ಭಾರತೀಯ ಕ್ರಿಕೆಟಿಗನ ಕೋಚ್ ಒಬ್ಬರು ಯಶಸ್ಸು ಗಳಿಸಿದ ನಂತರ ತಮ್ಮ ಶಿಷ್ಯ ತನ್ನನ್ನು ಬೆಳೆಸಿದ ಗುರುವಿನಿಂದ ದೂರವಾಗಿದ್ದು, ಈ ಬಗ್ಗೆ ಸಂದರ್ಶನವೊಂದರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಗುರುವಿನ ಸ್ಥಾನಮಾನವನ್ನು ಈ ಸಮಾಜದಲ್ಲಿ ಹೆತ್ತ ತಂದೆ-ತಾಯಿಗಿಂತಲೂ ಶ್ರೇಷ್ಠ ಎಂದು ಪೂಜಿಸಲಾಗುತ್ತದೆ. ಒಬ್ಬ ನಿಜವಾದ ಗುರು ಕೇವಲ ಪುಸ್ತಕದ ಸಾಲುಗಳನ್ನು ಅಥವಾ ಮೈದಾನದ ವಿದ್ಯೆಯನ್ನು ಧಾರೆ ಎರೆಯುವುದು ಮಾತ್ರವಲ್ಲ, ಯಾವುದೇ ಸ್ವಾರ್ಥವಿಲ್ಲದೆ ಶಿಷ್ಯನ ಬದುಕಿನ ಏರಿಳಿತಗಳಲ್ಲಿ ನೆರಳಾಗಿ ನಿಲ್ಲುತ್ತಾನೆ. ಶಿಷ್ಯ ಯಶಸ್ಸಿನ ಶಿಖರವೇರಿದಾಗ ಜಗತ್ತಿನಲ್ಲೇ ಅತ್ಯಂತ ಹೆಮ್ಮೆಪಡುವ ಜೀವ ಎಂದರೆ ಅದು ಗುರು ಮಾತ್ರ. ಆದರೆ, ಅದೇ ಶಿಷ್ಯ ಉನ್ನತ ಸ್ಥಾನಕ್ಕೇರಿದ ಮೇಲೆ ತನ್ನನ್ನು ಬೆಳೆಸಿದ ಹಸ್ತವನ್ನೇ ಮರೆತು, ಮುಖ ತಿರುಗಿಸಿ ನಡೆದರೆ ಆ ಗುರುವಿನ ಹೃದಯಕ್ಕಾಗುವ ಗಾಯವನ್ನು ವರ್ಣಿಸಲು ಸಾಧ್ಯವೇ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ
ಈ ಕಥೆ ಯಾರದ್ದು?
ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ಯಶಸ್ವಿ ಜೈಸ್ವಾಲ್ ಮತ್ತು ಅವರ ಆರಂಭಿಕ ತರಬೇತುದಾರ ಜ್ವಾಲಾ ಸಿಂಗ್ ನಡುವೆ ಇಂದು ಸೃಷ್ಟಿಯಾಗಿರುವ ಅಂತರವು ಇಂತಹದ್ದೇ ಒಂದು ತೀವ್ರ ಭಾವನಾತ್ಮಕ ನೋವಿಗೆ ಸಾಕ್ಷಿಯಾಗಿದೆ. ಟೀಮ್ ಇಂಡಿಯಾದಲ್ಲಿ ಯಶಸ್ವಿ ಜೈಸ್ವಾಲ್ ಎಂಬ ಅದ್ಭುತ ಪ್ರತಿಭೆ ಜಗತ್ತಿಗೆ ಪರಿಚಯವಾಗಿದ್ದರ ಕೋಚ್ ಜ್ವಾಲಾ ಸಿಂಗ್ ಅವರ ತ್ಯಾಗ ಮತ್ತು ಪರಿಶ್ರಮದ ದೊಡ್ಡ ಕಥೆಯಿದೆ ಎಂಬುದು ಇಡೀ ಕ್ರಿಕೆಟ್ ಜಗತ್ತಿಗೆ ತಿಳಿದಿರುವ ಸತ್ಯ. ಆದರೆ, ದುರಂತವೆಂದರೆ ಯಶಸ್ಸಿನ ಉನ್ನತ ಶಿಖರಕ್ಕೇರುತ್ತಿದ್ದಂತೆ, ಜೈಸ್ವಾಲ್ ತಮ್ಮ ಬೆನ್ನೆಲುಬಾಗಿ ನಿಂತ ಮಾರ್ಗದರ್ಶಕರಿಂದಲೇ ಸಂಪೂರ್ಣವಾಗಿ ದೂರವಾಗಿದ್ದಾರೆ.
