ಹುಂಡೈ ಸಂಸ್ಥೆಯು ಭಾರತದಲ್ಲಿ ಕ್ರೇಟಾ ಮತ್ತು ಎಕ್ಸ್‌ಟರ್ ನಡುವೆ ಹೊಸ ಎಸ್‌ಯುವಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. 'BC4i' ಕೋಡ್‌ನೇಮ್ ಹೊಂದಿರುವ ಈ ಕಾರು, ಮಾರುತಿ ಫ್ರಾಂಕ್ಸ್‌ಗೆ ಪೈಪೋಟಿ ನೀಡಲಿದ್ದು, 1.2 ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಮತ್ತು ADAS ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಬೆಂಗಳೂರು (ಸೆ.14): ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಹುಂಡೈ (Hyundai), ಹೊಸ ಎಸ್‌ಯುವಿ (SUV) ಒಂದನ್ನು ಭಾರತದಲ್ಲಿ ಬಿಡುಗಡೆ ಮಾಡಲು ಭರಪೂರ ಸಿದ್ಧತೆ ನಡೆಸುತ್ತಿದೆ. ಈ ಹೊಸ ಮಾಡೆಲ್ ಸಂಸ್ಥೆಯ ಜನಪ್ರಿಯ ಕ್ರೇಟಾ (Creta) ಸಿರೀಸ್‌ಗಿಂದ ಕೆಳಗಿನ ಹಂತದಲ್ಲಿ ಹಾಗೂ ಎಕ್ಸ್‌ಟರ್ (Exter) ಮಾಡೆಲ್‌ಗಿಂತ ಮೇಲಿನ ಸಾಲಿನಲ್ಲಿ ಜಾಗ ಪಡೆದುಕೊಳ್ಳಲಿದೆ.
ಮಾರುಕಟ್ಟೆಗೆ ಕಾಲಿಟ್ಟ ನಂತರ ಈ ನೂತನ ಎಸ್‌ಯುವಿಯು ಪ್ರಸ್ತುತ ಮಾರಾಟದಲ್ಲಿ ಧೂಳೆಬ್ಬಿಸುತ್ತಿರುವ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx), ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor), ರೆನಾಲ್ಟ್ ಕೈಗರ್ (Renault Kiger) ಮತ್ತು ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಕಾರುಗಳಿಗೆ ನೇರ ಪೈಪೋಟಿ ನೀಡಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 'ಹುಂಡೈ ಬೆಯಾನ್' (Hyundai Bayon) ಮಾಡೆಲ್‌ನಿಂದ ಪ್ರೇರಿತವಾಗಿರುವ ಈ ಹೊಸ ಕಾರಿಗೆ ಕಂಪನಿಯು ಆಂತರಿಕವಾಗಿ 'BC4i' ಎಂದು ಕೋಡ್‌ನೇಮ್ ನೀಡಿದೆ. ಈ ಕಾರು ಈಗಾಗಲೇ ಭಾರತದ ಹಲವು ರಸ್ತೆಗಳಲ್ಲಿ ಪರೀಕ್ಷಾರ್ಥ ಚಾಲನೆ (Testing) ನಡೆಸುವಾಗ ಪತ್ತೆಯಾಗಿದ್ದು, ಕಂಪನಿಯು ಇದರ ಅಭಿವೃದ್ಧಿ ಕಾರ್ಯವನ್ನು ಅತ್ಯಂತ ವೇಗವಾಗಿ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ 'ವೆನ್ಯೂ' (Venue) ಗ್ರಾಹಕರಿಗೂ ಇದು ಅತ್ಯುತ್ತಮ ಪರ್ಯಾಯ ಆಯ್ಕೆಯಾಗಲಿದೆ.
ಹೊಸ 1.2 ಲೀಟರ್ ಟರ್ಬೋ ಇಂಜಿನ್ ವಿಶೇಷತೆ
ಈ ನೂತನ ಎಸ್‌ಯುವಿಯ ಪ್ರಮುಖ ಆಕರ್ಷಣೆಯೆಂದರೆ ಇದರಲ್ಲಿ ಬಳಸಲಾಗುವ ನೂತನ ಇಂಜಿನ್ ತಂತ್ರಜ್ಞಾನ. ಹುಂಡೈ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಪ್ರತ್ಯೇಕವಾಗಿ 1.2 ಲೀಟರ್ TGDi ಟರ್ಬೋ-ಪೆಟ್ರೋಲ್ (1.2L TGDi Turbo-Petrol) ಇಂಜಿನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.
