ಕೇವಲ ₹2 ಕೋಟಿ ಬಜೆಟ್‌ನಲ್ಲಿ ತಯಾರಾದ 'ಹನುಮಾನ್ ಅಂಶ್' ಎಂಬ ಸಿನಿಮಾ, ಪ್ರೇಕ್ಷಕರ ಮೌಖಿಕ ಪ್ರಚಾರದಿಂದಲೇ ವಿಶ್ವದಾದ್ಯಂತ ₹50 ಕೋಟಿ ಗಳಿಸಿ ಅಚ್ಚರಿ ಮೂಡಿಸಿದೆ. ಈ ಚಿತ್ರವು 20ನೇ ಶತಮಾನದ ಆಧ್ಯಾತ್ಮಿಕ ನಾಯಕ, ನೀಮ್ ಕರೋಲಿ ಬಾಬಾ ಎಂದೇ ಪ್ರಸಿದ್ಧರಾದ ಲಕ್ಷ್ಮಣ ದಾಸ್ ಅವರ ಜೀವನವನ್ನು ಆಧರಿಸಿದೆ.

ಈ ಸಿನಿಮಾದಲ್ಲಿ ಮುಂಬೈನ ದೊಡ್ಡ ದೊಡ್ಡ ಸ್ಟಾರ್‌ ನಟರಿಲ್ಲ, ನೂರಾರು ಕೋಟಿ ಬಜೆಟ್ ಇಲ್ಲ.. ಆದ್ರೂ ಬಾಕ್ಸಾಫೀಸ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ 'ಹನುಮಾನ್ ಅಂಶ್' ಇದೀಗ ವಿಶ್ವದಾದ್ಯಂತ 50 ಕೋಟಿ ರೂಪಾಯಿ ಗಳಿಸಿ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂಬ ವರದಿ ಅಚ್ಚರಿ ಮೂಡಿಸುತ್ತಿದೆ.

ಈ ಸಿನಿಮಾ ಬಿಡುಗಡೆಯಾಗಿದ್ದೇ ಗೊತ್ತಾಗಲಿಲ್ಲ:

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವ ಸಿನಿಮಾ ಎಂದರೆ ಬಿಡುಗಡೆ ಆಗುವ ವರ್ಷದ ಮೊದಲೇ ಪ್ರಚಾರದ ಅಬ್ಬರ ಜೋರಾಗಿರುತ್ತದೆ. ಉದಾಹರಣೆಗೆ ಯಶ್ ನಟನೆಯ ಟಾಕ್ಸಿಕ್ ಪ್ರಚಾರ ಗಮನಿಸಬಹುದು. ಆದರೆ 'ಹನುಮಾನ್ ಅಂಶ್' ಆಗಸ್ಟ್ 7, 2026ರಂದು ತೆರೆಕಂಡಾಗ ಬಹುತೇಕ ಸಿನಿಪ್ರಿಯರಿಗೆ ಇಂಥದೊಂದು ಸಿನಿಮಾ ಬಿಡುಗಡೆ ಆಗ್ತಿದೆ ಅನ್ನೋದೇ ಗೊತ್ತಿರಲಿಲ್ಲ ಈ ಸಿನಿಮಾ ಆರಂಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಓಪನಿಂಗ್ ಸಿಗಲಿಲ್ಲ. ಆದರೆ ಯಾವಾಗ ಈ ಸಿನಿಮಾ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿದವೋ ಆಗ ನಿಧಾನಕ್ಕೆ ಚಿತ್ರ ಯಶಸ್ವಿಯಾಗುತ್ತ ಮುನ್ನುಗ್ಗಿತು. ಅರ್ಥಾತ್ ಸಿನಿಮಾ ಯಶಸ್ಸಿಗೆ ಸಹಾಯವಾಗಿದ್ದು ಜನರ ರಿವ್ಯೂಗಳು, ಸಿನಿಮಾ ನೋಡಿ ಬಂದ ಬಳಿಕ ಜನರು ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆಗಳು ನೀಡಿದ್ದರಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯಿತು. ಇದರಿಂದಾಗಿ ಸಿನಿಮಾ ಕಲೆಕ್ಷನ್ ಭರ್ಜರಿ ಏರಿಕೆ ಕಂಡಿತು.

₹2 ಕೋಟಿ ಸಿನಿಮಾ ₹50 ಕೋಟಿ ಕ್ಲಬ್‌ಗೆ?

ಈ ಸಾಧನೆ ಸುಮ್ಮನೆ ಅಲ್ಲ, ಹನುಮಾನ್ ಅಂಶ್ ಸಿನಿಮಾ ತೀರಾ ಸಣ್ಣ ಬಜೆಟ್‌ನದ್ದು. ಕೇವಲ 2 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿರೋ ಸಿನಿಮಾ ಈಗ ವಿಶ್ವದಾದ್ಯಂತ ₹50 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ ಎನ್ನಲಾಗಿದೆ. ಈ ಮೂಲಕ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿ ಗೆದ್ದಿರುವ ಸಿನಿಮಾಗಳ ಪೈಕಿ ಹನುಮಾನ ಅಂಶ್ ಮುಂಚೂಣಿಗೆ ಬಂದಿದೆ.

