ವಿರಾಟ್ ಕೊಹ್ಲಿ ಹಾಗೂ ಏಕನಾಥ್ ಶಿಂಧೆ ಲಂಡನ್‌ನಲ್ಲಿ ದಿಢೀರ್ ಭೇಟಿಯಾಗಿದ್ದಾರೆ. ಇಬ್ಬರು ಗಣ್ಯರ ಭೇಟಿ ಭಾರೀ ಕುತೂಹಲ ಮೂಡಿಸಿದೆ. ಇನ್ನು, ಕೊಹ್ಲಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನ್ನಾಡಿರುವ ಏಕನಾಥ್ ಶಿಂಧೆ.. ಕೊಹ್ಲಿಯನ್ನ ಗುಣಗಾನ ಮಾಡಿದರು.
ಟೀಂ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ವಿಶೇಷ ಅಂದ್ರೆ ಇವರಿಬ್ಬರ ಭೇಟಿ ನಡೆದಿರೋದು ಮಾಹಾರಾಷ್ಟ್ರದಲ್ಲಿ ಅಲ್ಲ, ಬದಲಾಗಿ ಲಂಡನ್‌ನಲ್ಲಿ!
ಭೇಟಿ ವೇಳೆ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಕ್ರೀಡೆ, ಮೂಲಸೌಕರ್ಯ ಮತ್ತು ರಾಜ್ಯ ಸರ್ಕಾರ ಆರಂಭಿಸಿರುವ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೊಹ್ಲಿ ಭೇಟಿ ಬಳಿಕ ANIಗೆ ಪ್ರತಿಕ್ರಿಯಿಸಿರುವ ಏಕನಾಥ್ ಶಿಂಧೆ.. ವಿರಾಟ್ ಕೊಹ್ಲಿ ಅವರು ವಾಸ್ತವಿಕ ವ್ಯಕ್ತಿ ಎಂದು ಬಣ್ಣಿಸಿದರು.
ಏನಂದ್ರು ಶಿಂಧೆ?
ನಮ್ಮ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ನಾನು ಇಲ್ಲಿದ್ದೇನೆ ಎಂದು ತಿಳಿದಾಗ ಅವರು ನನ್ನನ್ನು ಸೌಹಾರ್ದಯುತ ಭೇಟಿಗಾಗಿ ಬಂದರು. ದೇಶದ ಶ್ರೇಷ್ಠ ಕ್ರಿಕೆಟರ್ ಕೊಹ್ಲಿ ಅವರದ್ದು ತುಂಬಾ ಸರಳ ವ್ಯಕ್ತಿತ್ವ. ಅವರ ಸರಳತೆ ನೋಡಿ ನನಗೆ ತುಂಬಾ ಖುಷಿ ಆಯಿತು.
ಅಂದ್ಹಾಗೆ ನಾನು ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿರೋದು. ಅವರ ಜೊತೆಗಿನ ಸಂಭಾಷಣೆಯಿಂದ ತುಂಬಾ ಖುಷಿ ಆಗಿದೆ. ನನಗೆ ದೊರೆತ ಪ್ರಶಸ್ತಿ ಬಗ್ಗೆ ಇಬ್ಬರು ಚರ್ಚಿಸಿದೇವು. ಮಹಾರಾಷ್ಟ್ರದಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಕೊಹ್ಲಿಗೆ ತಿಳಿಸಿದೆ. ರಾಜ್ಯದ ಮೂಲ ಸೌಕರ್ಯಗಳ ಬಗ್ಗೆ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರದ ಅಭಿವೃದ್ಧಿ ಅಭೂತಪೂರ್ವವಾಗಿದೆ ಎಂದು ಅವರೇ ತಿಳಿಸಿದರು ಎಂದರು.
