ಬಿಗ್‌ಬಾಸ್ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್ ಯಾವುದೇ ಸ್ಪರ್ಧಿಗೆ ಚಪ್ಪಾಳೆ ನೀಡದೆ, ಸಮಸ್ತ ವೀಕ್ಷಕರಿಗೆ ಅರ್ಪಿಸಿದ್ದಾರೆ. ಅಲ್ಲದೆ, ಅಗ್ನಿಪರೀಕ್ಷೆ ಮೂಲಕ ಬಂದ ನಾಲ್ವರು ಸಾಮಾನ್ಯ ಸ್ಪರ್ಧಿಗಳ ಕಳಪೆ ವರ್ತನೆಗೆ ತೀವ್ರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಕಿಚ್ಚನ ಚಪ್ಪಾಳೆಗೆ ವಿಶೇಷವಾದ ಗೌರವ ಇದೆ. ಕಿಚ್ಚ ಕೊಡುವ ಆ ಚಪ್ಪಾಳೆ ಒಂದು ಗೌರವಯುತ ಕ್ಷಣ. ವಾರಪೂರ್ತಿ ಮನೆಯಲ್ಲಿ ಅದ್ಭುತವಾಗಿ ಆಡಿ, ಸಭ್ಯತೆ ಹಾಗೂ ಜಾಣ್ಮೆಯಿಂದ ಮನಗೆದ್ದ ಒಬ್ಬ ಸ್ಪರ್ಧಿಗೆ ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಈ ವಾರ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಯಾರೂ ಊಹಿಸದ ಅಚ್ಚರಿ ನಡೆಯಿತು. ಅಂದ್ಹಾಗೆ ಸುದೀಪ್‌ ಯಾವ ಸ್ಪರ್ಧಿಗೂ ಚಪ್ಪಾಳೆಯನ್ನ ನೀಡಿಲ್ಲ. ಬದಲಾಗಿ ಸೀಸನ್‌ನ ಮೊದಲ ಚಪ್ಪಾಳೆಯನ್ನ ಕರ್ನಾಟಕದ ಸಮಸ್ತ ಜನತೆಗೆ ಮತ್ತು ಬಿಗ್‌ ಬಾಸ್‌ ವೀಕ್ಷಕರಿಗೆ ನೀಡಿದರು.

ಶನಿವಾರದ ಎಪಿಸೋಡ್‌ನ ಕೊನೆಯಲ್ಲಿ ಸುದೀಪ್‌ ಚಪ್ಪಾಳೆ ನೀಡಿದರು. ಈ ವಾರದ ಕಿಚ್ಚನ ಚಪ್ಪಾಳೆ ಕರ್ನಾಟಕದ ಜನತೆಗೆ, ಕನ್ನಡದ ಜನತೆಗೆ. 12 ಸೀಸನ್‌ಗಳು ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ನೀವೇ ಕಾರಣ. ಇಂತಹ ವೇದಿಕೆಯಲ್ಲಿ ಕೆಲವೊಂದು ಕೆಟ್ಟದ್ದು ನಡೆಯೋದಕ್ಕೆ ನಾವು ಎಂದಿಗೂ ಬಿಡಲ್ಲ ಎಂದು ಭರವಸೆ ನೀಡಿದರು. ಇನ್ನು ಸ್ಪರ್ಧಿಗಳ ಬೇಜವಾಬ್ದಾರಿ, ಕೀಳುಮಟ್ಟದ ನಡವಳಿಕೆಯಿಂದ ರೋಸಿಹೋಗಿದ್ದ ಕೋಟ್ಯಂತರ ವೀಕ್ಷಕರ ಪರವಾಗಿ ನಿಂತ ಸುದೀಪ್, ಪ್ರೇಕ್ಷಕರೇ ನಮ್ಮ ಶಕ್ತಿ, ಅವರಿಗಿಂತ ದೊಡ್ಡವರು ಯಾರೂ ಇಲ್ಲ ಎಂಬುದನ್ನು ಈ ಚಪ್ಪಾಳೆಯ ಮೂಲಕ ಸಾಬೀತುಪಡಿಸಿದರು.

