ್ಮಿಯ ಸಹ ಸಂಸ್ಥಾಪಕ, ಅಜಾದ್ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಉತ್ತರ ಪ್ರದೇಶದ ನಾಗಿನಾ ಲೋಕಸಭಾ ಕ್ಷೇತ್ರದ ಸಂಸದ ಚಂದ್ರಶೇಖರ್ ಅಜಾದ್ ರಾವಣ್ ವಿರುದ್ದ ಈಗ ಅವರ ಮಾಜಿ ಗೆಳೆತಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಚಂದ್ರಶೇಖರ್ ಅಜಾದ್ ಅವರ ಪಕ್ಷಕ್ಕೆ ಬಂದ ಹಣದ ಬ್ಯಾಂಕ್ ಸ್ಟೇಟ್‌ಮೆಂಟ್‌ನ್ನು ಅವರು ಬಹಿರಂಗಪಡಿಸಿದ್ದು, ಇಷ್ಟೊಂದು ದೊಡ್ಡ ಮೊತ್ತದ ಹಣ ಏನಾಯ್ತು? ಸಮಾಜದ ಯಾವ ಕೆಲಸಕ್ಕೆ ಈ ಹಣವನ್ನು ಬಳಸಿದ್ದೀರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಸಂಸದ ಚಂದ್ರಶೇಖರ್ ಅಜಾದ್ ಅವರ ಮಾಜಿ ಗೆಳತಿ ಡಾ ರೋಹಿಣಿ ಘವ್ರಿ ಅವರು ಅಜಾದ್‌ ಕಟ್ಟಿದ ಪಕ್ಷಕ್ಕೆ ಬಂದ ಹಣದ ಬ್ಯಾಂಕ್ ಸ್ಟೇಟ್‌ಮೆಂಟ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಅವರಿಗೆ ಕೇವಲ ಏಪ್ರಿಲ್ ತಿಂಗಳೊಂದರಲ್ಲೇ ಸುಮಾರು 2.5 ಕೋಟಿ ರೂಪಾಯಿ ಅವರ ಖಾತೆಗೆ ಜಮಾ ಆಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಮಾಧ್ಯಮ ದೈನಿಕ ಭಾಸ್ಕರಕ್ಕೆ ಅಜಾದ್ ಮಾಜಿ ಗೆಳತಿ ರೋಹಿಣಿ ಘವ್ರಿ ಅವರು ಹೇಳಿಕೆ ನೀಡಿದ್ದಾರೆ. ಅಜಾದ್ ಅವರ ಪಕ್ಷಕ್ಕೆ ಅನೇಕ ಜನ ಸಾಮಾನ್ಯರು ಹಣವನ್ನು ಕೊಡುಗೆ ನೀಡಿದ್ದಾರೆ. ಆದರೆ ಸಮಾಜದ ಎಷ್ಟು ಜನರಿಗೆ ಚಂದ್ರಶೇಖರ್ ಅಜಾದ್ ಅವರು ಹಾಗೂ ಅವರ ಪಕ್ಷವೂ ಈ ಹಣದಿಂದ ಸಹಾಯ ಮಾಡಿದೆ. ಶಿಕ್ಷಣ, ಆರೋಗ್ಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಅವರ ಪಕ್ಷದ ಮೇಲೆ ನಂಬಿಕೆ ಇಟ್ಟು ಬಡ ಹಾಗೂ ಅತೀ ಹಿಂದುಳಿದ ಜನರು ಕೂಡ, 20, 30 ಅಥವಾ 40 ಹೀಗೆ ಸಣ್ಣ ಸಣ್ಣ ಮೊತ್ತದ ಹಣವನ್ನು ಕೂಡ ಪಕ್ಷಕ್ಕೆ ದಾನ ಮಾಡಿದ್ದಾರೆ. ಓರ್ವ ಪಕ್ಷದ ಮುಖ್ಯಸ್ಥನಾಗಿ ಚಂದ್ರಶೇಖರ್ ಅಜಾದ್ ಅವರು ಸಾರ್ವಜನಿಕವಾಗಿ ಈ ಹಣವನ್ನು ಏಕೆ ಹಾಗೂ ಹೇಗೆ ಬಳಸಲಾಗಿದೆ . ದಾನ ನೀಡಿದವರ ಹಣ ಎಲ್ಲಿಗೆ ತಲುಪಿದೆ ಎಂಬ ಮಾಹಿತಿಯನ್ನು ನೀಡಬೇಕು ಎಂದು ರೋಹಿಣಿ ಆಗ್ರಹಿಸಿದ್ದಾರೆ.