ನಮ್ಮ ಸರ್ಕಾರದ ಭವಿಷ್ಯದ ಯೋಜನೆಗಳು, ಪ್ರಸ್ತುತ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳಾದ ವಿಮಾನ ನಿಲ್ದಾಣದ ಬಳಿಯ ಮೂರನೇ ಮುಂಬೈ ಅಭಿವೃದ್ಧಿ, ಅಟಲ್ ಸೇತು, ಬಾಳಾಸಾಹೇಬ್ ಠಾಕ್ರೆ ಸಮೃದ್ಧಿ ಮಹಾಮಾರ್ಗ್, ಮೆಟ್ರೋ ಮತ್ತು ಶಾಲೆಗಳು ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಉಪಕ್ರಮಗಳನ್ನು ಹಂಚಿಕೊಂಡೆ ಎಂದು ಏಕನಾಥ್ ಶಿಂಧೆ ತಿಳಿಸಿದ್ದಾರೆ.
ನಾನು ವಿರಾಟ್ ಕೊಹ್ಲಿ ಜೊತೆ ಎಲ್ಲಾ ವಿಚಾರಗಳನ್ನೂ ಚರ್ಚಿಸಿದ್ದೇನೆ. ಅದರಲ್ಲಿ ಮಹಾರಾಷ್ಟ್ರಕ್ಕಾಗಿ ನಾವು ಮಾಡುತ್ತಿರುವ ಮೂಲ ಸೌಕರ್ಯಗಳ ಬಗ್ಗೆ ಮಾತಾಡಿದ್ದನ್ನು ಹೈಲೈಟ್ ಮಾಡಿದ್ದೇನೆ. ನಮ್ಮ ರಾಜ್ಯವು ಪ್ರಸ್ತುತ ಜಿಡಿಪಿ, ಸ್ಟಾರ್ಟ್‌ಅಪ್‌ಗಳು, ಮೂಲಸೌಕರ್ಯ ಮತ್ತು ಎಫ್‌ಡಿಐನಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದನ್ನು ಕೇಳಿ ವಿರಾಟ್ ತುಂಬಾ ಸಂತೋಷಪಟ್ಟರು ಎಂದಿದ್ದಾರೆ.
ಲಂಡನ್‌ನಲ್ಲೇ ಹೆಚ್ಚು ನೆಲೆಯೂರಿರುವ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮ್ಯಾಚ್‌ಗಳಿದ್ದಾಗ, ಐಪಿಎಲ್ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚು ಕಾಣಿಸಿಕೊಳ್ತಾರೆ. ಈ ವರ್ಷ ಅವರು ಒಟ್ಟು ಆರು ಏಕದಿನ ಪಂದ್ಯಗಳನ್ನ ಆಡಿದ್ದಾರೆ. ಆರು ಪಂದ್ಯಗಳಲ್ಲಿ 64.00 ಸರಾಸರಿಯಲ್ಲಿ ರನ್‌ಗಳಿಸಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 384 ರನ್ ಗಳಿಸಿದ್ದಾರೆ. ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ನಡೆದಿತ್ತು. ಈ ವೇಳೆ ಅವರು ಎರಡು ಅರ್ಧಶತಕಗಳು ಸೇರಿದಂತೆ ಮೂರು ಇನ್ನಿಂಗ್ಸ್‌ಗಳಲ್ಲಿ 144 ರನ್ ಗಳಿಸಿದರು, ಅವರ ಅತ್ಯುತ್ತಮ ಸ್ಕೋರ್ 74 ರನ್ ಆಗಿದೆ.
ಇನ್ನು, ಸೆಪ್ಟೆಂಬರ್ 27 ರಿಂದ ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ಏಕದಿನ ಸರಣಿ ನಡೆಯಲಿದೆ. ಈ ವೇಳೆ ಕೊಹ್ಲಿ 100 ಶತಕಗಳ ದಾಖಲೆಯನ್ನು ಬೆನ್ನಟ್ಟಲಿದ್ದಾರೆ. ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.


