ಟಾಲಿವುಡ್ ನಟಿ ಆಮಣಿ ಇತ್ತೀಚಿನ ಸಂದರ್ಶನದಲ್ಲಿ ಸೌಂದರ್ಯ ಕುಟುಂಬದೊಂದಿಗಿನ ಆತ್ಮೀಯ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ಸೌಂದರ್ಯ ತಂದೆ ಆಮಣಿಗೆ ನೀಡಿದ್ದ ಮದುವೆ ಪ್ರಪೋಸಲ್‌ ಬಗ್ಗೆಯೂ ನಟಿ ನೆನಪಿಸಿಕೊಂಡಿದ್ದಾರೆ.

ಟಾಲಿವುಡ್‌ನ ಹಿರಿಯ ನಟಿ ಆಮನಿ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಾಲದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಜನಪ್ರಿಯತೆ ಗಳಿಸಿದ್ದ ಆಮನಿ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜರ್ನಿ ಹಾಗೂ ವೈಯಕ್ತಿಕ ಬದುಕಿನ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ದಿವಂಗತ ನಟಿ ಸೌಂದರ್ಯ ಅವರ ಕುಟುಂಬದೊಂದಿಗೆ ತಮಗಿದ್ದ ಆತ್ಮೀಯ ಬಾಂಧವ್ಯದ ಬಗ್ಗೆಯೂ ಮಾತನಾಡಿದ್ದಾರೆ.

ಅಷ್ಟೇ ಅಲ್ಲ, ಸೌಂದರ್ಯ ಅವರ ತಂದೆ ತಮ್ಮನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಬಯಸಿದ್ದರು ಎಂಬ ಅಚ್ಚರಿಯ ಸಂಗತಿಯನ್ನೂ ಆಮನಿ ಬಹಿರಂಗಪಡಿಸಿದ್ದಾರೆ. ಸೌಂದರ್ಯ ಅವರ ಸಹೋದರ ಅಮರ್ ಅವರನ್ನು ಮದುವೆಯಾಗುವಂತೆ ಅವರ ತಂದೆ ತಮ್ಮನ್ನು ಕೇಳಿದ್ದರಂತೆ. ಆ ಸಂದರ್ಭದಲ್ಲಿ ನಡೆದ ಸಂಭಾಷಣೆಯನ್ನೂ ಆಮನಿ ನೆನಪಿಸಿಕೊಂಡಿದ್ದಾರೆ.

ಸೌಂದರ್ಯ ಕುಟುಂಬದ ಜೊತೆ ಆಮನಿಗೆ ಅಷ್ಟೊಂದು ಆತ್ಮೀಯತೆ!

ಸೌಂದರ್ಯ ಹಾಗೂ ಅವರ ಕುಟುಂಬದೊಂದಿಗೆ ತಮಗಿದ್ದ ಆತ್ಮೀಯ ಸಂಬಂಧದ ಬಗ್ಗೆ ಮಾತನಾಡಿದ ಆಮನಿ, ಸೌಂದರ್ಯ ಅವರ ಕುಟುಂಬ ಶೂಟಿಂಗ್‌ಗೆ ಬಂದಾಗ ನಾನು ಅವರ ಜೊತೆಯೇ ಹೆಚ್ಚು ಸಮಯ ಕಳೆಯುತ್ತಿದ್ದೆ. ನನ್ನ ಶಾಟ್ ಮುಗಿದ ಕೂಡಲೇ ಅವರ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದೆ. ಅವರ ಕುಟುಂಬದ ಒಬ್ಬ ಸದಸ್ಯೆಯಂತೆಯೇ ಬೆರೆತುಹೋಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಹೊರಾಂಗಣ ಚಿತ್ರೀಕರಣಕ್ಕೆ ಹೋದಾಗ ಸೌಂದರ್ಯ ಅವರ ರೂಮ್‌ನಲ್ಲೇ ಅವರ ಪಕ್ಕದಲ್ಲಿ ಮಲಗುತ್ತಿದ್ದೆ. ಇಬ್ಬರೂ ಒಟ್ಟಿಗೆ ಊಟ ಮಾಡುತ್ತಿದ್ದೆವು. ಸೌಂದರ್ಯ ಅವರ ತಂದೆಯನ್ನೂ ನಾನು ‘ಅಪ್ಪಾಜಿ’ ಎಂದೇ ಕರೆಯುತ್ತಿದ್ದೆ ಎಂದು ಆಮನಿ ಹೇಳಿದ್ದಾರೆ.

