ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಥಿಯೇಟರ್ ಬಳಿಕ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಸಿನಿಮಾ ಯಾವಾಗ, ಎಲ್ಲಿ ನೋಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.
ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ. ಭಾರೀ ನಿರೀಕ್ಷೆಗಳೊಂದಿಗೆ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುವ ದಿನಾಂಕವೂ ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗಿದೆ. ಹಾಗಾದರೆ ‘ಟಾಕ್ಸಿಕ್’ ಸಿನಿಮಾ ಯಾವಾಗ, ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ? ಇಲ್ಲಿದೆ ಮಾಹಿತಿ.
ಸೆಪ್ಟೆಂಬರ್ 25ರಿಂದ ಒಟಿಟಿಯಲ್ಲಿ ‘ಟಾಕ್ಸಿಕ್’?
‘ಕೆಜಿಎಫ್’ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರೀ ಹೈಪ್‌ನೊಂದಿಗೆ ಪ್ರೇಕ್ಷಕರ ಮುಂದೆ ಬಂದಿತ್ತು. ಗೀತೂ ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಿರಲಿಲ್ಲ.
ವರದಿಗಳ ಪ್ರಕಾರ, ಇದೀಗ ಸೆಪ್ಟೆಂಬರ್ 25ರಿಂದ ‘ಟಾಕ್ಸಿಕ್’ ಸಿನಿಮಾ ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡವಾಗಲಿ ಅಥವಾ ಜೀ5 ಆಗಲಿ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.
ಥಿಯೇಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ
ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ‘ಟಾಕ್ಸಿಕ್’ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾದ ಕಥೆ ಮತ್ತು ನಿರೂಪಣೆ ನಿಧಾನಗತಿಯಲ್ಲಿ ಸಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿಬಂದಿತ್ತು. ಯಶ್ ಅವರ ಮಾಸ್ ಎಲಿವೇಷನ್‌ಗಳಿಗಷ್ಟೇ ಹೆಚ್ಚಿನ ಒತ್ತು ನೀಡಲಾಗಿದೆ ಹಾಗೂ ಸಿನಿಮಾದಲ್ಲಿನ ನಾಯಕಿಯರ ಪಾತ್ರಗಳು ಗ್ಲಾಮರ್‌ಗೆ ಸೀಮಿತವಾಗಿವೆ ಎಂಬ ಚರ್ಚೆಯೂ ನಡೆದಿತ್ತು.
ಇನ್ನು ನಿರ್ದೇಶಕಿ ಗೀತೂ ಮೋಹನ್‌ದಾಸ್ ಕೂಡ ಸಿನಿಮಾದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ತಾವು ಆರಂಭದಲ್ಲಿ ಬರೆದುಕೊಂಡ ಕಥೆ, ಚಿತ್ರೀಕರಣದ ವೇಳೆ ರೂಪುಗೊಂಡ ಸಿನಿಮಾ ಹಾಗೂ ಎಡಿಟಿಂಗ್ ಟೇಬಲ್‌ನಲ್ಲಿ ಅಂತಿಮವಾಗಿ ಸಿದ್ಧವಾದ ಸಿನಿಮಾ, ಈ ಮೂರೂ ಒಂದೇ ಆಗಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದರು.
1950-60ರ ದಶಕದ ಗೋವಾ ಹಿನ್ನೆಲೆ
‘ಟಾಕ್ಸಿಕ್’ ಸಿನಿಮಾದ ಕಥೆ ಸ್ವಾತಂತ್ರ್ಯಾನಂತರದ 1950-60ರ ದಶಕದ ಗೋವಾ ಹಿನ್ನೆಲೆಯಲ್ಲಿ ಸಾಗುತ್ತದೆ. ಆ ಕಾಲಘಟ್ಟದಲ್ಲಿ ಹೆಚ್ಚಾಗಿದ್ದ ಅಪರಾಧ, ಡ್ರಗ್ಸ್ ದಂಧೆ ಹಾಗೂ ಗ್ಯಾಂಗ್‌ಗಳ ನಡುವಿನ ಸಂಘರ್ಷವನ್ನು ಕಥೆಯ ಪ್ರಮುಖ ಅಂಶವನ್ನಾಗಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಯಶ್ ಒಬ್ಬ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತನ್ನ ನಿಷ್ಠೆಗಳು ಮತ್ತು ಬದುಕಿನ ನಡುವಿನ ಸಂಘರ್ಷದಲ್ಲಿ ಸಿಲುಕುವ ವ್ಯಕ್ತಿಯಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಆ್ಯಕ್ಷನ್, ಗ್ಯಾಂಗ್‌ಸ್ಟರ್ ಡ್ರಾಮಾ ಹಾಗೂ ಮಾಸ್ ಎಲಿಮೆಂಟ್‌ಗಳೊಂದಿಗೆ ಸಿನಿಮಾ ಮೂಡಿಬಂದಿದೆ.
ಇನ್ನು ಯಶ್‌ಗೆ ಜೋಡಿಯಾಗಿ ನಯನತಾರಾ ನಟಿಸಿದ್ದು, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹೀಗಾಗಿ ಥಿಯೇಟರ್‌ನಲ್ಲಿ ‘ಟಾಕ್ಸಿಕ್’ ಸಿನಿಮಾ ಮಿಸ್ ಮಾಡಿಕೊಂಡಿರುವವರಿಗೆ ಒಟಿಟಿಯಲ್ಲಿ ಮತ್ತೊಮ್ಮೆ ಈ ಚಿತ್ರವನ್ನು ನೋಡುವ ಅವಕಾಶ ಸಿಗಲಿದೆ. ಸೆಪ್ಟೆಂಬರ್ 25ರ ಒಟಿಟಿ ಬಿಡುಗಡೆಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