ನಾಲ್ಕು ಸಿಲಿಂಡರ್ ಹೊಂದಿರುವ ಈ ನೂತನ ಇಂಜಿನ್, ಕಂಪನಿಯ ಪ್ರಸ್ತುತ 1.0 ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ಗಿಂತ ಹೆಚ್ಚಿನ ಪವರ್ (Power) ಮತ್ತು ಟಾರ್ಕ್ (Torque) ನೀಡಲಿದ್ದು, 1.5 ಲೀಟರ್ ಟರ್ಬೋ ಇಂಜಿನ್‌ಗಿಂತ ಅತ್ಯುತ್ತಮ ಮೈಲೇಜ್ ಕೊಡುವ ಸಾಮರ್ಥ್ಯ ಹೊಂದಿರಲಿದೆ. ಅಂದರೆ 1.0L ಮತ್ತು 1.5L ಟರ್ಬೋ ಇಂಜಿನ್‌ಗಳ ನಡುವೆ ಗ್ರಾಹಕರಿಗೆ ಇದೊಂದು ಪರ್ಯಾಯವಾಗಿರಲಿದೆ. ಮುಂದಿನ ದಿನಗಳಲ್ಲಿ ಈ ಇಂಜಿನ್ ಅನ್ನು ಹೈಬ್ರಿಡ್ (Hybrid) ತಂತ್ರಜ್ಞಾನದೊಂದಿಗೂ ಬಳಸುವ ಸಾಧ್ಯತೆಯಿದೆ ಎನ್ನಲಾಗಿದ್ದರೂ, ಕಂಪನಿಯು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.
ಜಾಗತಿಕ 'ಬೆಯಾನ್' ಶೈಲಿಯ ವಿನ್ಯಾಸ ಹಾಗೂ ಅಡ್ವಾನ್ಸ್ಡ್ ಫೀಚರ್ಸ್
ಸ್ಪೈ ಚಿತ್ರಗಳ ಪ್ರಕಾರ (Test drive photos), ಹೊಸ ಎಸ್‌ಯುವಿಯು ಜಾಗತಿಕ 'ಬೆಯಾನ್' ಕಾರಿನ ಡಿಸೈನ್ ಅನ್ನು ಹೆಚ್ಚಾಗಿ ಹೋಲುತ್ತದೆ.
ಫ್ರಂಟ್ ಲುಕ್: ಮುಂಭಾಗದಲ್ಲಿ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಇದ್ದು, ಮೇಲ್ಭಾಗದಲ್ಲಿ ತೆಳುವಾದ LED DRLs ಹಾಗೂ ಕೆಳಭಾಗದಲ್ಲಿ ಪ್ರಮುಖ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ.
ಬಂಪರ್ ಮತ್ತು ADAS: ಫ್ರಂಟ್ ಬಂಪರ್‌ನಲ್ಲಿ ಬ್ಲಾಕ್ ಕ್ಲಾಡಿಂಗ್, ಪಾರ್ಕಿಂಗ್ ಸೆನ್ಸಾರ್‌ಗಳು ಹಾಗೂ ರೇಡಾರ್ ಮಾಡ್ಯೂಲ್ (Radar Module) ಕಂಡುಬಂದಿವೆ. ಕಾರಿನಲ್ಲಿ ರೇಡಾರ್ ನೀಡಲ್ಪಟ್ಟಿರುವುದರಿಂದ, ಇದರಲ್ಲಿ ಸುಧಾರಿತ 'ಆಡಾಸ್' (ADAS - Advanced Driver Assistance Systems) ಭದ್ರತಾ ವೈಶಿಷ್ಟ್ಯ ಇರಲಿದೆ ಎಂಬುದು ಖಚಿತವಾಗಿದೆ.
ಬೆಲೆ ಮತ್ತು ಮಾರುಕಟ್ಟೆ ಶ್ರೇಣಿ
ಹೊಸ ಎಸ್‌ಯುವಿಯು ಎಕ್ಸ್‌ಟರ್ ಮತ್ತು ಕ್ರೇಟಾ ನಡುವೆ ಜಾಗ ಪಡೆಯಲಿದ್ದು, ಇದರ ಬೆಲೆಯು ಪ್ರಸ್ತುತ ಇರುವ ವೆನ್ಯೂ (Venue) ಆವೃತ್ತಿಯ ಆಸುಪಾಸಿನಲ್ಲೇ ಇರುವ ಸಾಧ್ಯತೆಯಿದೆ. ಪ್ರಸ್ತುತ ಹುಂಡೈ ವೆನ್ಯೂ ಕಾರಿನ ಎಕ್ಸ್-ಶೋರೂಮ್ ಬೆಲೆಯು ಸುಮಾರು ₹8 ಲಕ್ಷದಿಂದ ಪ್ರಾರಂಭವಾಗಿ ₹15.65 ಲಕ್ಷದವರೆಗೆ ಇದೆ. ಈ ನೂತನ ಎಸ್‌ಯುವಿಯ ಅಧಿಕೃತ ಹೆಸರು, ಬೆಲೆ, ವಿವಿಧ ವೆರಿಯೆಂಟ್‌ಗಳು ಹಾಗೂ ಬಿಡುಗಡೆಯ ದಿನಾಂಕವನ್ನು ಹುಂಡೈ ಕಂಪನಿಯು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಿದೆ.