ನನ್ನ ಮಗನಿಗೆ ಕೊಟ್ಟು ಮದುವೆ ಮಾಡ್ತೀರಾ?

ಸೌಂದರ್ಯ ಅವರ ತಂದೆ ಒಂದು ಸಂದರ್ಭದಲ್ಲಿ ತಮ್ಮನ್ನು ಸೊಸೆಯನ್ನಾಗಿ ಮಾಡಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ್ದರಂತೆ. ನನ್ನನ್ನು ಅವರ ಮಗ ಅಮರ್‌ಗೆ ಕೊಟ್ಟು ಮದುವೆ ಮಾಡುತ್ತೀರಾ ಎಂದು ಸೌಂದರ್ಯ ಅವರ ತಂದೆ ಕೇಳಿದ್ದರು. ಮೊದಲಿಗೆ ಅವರು ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡಿದ್ದೆ. ಆಗ ನಾನು, ‘ಸರ್‌, ನಾನು ಹೀರೋಯಿನ್‌ ಅಲ್ವಾ, ಸಿನಿಮಾದಲ್ಲೇ ಇರುತ್ತೇನೆ. ನನ್ನನ್ನು ಹೇಗೆ ಮದುವೆ ಮಾಡಿಕೊಳ್ಳುತ್ತೀರಿ?’ ಎಂದು ಕೇಳಿದೆ.

ಅದಕ್ಕೆ ಅವರು, ‘ನಮ್ಮ ಮಗಳೂ ಸಿನಿಮಾದಲ್ಲೇ ಇದ್ದಾಳಲ್ಲಮ್ಮಾ, ಅದರಲ್ಲಿ ತಪ್ಪೇನಿದೆ?’ ಎಂದು ಹೇಳಿದರು ಎಂದು ಆಮನಿ ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಹಿರಿಯ ನಟಿ ಶಕುಂತಲಾ ಕೂಡ ಅಲ್ಲಿಯೇ ಇದ್ದರು ಎಂದು ಆಮನಿ ತಿಳಿಸಿದ್ದಾರೆ. ಆದರೆ ಈ ವಿಚಾರದ ಬಗ್ಗೆ ತಾವು ಸೌಂದರ್ಯ ಅವರೊಂದಿಗೆ ಎಂದಿಗೂ ಚರ್ಚಿಸಿರಲಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಮದುವೆಯಾಗಿದ್ದರೆ ನಾನೂ ವಿಮಾನದಲ್ಲೇ ಹೋಗುತ್ತಿದ್ದೆನೇನೋ!

ಸೌಂದರ್ಯ ನಿಧನದ ಬಳಿಕ ಒಮ್ಮೆ ಶಕುಂತಲಾ ಅವರನ್ನು ಭೇಟಿಯಾದಾಗ, ನಿನ್ನನ್ನು ಸೌಂದರ್ಯ ಅವರ ತಂದೆ ಕೇಳಿದ್ದರು ಅಲ್ವಾ? ಎಂದು ನೆನಪಿಸಿದ್ದರಂತೆ. ಅದಕ್ಕೆ ತಾನು, ಅಮ್ಮಾ, ನಾನು ಅಲ್ಲೇ ಇದ್ದೆನಲ್ಲಾ. ಅದನ್ನು ಹೇಗೆ ಮರೆಯಲು ಸಾಧ್ಯ? ಎಂದು ಹೇಳಿದ್ದಾಗಿ ಆಮನಿ ತಿಳಿಸಿದ್ದಾರೆ. ಒಂದು ವೇಳೆ ನಾನು ಅಮರ್ ಅವರನ್ನು ಮದುವೆಯಾಗಿದ್ದರೆ, ನಾನೂ ಆ ವಿಮಾನದಲ್ಲೇ ಹೋಗುತ್ತಿದ್ದೆನೇನೋ ಎಂದು ತಾನು ಹೇಳಿದ್ದಾಗ, ಶಕುಂತಲಾ ಅವರು, ಏಕೆ ಹಾಗೆ ಯೋಚಿಸುತ್ತೀಯಾ? ನಿನ್ನ ಮಾಂಗಲ್ಯ ಬಲ ಗಟ್ಟಿಯಾಗಿದ್ದರೆ ಅವರು ಬದುಕಿರುತ್ತಿದ್ದರೇನೋ ಎಂದು ಹೇಳಿದ್ದರು ಎಂದು ಆಮನಿ ನೆನಪಿಸಿಕೊಂಡಿದ್ದಾರೆ.