ಯಾರು ಈ ಹನುಮಾನ್ ಅಂಶ್?

ಚಿತ್ರದ ಕಥೆ 20ನೇ ಶತಮಾನದ ಆಧ್ಯಾತ್ಮಿಕ ನಾಯಕ ಲಕ್ಷ್ಮಣ ದಾಸ್, ಅಂದರೆ ಭಕ್ತರ ಮಾತಲ್ಲಿ ನೀಮ್ ಕರೋಲಿ ಬಾಬಾ ಅಥವಾ ಮಹಾರಾಜ್ ಜೀ ಎಂದೇ ಹೆಸರಾಗಿರುವ ಪ್ರಸಿದ್ಧ ಸಂತನ ಜೀವನ ಸುತ್ತ ಸುತ್ತತ್ತದೆ. ತಾಯಿ ನಿಧನದ ಬಳಿಕ ಕೇವಲ ಹದಿಮೂರನೇ ವಯಸ್ಸಿನಲ್ಲಿ ಮನೆಯನ್ನ ತೊರೆಯುವ ಬಾಲಕ ಲಕ್ಷ್ಮಣ ದಾಸ್ ಆಧ್ಯಾತ್ಮಿಕ ಪಯಣ ಆರಂಭಿಸ್ತಾರೆ. ದೇವರ ಮೇಲಿನ ಅಪಾರ ಭಕ್ತಿ, ಅಚಲ ನಂಬಿಕೆಯಿಂದ ಮುಂದೆ ಅವರು 'ನೀಮ್ ಕರೋಲಿ ಬಾಬಾ' ಎಂದೇ ಪ್ರಸಿದ್ಧರಾಗುತ್ತಾರೆ.

1973ರಲ್ಲಿ ನೀಮ್ ಕರೋಲಿ ಬಾಬಾರ ಮಹಾಸಮಾಧಿ

ನೀಮ್ ಕರೋಲಿ ಬಾಬಾ ಅವರು ಸೆಪ್ಟೆಂಬರ್ 1973ರಲ್ಲಿ ವೃಂದಾವನದಲ್ಲಿ ನಿಧನರಾದರು. ಆದರೆ ಅವರ ಆಧ್ಯಾತ್ಮಿಕ ಪರಂಪರೆ ಇಂದಿಗೂ ಮುಂದುವರಿದಿದೆ. ಉತ್ತರಾಖಂಡದ ಕೈಂಚಿ ಧಾಮ್ನಲ್ಲಿರುವ ಅವರ ಆಶ್ರಮ ಇಂದಿಗೂ ಭಕ್ತರ ಪ್ರಮುಖ ಆಧ್ಯಾತ್ಮಿಕ ತಾಣವಾಗಿದೆ. ದೇಶದ ವಿವಿಧ ನಗರಗಳಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಅವರೊಂದಿಗೆ ಸಂಬಂಧ ಹೊಂದಿರುವ ಆಶ್ರಮಗಳಿವೆ.

ಕೈಂಚಿ ಧಾಮ್‌ ಎಲ್ಲಿದೆ?

ನೀಮ್ ಕರೋಲಿ ಬಾಬಾ ಅವರ ಧಾಮ ನೈನಿತಾಲ್‌ನಿಂದ ಸುಮಾರು 40ಕಿಮೀ ದೂರದಲ್ಲಿದೆ. ಬಾಬಾ ಅವರ ಪ್ರಮುಖ ಆಶ್ರಮಗಳಲ್ಲೊಂದಾಗಿದೆ. 1964ರ ಜೂನ್‌ನಲ್ಲಿ ಇಲ್ಲಿ ಮೊದಲ ದೇವಾಲಯವನ್ನು ಉದ್ಘಾಟಿಸಲಾಯಿತು. ಪ್ರತಿದಿನ ನೂರಾರು ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆಶ್ರಮದಲ್ಲಿ ಬೆಳಗ್ಗೆ ಮತ್ತು ಸಂಜೆ ನಡೆಯುವ ಆರತಿಯಲ್ಲಿ ಭಾಗವಹಿಸುವುದು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ಉಳಿದುಕೊಳ್ಳುವುದು ಅಷ್ಟು ಸುಲಭವಿಲ್ಲ. ವಿಶೇಷ ಅನುಮತಿ ಪಡೆದವರಿಗೆ ಮಾತ್ರ ಆಶ್ರಮದಲ್ಲಿರಲು ವ್ಯವಸ್ಥೆ. ಹೆಚ್ಚೆಂದರೆ ಮೂರು ದಿನಗಳವರೆಗೆ ಉಳಿದುಕೊಳ್ಳಬಹುದು. ಆನ್‌ಲೈನ್ ಬುಕಿಂಗ್ ವ್ಯವಸ್ಥೆಯೂ ಇಲ್ಲ.