ನಾನೀಗ ಅವರೊಂದಿಗೆ ಮಾತನಾಡುವುದಿಲ್ಲ!
ಇತ್ತೀಚೆಗೆ 'ಕಡಕ್' ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಜ್ವಾಲಾ ಸಿಂಗ್ ತಮ್ಮ ಮನದಾಳದ ಭಾರವನ್ನು ಹೊರಹಾಕಿದ್ದಾರೆ. 'ಯಶಸ್ವಿ ಈಗಲೂ ನಿಮ್ಮಿಂದ ಸಲಹೆ-ಮಾರ್ಗದರ್ಶನ ಪಡೆಯುತ್ತಾರೆಯೇ?' ಎಂಬ ಪ್ರಶ್ನೆಗೆ ಅತ್ಯಂತ ಕಷ್ಟದಿಂದ ಧ್ವನಿ ಸರಿಪಡಿಸಿಕೊಳ್ಳುತ್ತಾ ಉತ್ತರಿಸಿದ ಜ್ವಾಲಾ ಸಿಂಗ್, "ಇಲ್ಲ, ನಾನು ಅವರೊಂದಿಗೆ ಈಗ ಮಾತನಾಡುವುದಿಲ್ಲ. ಅವರು ಈಗ ಭಾರತೀಯ ರಾಷ್ಟ್ರೀಯ ತಂಡದ ತರಬೇತುದಾರರು ಮತ್ತು ಸಿಬ್ಬಂದಿಯ ಸಲಹೆಗಳನ್ನು ಕೇಳುತ್ತಾರೆ. ಮಗು ಬೆಳೆದು ಒಂದು ನಿರ್ದಿಷ್ಟ ವಯಸ್ಸಿಗೆ ಬಂದ ಮೇಲೆ ತನ್ನದೇ ಆದ ಜೀವನವನ್ನು ನಡೆಸಲು ಬಯಸುತ್ತದೆ. ಯಾರಿಂದ ಸಲಹೆ ಪಡೆಯಬೇಕು ಮತ್ತು ಯಾರನ್ನು ದೂರವಿಡಬೇಕು ಎಂಬುದು ಅವರವರ ಸ್ವಂತ ನಿರ್ಧಾರಕ್ಕೆ ಬಿಟ್ಟದ್ದು" ಎಂದು ನೋವಿನಿಂದ ನುಡಿದರು.
12 ವರ್ಷಗಳ ನಿಸ್ವಾರ್ಥ ವಾತ್ಸಲ್ಯ ಮತ್ತು ತ್ಯಾಗ!
ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಜ್ವಾಲಾ ಸಿಂಗ್, "ಯಶಸ್ವಿ ಕೇವಲ 12 ಅಥವಾ 13 ವರ್ಷದ ಸಣ್ಣ ಮಗುವಾಗಿದ್ದಾಗ ನನ್ನ ಬಳಿಗೆ ಬಂದಿದ್ದ. ಅವನಲ್ಲಿನ ಪ್ರತಿಭೆಯನ್ನು ಕಂಡು ನಾನು ಅವನನ್ನು ನನ್ನ ಸ್ವಂತ ಮನೆಯಲ್ಲೇ ಇಟ್ಟುಕೊಂಡೆ. ಸತತ 12 ವರ್ಷಗಳ ಕಾಲ ಅವನನ್ನು ನನ್ನ ಸ್ವಂತ ಮಗನಿಗಿಂತ ಹೆಚ್ಚಾಗಿ ಸಾಕಿದೆ. ಈ ಸುದೀರ್ಘ ಅವಧಿಯಲ್ಲಿ ಅವನ ಕುಟುಂಬವೂ ಮಧ್ಯೆ ಬರಲಿಲ್ಲ, ನಾನು ಕೂಡ ಯಾವುದೇ ಕ್ಷಣದಲ್ಲೂ ಅವನ ಕೈ ಬಿಡಲಿಲ್ಲ" ಎಂದರು. ಅನಾಥನಂತೆ ಅಲೆಯುತ್ತಿದ್ದ ಬಾಲಕನಿಗೆ ಆಸರೆಯಾಗಿ, ಶಾಲಾ ಕ್ರಿಕೆಟ್, ಮುಂಬೈ ಅಂಡರ್-16, ಅಂಡರ್-19, ನಂತರ ಭಾರತ ಅಂಡರ್-19 ಹಾಗೂ ಐಪಿಎಲ್‌ವರೆಗೆ ಪ್ರತಿಯೊಂದು ಹೆಜ್ಜೆಯಲ್ಲೂ ಜ್ವಾಲಾ ಸಿಂಗ್ ಬೆನ್ನಿಗೆ ನಿಂತಿದ್ದರು. ಆದರೆ, ಯಶಸ್ಸು ಮತ್ತು ಹಣ ಬಂದ ಮೇಲೆ ಸಂಬಂಧಗಳ ಸ್ವರೂಪವೇ ಬದಲಾಗಿ ಹೋಯಿತು.
ಬದಲಾದ ದೃಷ್ಟಿಕೋನ, ಮುರಿದುಬಿದ್ದ ಬಂಧ!
ಒಂದು ಕಾಲದಲ್ಲಿ ಯಶಸ್ವಿಗೆ ಜ್ವಾಲಾ ಸಿಂಗ್ ಅವರೇ ಸರ್ವಸ್ವವಾಗಿದ್ದರು. "ಒಂದು ಕಾಲವಿತ್ತು, ನಾನು ಸೂರ್ಯ ಪಶ್ಚಿಮದಲ್ಲೇ ಉದಯಿಸುತ್ತಾನೆ ಎಂದು ಹೇಳಿದರೂ ಯಶಸ್ವಿ 'ಹೌದು ಸರ್, ನೀವು ಹೇಳುವುದು ಸರಿ' ಎನ್ನುತ್ತಿದ್ದ. ಆದರೆ ಬೆಳೆಯುತ್ತಿದ್ದಂತೆ ಅವನ ಆಲೋಚನೆಗಳು ಬದಲಾದವು. ನನ್ನದೇ ಆದ ಕೆಲವು ಸಿದ್ಧಾಂತಗಳಿವೆ. ನಮ್ಮಿಬ್ಬರ ದೃಷ್ಟಿಕೋನಗಳು ಹೊಂದಾಣಿಕೆಯಾಗದಿದ್ದಾಗ, ಪರಸ್ಪರ ದೂರವಾಗುವುದೇ ಒಳಿತು ಎನಿಸಿತು" ಎಂದು ಜ್ವಾಲಾ ಸಿಂಗ್ ತಮ್ಮ ಕಣ್ಣೀರನ್ನು ತಡೆಹಿಡಿಯುತ್ತಾ ಹೇಳಿದರು. ಬೀದಿಯಲ್ಲಿದ್ದ ಮುಗ್ಧ ಬಾಲಕನನ್ನು ಟೀಮ್ ಇಂಡಿಯಾದ ಸೂಪರ್‌ಸ್ಟಾರ್ ಆಗಿ ರೂಪಿಸಿದ ಗುರುವಿಗೆ, ಇಂದು ಸಿಕ್ಕಿರುವುದು ಕೇವಲ ಮೌನ ಮತ್ತು ನಿರ್ಲಕ್ಷ್ಯ. 'ಬೆಳೆಸಿದ ಕೈಗೇ ಕಲ್ಲು ಎಸೆದಂತೆ' ಭಾಸವಾಗುತ್ತಿರುವ ಈ ಘಟನೆಯು, ಕ್ರಿಕೆಟ್ ಜಗತ್ತಿನಲ್ಲಿ ಯಶಸ್ಸಿನ ಹಿಂದೆ ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳು ಮತ್ತು ಗುರು-ಶಿಷ್ಯರ ಬಾಂಧವ್ಯದ ಮೇಲೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ನೆಟ್ಟಿದೆ.