ನಾವು ನಾಲ್ಕು ಜನ ನಾಲ್ಕು ಪಿಲ್ಲರ್‌ಗಳಂತೆ ಇದ್ದೆವು

ಸೌಂದರ್ಯ ಅವರ ತಂದೆ ನಿಧನರಾದ ಸಂದರ್ಭದಲ್ಲಿ ನಡೆದ ಘಟನೆಯನ್ನೂ ಆಮನಿ ಭಾವುಕರಾಗಿ ಹಂಚಿಕೊಂಡಿದ್ದಾರೆ. ಸೌಂದರ್ಯ ನನಗೆ ಫೋನ್ ಮಾಡಿ, ‘ಅಪ್ಪ ಹೋಗಿಬಿಟ್ಟರು, ಬಾ’ ಎಂದು ತುಂಬಾ ಅತ್ತಿದ್ದರು. ‘ನಾವು ಅಮ್ಮ, ನಾನು, ಅಣ್ಣ ಮತ್ತು ಅಪ್ಪ ನಾಲ್ಕು ಪಿಲ್ಲರ್‌ಗಳಂತೆ ಇದ್ದೆವು. ಈಗ ಒಂದು ಪಿಲ್ಲರ್ ಹೋಗಿದೆ’ ಎಂದು ಹೇಳಿದ್ದರು ಎಂದು ಆಮನಿ ತಿಳಿಸಿದ್ದಾರೆ. ಆ ಸಮಯದಲ್ಲಿ ತಾವು ಕೂಡ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಸೌಂದರ್ಯ ತಮ್ಮ ವೈಯಕ್ತಿಕ ವಿಚಾರಗಳನ್ನೆಲ್ಲ ಹೇಳಿಕೊಳ್ಳುತ್ತಿದ್ದರು

ಸೌಂದರ್ಯ ತಮ್ಮೊಂದಿಗೆ ತುಂಬಾ ಆತ್ಮೀಯವಾಗಿದ್ದರು ಎಂದು ಆಮನಿ ಹೇಳಿದ್ದಾರೆ. ಸೌಂದರ್ಯ ತಮ್ಮ ವೈಯಕ್ತಿಕ ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ತಾವೂ ಕೂಡ ತಮ್ಮ ಪರ್ಸನಲ್ ವಿಷಯಗಳನ್ನು ಸೌಂದರ್ಯ ಅವರೊಂದಿಗೆ ಹೇಳಿಕೊಳ್ಳುತ್ತಿದ್ದೆ ಎಂದು ತಿಳಿಸಿದ್ದಾರೆ. ನಾನು ಬೆಂಗಳೂರಿಗೆ ಹೋದಾಗ ಸೌಂದರ್ಯ ಫ್ರೀ ಇದ್ದರೆ ಮನೆಗೆ ಬಾ ಎಂದು ಕರೆಯುತ್ತಿದ್ದರು. ಆದರೆ ಸಮಯ ಹೊಂದಾಣಿಕೆಯಾಗುತ್ತಿರಲಿಲ್ಲ ಎಂದು ಆಮನಿ ನೆನಪಿಸಿಕೊಂಡಿದ್ದಾರೆ. ಸೌಂದರ್ಯ ಅವರ ತಂದೆಯ ನಿಧನದ ಬಳಿಕ ಅವರು ಸ್ವತಃ ಒಂದು ಆರ್ಟ್ ಫಿಲ್ಮ್ ಕೂಡ ಮಾಡಿದ್ದರು. ಆ ಸಿನಿಮಾದ ಚಿತ್ರೀಕರಣ ಹಾಸನ, ಸೋಮನಾಥಪುರ ಸೇರಿದಂತೆ ಹಲವು ಸ್ಥಳಗಳಲ್ಲಿ ನಡೆದಿತ್ತು ಎಂದು ಆಮನಿ ಹೇಳಿದ್ದಾರೆ.