ಗುರುಗ್ರಾಮದಲ್ಲಿರುವ ಅಜಾದ್ ಸಮಾಜ ಪಾರ್ಟಿಯ ಬ್ಯಾಂಕ್ ಪಾಸ್‌ಬುಕ್‌ನ ಪುಟವೊಂದನ್ನು ರೋಹಿಣಿ ಹಂಚಿಕೊಂಡಿದ್ದು, ಅದರಲ್ಲಿ ಪಕ್ಷದ ನೋಂದಾಯಿತ ವಿಳಾಸವನ್ನು ಸಿ ಬ್ಲಾಕ್, ಗೋಕುಲ್‌ಪುರ, ದೆಹಲಿ ಕಂಟೋನ್ಮೆಂಟ್ ಎಂಬ ಮಾಹಿತಿ ಇದೆ. ಅದರಂತೆ ಆ ಬ್ಯಾಂಕ್ ಖಾತೆಯಲ್ಲಿ 2.49 ಕೋಟಿ ಬ್ಯಾಲೆನ್ಸ್ ತೋರಿಸುತ್ತಿದೆ.

ಏಪ್ರಿಲ್‌ನ ಆರಂಭದಲ್ಲಿ ಈ ಖಾತೆಯಲ್ಲಿ 2.49 ಕೋಟಿ ರೂಪಾಯಿ ಇತ್ತು. ಆದರೆ ಏಪ್ರಿಲ್ 4 ಹಾಗೂ 5ರಂದು ಆರ್‌ಟಿಜಿಎಸ್ ಮೂಲಕ ಈ ಖಾತೆಯಿಂದ 22 ಲಕ್ಷ ರೂಪಾಯಿ ವಿತ್‌ ಡ್ರಾ ಆಗಿದೆ. ಹಾಗೆಯೇ 10 ಲಕ್ಷ ರೂಪಾಯಿ ಏಪ್ರಿಲ್ 4 ರಂದೇ ಮತ್ತೆ ಡೆಪಾಸಿಟ್ ಆಗಿದೆ. ಏಪ್ರಿಲ್ 2 ಮತ್ತು 5 ರ ನಡುವೆ,19 ರೂಪಾಯಿ, 20 ರೂಪಾಯಿ 500 ರಿಂದ 900 ರವರೆಗಿನ ಬಹು ಸಣ್ಣ ಮಟ್ಟದ ಹಣಗಳು RTGS, UPI ಮತ್ತು IMPS ಮೂಲಕ ಪಕ್ಷದ ಖಾತೆಗೆ ವಿಭಿನ್ನ ವ್ಯಕ್ತಿಗಳಿಂದ ಬಂದಿದೆ.

ಅಲ್ಲದೇ ಸಂಸದ ಚಂದ್ರಶೇಖರ್ ಆಜಾದ್ ಅವರಿಗೆ ಟೈಪ್ 8 ಬಂಗಲೆ ಹಂಚಿಕೆ ಮಾಡಿದ್ದನ್ನು ಅವರ ಮಾಜಿ ಗೆಳತಿ ಡಾ. ರೋಹಿಣಿ ಪ್ರಶ್ನಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸಂಸದರಾದ ಚಂದ್ರಶೇಖರ್ ಅವರಿಗೆ ಈ ಐಷಾರಾಮಿ ಬಂಗಲೆಯನ್ನು ನೀಡಲಾಗಿದೆ ಇದು ಬಿಜೆಪಿ ಅವರ ಪರವಾಗಿರುವುದನ್ನು ಸೂಚಿಸುತ್ತದೆ. ಅವರು ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ರೋಹಿಣಿ ದೂರಿದ್ದಾರೆ.

ಇದನ್ನೂ ಓದಿ: ನದಿ ಸಮೀಪ ಸುಸೈಡ್ ನೋಟ್ ಬರೆದಿಟ್ಟು ಅತ್ಯಾ*ಚಾರ ಆರೋಪಿ ಎಸ್ಕೇಪ್

ಡಾ. ರೋಹಿಣಿ ಅವರ ಪ್ರಕಾರ, ಕಳೆದ ವರ್ಷ ಡಿಸೆಂಬರ್ 20 ರಂದು ಲೋಕಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಧೀರಜ್ ಕುಮಾರ್ ಅವರು ಬಂಗಲೆಯನ್ನು ಚಂದ್ರಶೇಖರ್ ಅಜಾದ್ ಅವರಿಗೆ ಮಂಜೂರು ಮಾಡಿದ್ದರು. ಕಳೆದ ವರ್ಷದಿಂದ ಬಂಗಲೆಯನ್ನು ಹೇಗೆ ಬಳಸಲಾಗಿದೆ, ಯಾರು ಅಲ್ಲಿ ವಾಸಿಸುತ್ತಿದ್ದಾರೆ ಮತ್ತು ಪಕ್ಷ ಅಥವಾ ಸಮಾಜದ ಎಷ್ಟು ಜನರು ಇದರಿಂದ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುವಂತೆ ಅವರು ಚಂದ್ರಶೇಖರ್ ಅವರನ್ನು ಒತ್ತಾಯಿಸಿದ್ದಾರೆ.