ವೃಂದಾವನ ಆಶ್ರಮದಲ್ಲೂ ಇದೇ ನಿಯಮ!

ನೀಮ್ ಕರೋಲಿ ಬಾಬಾ ಅವರ ವೃಂದಾವನ ಆಶ್ರಮವೂ ಭಕ್ತರಿಗೆ ಪ್ರಮುಖ ತಾಣವಾಗಿದೆ. ಇಲ್ಲಿ ಉಳಿಯಲು ಅಥವಾ ವಾಸ್ತವ್ಯಕ್ಕೆ ಆನ್‌ಲೈನ್ ಬುಕಿಂಗ್ ಇಲ್ಲ. ಆಶ್ರಮದಲ್ಲಿ ಉಳಿಯಲು ಬಯಸಿದರೆ ವ್ಯವಸ್ಥಾಪಕರಿಗೆ ಪತ್ರ ಬರೆದು ವಾಸ್ತವ್ಯಕ್ಕೆ ಮನವಿ ಮಾಡಬೇಕು. ಮನವಿ ಪತ್ರ ಬರೆದ ಮಾತ್ರಕ್ಕೆ ಸಿಗುತ್ತೆ ಅಂತೇನಿಲ್ಲ. ಈ ಹಿಂದೆ ಇದೇ ಆಶ್ರಮದಲ್ಲಿ ಉಳಿದುಕೊಂಡವರೊಬ್ಬರು ಶಿಫಾರಸು ನೀಡಬೇಕಾಗುತ್ತೆ. ಇಲ್ಲಿ ಕೂಡ ವಾಸ್ತವ್ಯದ ಗರಿಷ್ಟ ಮೂರು ದಿನಗಳು. ಅದಕ್ಕಿಂತ ಹೆಚ್ಚಿರಲು ಅವಕಾಶವಿಲ್ಲ.

ಭಾರತದಿಂದ ಅಮೆರಿಕ, ಜರ್ಮನಿವರೆಗೆ ಇವೆ ಬಾಬಾ ಆಶ್ರಮಗಳು

ನೀಮ್ ಕರೋಲಿ ಬಾಬಾ ಅವರ ಆಧ್ಯಾತ್ಮಿಕ ಪರಂಪರೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಲಖನೌ, ದೆಹಲಿ, ಋಷಿಕೇಶ್, ಅವರ ಹುಟ್ಟೂರು ನೀಮ್ ಕರೋರಿ ಸೇರಿದಂತೆ ಹಲವು ಕಡೆಗಳಲ್ಲಿ ಅವರಿಗೆ ಸಂಬಂಧಿಸಿದ ಆಶ್ರಮಗಳಿವೆ. ಅಮೆರಿಕದ ನ್ಯೂ ಮೆಕ್ಸಿಕೊದ ಟಾವೋಸ್ ಮತ್ತು ಜರ್ಮನಿಯಲ್ಲೂ ಬಾಬಾ ಆಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಗೂ ನೂರಾರು ಭಕ್ತರು ಆಧ್ಯಾತ್ಮಿಕ ಅನುಯಾಯಿಗಳು ಭೇಟಿ ನೀಡುತ್ತಲೇ ಇರುತ್ತಾರೆ.

ಸಿನಿಮಾದ ಯಶಸ್ಸಿನ ಹಿಂದಿದೆ ಕಥೆ!

ನೀಮ್ ಕರೋಲಿ ಬಾಬಾ ಅವರ ಜೀವನ, ಭಕ್ತಿ ಮತ್ತು ಆಧ್ಯಾತ್ಮಿಕ ಪಯಣವನ್ನು ಆಧರಿಸಿರುವ ‘ಹನುಮಾನ್ ಅಂಶ’ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಾಣುತ್ತಿದೆ. ಅತ್ಯಂತ ಕಡಿಮೆ ಬಜೆಟ್‌, ಆರಂಭದಲ್ಲಿ, ಪ್ರೇಕ್ಷರೇ ಇರಲಿಲ್ಲ, ಆದರೀಗ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರೂ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ದೊಡ್ಡ ಬಜೆಟ್‌ನ ಸಿನಿಮಾಗಳೇ ಮಕಾಡೆ ಮಲಗಿದಾಗ ಕೇವಲ ಎರಡು ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಹನುಮಾನ್ ಅಂಶ್, ₹50 ಕೋಟಿ ಗಡಿ ದಾಟಿ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಕುತೂಹಲ ಹೆಚ್ಚಿಸಿದೆ.