ಸೌಂದರ್ಯ ಮನೆಯಲ್ಲೊಂದು ಮಗುವಿನಂತೆ ಇದ್ದರು

ಸೌಂದರ್ಯ ಅವರ ವೃತ್ತಿಜೀವನದ ಹಲವು ನಿರ್ಧಾರಗಳನ್ನು ಆರಂಭದಲ್ಲಿ ಅವರ ತಂದೆ ಹಾಗೂ ನಂತರ ಸಹೋದರ ಅಮರ್ ತೆಗೆದುಕೊಳ್ಳುತ್ತಿದ್ದರು ಎಂದು ಆಮನಿ ಹೇಳಿದ್ದಾರೆ. ಸೌಂದರ್ಯ ಮನೆಯವರ ಮಾತನ್ನು ತುಂಬಾ ಗೌರವಿಸುತ್ತಿದ್ದರು. ಮನೆಯವರು ಏನು ಹೇಳಿದರೂ ಒಂದು ಚಿಕ್ಕ ಮಗುವಿನಂತೆ ಕೇಳುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಸೌಂದರ್ಯ ನಿಧನರಾದ ಸುಮಾರು ಒಂದು ತಿಂಗಳ ಬಳಿಕ ತಾವು ಅವರ ಮನೆಗೆ ಹೋಗಿದ್ದೆ ಎಂದು ಆಮನಿ ಹೇಳಿದ್ದಾರೆ. ಮನೆಯ ಪ್ರವೇಶದ್ವಾರದಲ್ಲೇ ಸೌಂದರ್ಯ, ಅವರ ತಂದೆ ಹಾಗೂ ಸಹೋದರ ಅಮರ್ ಅವರ ದೊಡ್ಡ ಫೋಟೋಗಳನ್ನು ನೋಡಿದಾಗ ತುಂಬಾ ನೋವಾಯಿತು ಎಂದು ಭಾವುಕರಾಗಿದ್ದಾರೆ.

ಸೌಂದರ್ಯ ಸಂಪಾದಿಸಿದ ಆಸ್ತಿಯನ್ನು ಅನುಭವಿಸಲಿಲ್ಲ

ಸೌಂದರ್ಯ ಅವರ ತಾಯಿಯ ಸ್ಥಿತಿಯನ್ನು ಕಂಡು ತಮಗೆ ತುಂಬಾ ನೋವಾಗಿತ್ತು ಎಂದು ಆಮನಿ ಹೇಳಿದ್ದಾರೆ. ಅವರ ತಾಯಿ ಒಬ್ಬರೇ ಕುಳಿತುಕೊಂಡಿದ್ದರು. ಗಂಡ, ಇಬ್ಬರು ಮಕ್ಕಳು, ಎಲ್ಲರನ್ನೂ ಕಳೆದುಕೊಂಡ ತಾಯಿ ಅವರು. ಇದನ್ನೆಲ್ಲ ಹೇಗೆ ಸಹಿಸಿಕೊಂಡರೋ ಎಂದು ತುಂಬಾ ನೋವಾಯಿತು ಎಂದು ಆಮನಿ ಹೇಳಿದ್ದಾರೆ. ಸೌಂದರ್ಯ ತಮ್ಮ ಜೀವನದಲ್ಲಿ ಸಾಕಷ್ಟು ಆಸ್ತಿ-ಪಾಸ್ತಿ ಸಂಪಾದಿಸಿದ್ದರು. ಆದರೆ ಅವುಗಳನ್ನು ಅನುಭವಿಸುವ ಅವಕಾಶ ಅವರಿಗೆ ಸಿಗಲಿಲ್ಲ ಎಂದು ಆಮನಿ ವಿಷಾದಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಸೌಂದರ್ಯ ತುಂಬಾ ಇಷ್ಟಪಟ್ಟು ಕಟ್ಟಿಸಿಕೊಂಡಿದ್ದ ದೊಡ್ಡ ಮನೆಯೀಗ ಖಾಲಿ ಖಾಲಿಯಾಗಿ ಕಾಣುತ್ತದೆ. ಅದನ್ನು ನೋಡಿದಾಗ ತುಂಬಾ ನೋವಾಗುತ್ತದೆ ಎಂದು ಅವರು ಹೇಳಿದ್ದಾರೆ. ಸೌಂದರ್ಯ ನಟಿಯಾಗಿ ನೂರು ಸಿನಿಮಾಗಳನ್ನು ಪೂರ್ಣಗೊಳಿಸಿದ್ದರು. ಅವರು ಅತ್ಯುತ್ತಮ ಕಲಾವಿದೆ, ಅಪಾರ ಪ್ರತಿಭೆ ಹೊಂದಿದ್ದವರು ಹಾಗೂ ಅಷ್ಟೇ ಸುಂದರವಾಗಿದ್ದರು. ಆದರೆ ದುರದೃಷ್ಟವಶಾತ್ ಅವರ ಜೀವನದಲ್ಲಿ ವಿಧಿ ಬೇರೆಯದೇ ಬರೆದಿತ್ತು ಎಂದು ಆಮನಿ ಭಾವುಕರಾಗಿ ಹೇಳಿದ್ದಾರೆ.