ಬಂಗಲೆ ಐಷಾರಾಮಿ ಸಂಕೇತವಾಗಿ ಮಾರ್ಪಟ್ಟಿದೆಯೇ ಎಂದು ಪಕ್ಷ ಮತ್ತು ಸಮಾಜದ ಸದಸ್ಯರು ಅವರನ್ನು ಕೇಳಬೇಕು. ವಿರೋಧ ಪಕ್ಷದಲ್ಲಿದ್ದುಕೊಂಡು ಅಧಿಕಾರದ ಸೌಕರ್ಯಗಳನ್ನು ಅನುಭವಿಸುವವರನ್ನು ದಲ್ಲಾಳಿಗಳು ಎಂದು ಕರೆಯಲಾಗುತ್ತದೆ. ನಿಜವಾಗಿಯೂ ಅಧಿಕಾರದ ವಿರುದ್ಧ ಹೋರಾಡುವವರು ಜೈಲು, ಇಡಿ ದಾಳಿಗಳು ಮತ್ತು ಹೋರಾಟವನ್ನು ಎದುರಿಸುತ್ತಾರೆ. ಟೈಪ್ 8 ಬಂಗಲೆಗಳು, ಕೋಟ್ಯಂತರ ನಿಧಿ ಮತ್ತು ವೈಪ್ಲಸ್ ಭದ್ರತೆಯಲ್ಲಿ ಅಲ್ಲ ಎಂದೂ ರೋಹಿಣಿ ದೂರಿದ್ದಾರೆ.

ಸುಮಾರು 15 ದಿನಗಳ ಹಿಂದೆ, ಡಾ. ರೋಹಿಣಿ ಘವ್ರಿ ಅವರು ಸಂಸದ ಚಂದ್ರಶೇಖರ್ ಆಜಾದ್ ಅವರಿಗೆ ಸವಾಲು ಹಾಕಿದ್ದರು. ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆಯಲಿರುವ ಸಮಾವೇಶಕ್ಕೆ ಸಂಬಂಧಿಸಿದಂತೆ ಸವಾಲು ಹಾಕಿದ ರೋಹಿಣಿ, ಈ ಕಾರ್ಯಕ್ರಮಕ್ಕೆ ಒಂದು ದಿನ ಮೊದಲು ಎಕ್ಸ್‌ನಲ್ಲಿ ಹೀಗೆ ಬರೆದಿದ್ದರು. ಈಗ ನಾನು ಕೂಡ ಸಮಾವೇಶಕ್ಕೆ ಸೇರುತ್ತಿದ್ದೇನೆ. ಏನಾಗುತ್ತದೆ ಎಂದು ನೋಡೋಣ. ಚಂದ್ರಶೇಖರ್ ಅವರೇ ನನಗೆ ಭದ್ರತೆ ಒದಗಿಸುತ್ತಾರೆ, ಏಕೆಂದರೆ ನನಗೆ ಒಂದು ಗೀರು ಬಿದ್ದರೆ ಅವರು ಜೈಲಿಗೆ ಹೋಗುತ್ತಾರೆ ಎಂದು ಆಕೆ ಬರೆದುಕೊಂಡಿದ್ದಳು. ಆಕೆಯ ಈ ಸವಾಲಿನಿಂದಾಗಿ ಈ ಸಮಾವೇಶಕ್ಕೆ ತೀವ್ರ ಭದ್ರತೆ ನೀಡಲಾಗಿತ್ತು. ಆದರೆ ರೋಹಿಣಿ ಸಮಾವೇಶಕ್ಕೆ ಹಾಜರಾಗಿರಲಿಲ್ಲ.

ಇದನ್ನೂ ಓದಿ: ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು

ಡಾ. ರೋಹಿಣಿ ಘಾವ್ರಿ ಮತ್ತು ಸಂಸದ ಚಂದ್ರಶೇಖರ್ ಆಜಾದ್ ನಡುವೆ ನಿರಂತರ ವಾದ ವಿವಾದ ನಡೆಯುತ್ತಿದೆ. ರೋಹಿಣಿ, ಚಂದ್ರಶೇಖರ್ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ವಿವಾಹದ ಸುಳ್ಳು ಭರವಸೆಗಳ ಅಡಿಯಲ್ಲಿ ಲೈಂಗಿಕ ಶೋಷಣೆ ಮಾಡಿದ್ದಾರೆ. ವೈವಾಹಿಕ ಸ್ಥಿತಿಯನ್ನು ಮರೆಮಾಚಿದ್ದಾರೆ. ವಂಚನೆ ಪ್ರಕರಣಗಳ ಮೂಲಕ ತನ್ನ ವೃತ್ತಿ ಜೀವನವನ್ನು ಹಾಳುಮಾಡಿದ್ದಾರೆ ತನಗೆ ಆತ್ಮ*ಹತ್ಯೆಗೆ ಪ್ರೇರಣೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.