ನಾಲ್ವರಿಗೆ ಕ್ಲಾಸ್‌

ಇನ್ನು ಇವತ್ತಿನ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಫುಲ್‌ ಗರಂ ಆಗಿದ್ದರು. ಅಗ್ನಿಪರೀಕ್ಷೆ ಮೂಲಕ ಕಾಮನ್ ಮ್ಯಾನ್ ಕೋಟಾದಲ್ಲಿ ಎಂಟ್ರಿ ಕೊಟ್ಟಿದ್ದ ಮಂಜು, ಕಿರಣ್ ಶಾಸ್ತ್ರಿ, ಧನುಷ್ ಹಾಗೂ ಲಿಖಿತ್ ಅವರ ಅತಿಯಾದ ವರ್ತನೆಗೆ ಸರಿಯಾಗಿ ಬೆಂಡೆತ್ತಿದರು. ಮಾಡ್ರನ್ ಮಹಾಕವಿ ಮಂಜನಿಗೆ ಸರಿಯಾಗಿ ಮಂಗಳಾರತಿ ಮಾಡಿದರು. ʼಅಣ್ಣಾ ಮನೆ ಸದಸ್ಯರೆಲ್ಲ ನಮಗೆʼ ಎಂದು ರಾಗ ಎಳೆದ ಮಂಜನಿಗೆ, ನಾನು ಅಣ್ಣ ಅನಿಸಿಕೊಳ್ಳಬೇಕಾದ್ರೆ ತಮ್ಮಂದಿರಿಗೆ ಬೆಲೆ ಇರಬೇಕು. ಈ ಹಿಂದೆ ನೀವೇ ಹೇಳಿದ್ರಲ್ಲ.. ಕಿತ್ತು ಹೋಗಿರೋ 50 ಪೈಸೆಗೆ ಬೆಲೆ ಇಲ್ಲ ಅಂತ.. ಅಂಥವರಾ ನೀವು? ಎಂದು ಮಂಜನ ಮಾತಿನಲ್ಲೇ ತಿವಿದರು.

ಹಾಗೆಯೇ ವೇದಿಕೆ ಪ್ರವೇಶಿಸುತ್ತಿದ್ದಂತೆ ಸುದೀಪ್‌ ಅವರು ಗರಂ ಆಗಿದ್ದರು. ಈ ಮನೆಯಲ್ಲಿ ಕೆಲವರು ಅವಕಾಶ ಕೊಟ್ಟ ವೇದಿಕೆಗೆ ಗೌರವ ಕೊಡುತ್ತಿಲ್ಲ. ಮಾನವೀಯತೆಯೇ ಮರೆತುಹೋಗಿದೆ. ಇಷ್ಟು ಜನ ಈ ಶೋ ನೋಡ್ತಾ ಇದ್ದಾರೆ ಅಂತ ತಾನೇ ನೀವೆಲ್ಲ ಬಂದಿರೋದು? ಆ ಜನ ಕಳೆದ 12 ಸೀಸನ್‌ಗಳಿಂದ ನಾವು ಸಂಪಾದಿಸಿರೋ ಆಸ್ತಿ. ಯಾವುದೋ ನಾಲ್ಕು ಜನರ ಕೆಟ್ಟ ನಡವಳಿಕೆಗಾಗಿ ಅಷ್ಟು ಕೋಟಿ ಪ್ರೇಕ್ಷಕರನ್ನು ಕಳೆದುಕೊಳ್ಳಲು ಯಾರೂ ಸಿದ್ಧರಿಲ್ಲ ಎಂದರು.

ಸಾಮಾನ್ಯ ಸ್ಪರ್ಧಿಗಳ ವರ್ತನೆಯಿಂದ ತೀವ್ರ ಬೇಸತ್ತ ಸುದೀಪ್ ವಾಹಿನಿಗೂ ಮನವಿ ಮಾಡಿದರು. ಮುಂದಿನ ಸೀಸನ್‌ನಿಂದ ಕಾಮನ್ ಮ್ಯಾನ್‌ಗಳಿಗೆ ಅವಕಾಶ ನೀಡುವ ಅಗ್ನಿಪರೀಕ್ಷೆ ಸಾಹಸಕ್ಕೆ ಕೈಹಾಕಬೇಡಿ. ಮುಂದಿನ ಬಾರಿ ಸಾಮಾನ್ಯ ಜನರಿಗೆ ಅವಕಾಶ ಸಿಗಲಿಲ್ಲ ಅಂದರೆ ಅದಕ್ಕೆ ಮಂಜು, ಕಿರಣ್, ಧನುಷ್, ಲಿಖಿತ್ ನೇರ ಕಾರಣ ಎಂದು ತಿವಿದರು.