ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರಕ್ಕೆ ವೀಕ್ಷಕರಿಂದ ಮತ್ತು ಸುಧಾ ಮೂರ್ತಿ ಅವರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಶಾನ್ವಿ, ನಿರೂಪ್ ಮತ್ತು ಪೃಥ್ವಿ ನಟನೆಯ ಈ ಚಿತ್ರವು ಯಾವುದೇ ಹಿಂಸಾಚಾರವಿಲ್ಲದ ಸುಂದರ ಕೌಟುಂಬಿಕ ಕಥೆಯಾಗಿದೆ. ಇದು ಸಹನಾ ವಿಜಯಕುಮಾರ್ ಅವರ 'ಕ್ಷಮೆ' ಕಾದಂಬರಿ ಆಧಾರಿತವಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕಾ ಅಮೆರಿಕಾ 2 ಸಿನಿಮಾ ಸೆಪ್ಟೆಂಬರ್ 11 ರಂದು ರಿಲೀಸ್ ಆಗಿದೆ. ವೀಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಭಾರೀ ಚರ್ಚೆ ಆಗ್ತಿದೆ.

ಏನಂದ್ರು ಸುಧಾ ಮೂರ್ತಿ?

ಈ ಚಿತ್ರ ಸಾಕಷ್ಟು ಸದ್ದು ಮಾಡ್ತಿದ್ದು, ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರು ಚಿತ್ರವನ್ನು ವೀಕ್ಷಿಸಿ ಒಳ್ಳೆಯ ಮಾತುಗಳನ್ನ ಆಡಿದ್ದಾರೆ. ಸಿನಿಮಾವನ್ನು ಇಷ್ಟು ಚೆನ್ನಾಗಿ ತೋರಿಸಿದ್ದನ್ನ ನಾನು ಎಲ್ಲಿಯೂ ನೋಡಿಲ್ಲ. ಕತೆಯೂ ಬಹಳ ಚೆನ್ನಾಗಿದೆ. ಅಮೆರಿಕಾ ಅಮೆರಿಕಾ 2 ಸಿನಿಮಾವನ್ನು ಒಂದು ಸಂಸಾರ ಕುಟುಂಬ ಸಮೇತ ಬಂದು ನೋಡಬಹುದಾಗಿದೆ. ಹಿರಿಯರು, ಮಕ್ಕಳು ಒಟ್ಟಿಗೆ ನೋಡಬಹುದಾದ ಸುಂದರವಾದ ಕನ್ನಡದ ಚಿತ್ರ ಎಂದು ಹೇಳಲು ಬಯಸುತ್ತೇನೆ.

ದಯವಿಟ್ಟು ಕನ್ನಡಿಗರು ಇಂಥ ಚಿತ್ರವನ್ನು ನೋಡಬೇಕು. ಕನ್ನಡಿಗರು ಇಂಥ ಸಿನಿಮಾವನ್ನು ಪ್ರೋತ್ಸಾಹಿಸಬೇಕು. ಇದರಲ್ಲಿ ಲಾಂಗು ಮಚ್ಚು ಏನೂ ಇಲ್ಲ. ನಮ್ಮಂಥ ವಯಸ್ಸಿನವರು ಈ ಚಿತ್ರವನ್ನು ತುಂಬಾನೇ ಎಂಜಾಯ್ ಮಾಡ್ತೀವಿ. ಜೊತೆಗೆ ಸಿನಿಮಾದಲ್ಲಿ ಸುಮಧುರವಾದ ಸಂಗೀತ ಇದೆ. ಮನೋಮೂರ್ತಿ ಆಗಲೂ ಇದ್ದರು. ಈಗಲೂ ಇದ್ದಾರೆ. ನಾಗತಿಹಳ್ಳಿ ಹಾಗೂ ಅವರ ತಂಡದವರಿಗೆ ಅಭಿನಂದನೆಗಳು. ಜೈ ಹಿಂದ್ ಎಂದು ಸುಧಾ ಮೂರ್ತಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಅಮೆರಿಕ ಅಮೆರಿಕ 2 ಚಿತ್ರವು ಶಾನ್ವಿ ಶ್ರೀವಾಸ್ತವ್, ನಿರೂಪ್ ಭಂಡಾರಿ ಮತ್ತು ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ಭಾವನಾತ್ಮಕ ರೋಮ್ಯಾಂಟಿಕ್ ಕಥಾಹಂದರವಾಗಿದೆ. ಇದು ಮೂರು ದಶಕಗಳ ಹಿಂದಿನ ಸೂಪರ್ ಹಿಟ್ 'ಅಮೆರಿಕ ಅಮೆರಿಕ' ಚಿತ್ರದ ಮುಂದುವರಿದ ಭಾಗ ಎಂದು ಹೇಳಲಾಗಿದ್ದರೂ, ಮೊದಲ ಭಾಗಕ್ಕೂ ಇದಕ್ಕೂ ಯಾವುದೇ ನೇರ ಸಂಪರ್ಕವಿಲ್ಲ.

ಕಥೆಯು ಸಿಯಾಟಲ್‌ಗೆ ಪ್ರಯಾಣ ಬೆಳೆಸುವ ನಾಯಕಿ ನುಡಿಯ ಜೀವನದ ಸುತ್ತ ಸಾಗುತ್ತದೆ. ಅಲ್ಲಿ ಅವಳಿಗೆ ಎದುರಾಗುವ ಅನಿರೀಕ್ಷಿತ ತಿರುವುಗಳು, ಗತಕಾಲದ ನೆನಪುಗಳು ಹಾಗೂ ಇಂದಿನ ತಲೆಮಾರಿನ ಪ್ರೀತಿ-ಸಂಬಂಧಗಳಲ್ಲಿನ ಗೊಂದಲಗಳನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ಬಿಂಬಿಸಲಾಗಿದೆ. ಶಾನ್ವಿ ಶ್ರೀವಾಸ್ತವ್ ತಮ್ಮ ಅದ್ಭುತ ಅಭಿನಯದಿಂದ ಮನ ಗೆದ್ದಿದ್ದರೆ, ಪೃಥ್ವಿ ಮತ್ತು ನಿರೂಪ್ ವೀಕ್ಷಕರ ಹೃದಯ ತಟ್ಟುವಂತಹ ಅಭಿನಯ ಮಾಡಿದ್ದಾರೆ.

ಇನ್ನು ಚಿತ್ರಕ್ಕೆ ಮನೋ ಮೂರ್ತಿ ಮತ್ತು ನಕುಲ್ ಅಭಯಂಕರ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಭಾವನಾತ್ಮಕ ಸನ್ನಿವೇಶಗಳಿಗೆ ಸಾಥ್ ನೀಡಿದೆ. ಮಂಡ್ಯ ರಮೇಶ್, ಅಚ್ಯುತ್ ಕುಮಾರ್ ಮತ್ತು ಮಾನಸಿ ಸುಧೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೆರಿಕ ಅಮೆರಿಕ 2 ಇದು ಲೇಖಕಿ ಸಹನಾ ವಿಜಯಕುಮಾರ್ ಅವರ 'ಕ್ಷಮೆ' ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ.