ಉದ್ಯೋಗ ಕಳೆದುಕೊಂಡರೂ ನಿಮ್ಮ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ವಾರ್ಷಿಕ ಶೇ.8.25ರ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ. 35ನೇ ವಯಸ್ಸಿನಲ್ಲಿರುವ 10 ಲಕ್ಷ ರೂ. ಹಣವು ಯಾವುದೇ ಹೊಸ ಹೂಡಿಕೆಯಿಲ್ಲದೆ 50ನೇ ವಯಸ್ಸಿಗೆ 32.84 ಲಕ್ಷ ರೂ. ಆಗಿ ಬೆಳೆಯುತ್ತದೆ.
ನಿಮ್ಮ ಪಿಎಫ್(PF) ಖಾತೆಯಲ್ಲಿ 35ನೇ ವಯಸ್ಸಿನಲ್ಲಿ ₹10 ಲಕ್ಷ ಇದ್ದರೆ, ನಿಮಗೆ 50 ವರ್ಷ ತುಂಬುವ ಹೊತ್ತಿಗೆ ಈ ಮೊತ್ತ ₹32.84 ಲಕ್ಷಕ್ಕೆ ಬೆಳೆಯುತ್ತದೆ. ಆ ವೇಳೆಗಾಗಲೇ ನೀವು ಉದ್ಯೋಗ ಕಳೆದುಕೊಂಡಿದ್ದಾರೆ. ಅನರೀಕ್ಷಿತ ಘಟನೆಗಳಿಂದ ಉದ್ಯೋಗ ಮಾಡಲಾಗದೆ ಖಾತೆಗೆ ಯಾವುದೇ ಹೊಸ ಹಣ ಜಮೆಯಾಗದಿದ್ದರೂ 50ನೇ ವಯಸ್ಸಿನವರೆಗೆ ಈ ಮೊತ್ತ ₹32.84 ಲಕ್ಷದವರೆಗೆ ಬೆಳೆದಿರುತ್ತದೆ. ಇದಕ್ಕೆ ಕಾರಣ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಸಿಗುವ ಬಡ್ಡಿ. ಭವಿಷ್ಯದ ದೃಷ್ಟಿಯಿಂದ ಪಿಎಫ್ ಖಾತೆಯಲ್ಲಿ ಹಣ ಇರುವುದು ಯಾಕೆ ಮುಖ್ಯ ಎನ್ನುವುದು ಅರ್ಥವಾಯಿತೇ?
ನಿವೃತ್ತಿಗಾಗಿ ಹಣ ಉಳಿಸಲು ಇಪಿಎಫ್(EPF) ಉತ್ತಮ ಮಾರ್ಗ
ಭಾರತದಲ್ಲಿ ವ್ಯಾಪಾರಿಗಳಿಗಿಂತ ಸಂಬಳ ಪಡೆಯುವ ಉದ್ಯೋಗಿಗಳು ಸಂಖ್ಯೆಯೇ ಅಧಿಕ. ಇವರು ದೈನಂದಿನ ಖರ್ಚುಗಳ ನಡುವೆ ಭವಿಷ್ಯದಲ್ಲಿ ನಿವೃತ್ತಿಗಾಗಿ ಹಣ ಉಳಿಸಬೇಕು. ಭವಿಷ್ಯದಲ್ಲಿ ನಿವೃತ್ತಿಯಾದಾಗ ಯಾವುದೇ ಆದಾಯ ಇರುವುದಿಲ್ಲ. ಆಗ ಉಪಯೋಗಕ್ಕೆ ಬರುವುದೇ ಪಿಎಫ್. ಹೀಗಾಗಿ ಉದ್ಯೋಗಿಗಳ ನಿವೃತ್ತಿಯ ನಂತರ ಜೀವನಕ್ಕೆ ಹಣ ಉಳಿಸಲು ಭವಿಷ್ಯ ನಿಧಿ (EPF) ಪ್ರಮುಖ ಮಾರ್ಗವಾಗಿದೆ. ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಪಿಎಫ್‌ಗೆ ಕೊಡುಗೆ ನೀಡುತ್ತಾರೆ. ನಿಯಮದ ಪ್ರಕಾರ ಉದ್ಯೋಗಿಯ ಮೂಲ ವೇತನದ ಶೇ.12ರಷ್ಟು ಹಣವನ್ನು ಪಿಎಫ್‌ಗೆ ಕಡಿತ ಮಾಡಲಾಗುತ್ತದೆ. ಉದ್ಯೋಗದಾತರೂ ಶೇ.12ರಷ್ಟು ಕೊಡುಗೆ ನೀಡುತ್ತಾರೆ.
ಉದ್ಯೋಗಿಗಳು ಬಯಸಿದರೆ ಜೊತೆಗೆ ಹೆಚ್ಚುವರಿ ಹಣವನ್ನೂ ಪಿಎಫ್ ಖಾತೆಗೆ ಜಮಾ ಮಾಡಬಹುದು. ಇದನ್ನು ಸ್ವಯಂಪ್ರೇರಿತ ಭವಿಷ್ಯ ನಿಧಿ (VPF) ಎಂದು ಕರೆಯಲಾಗುತ್ತದೆ. ಇದಕ್ಕೂ ಪಿಎಫ್‌ನಲ್ಲಿರುವ ಹಣಕ್ಕೆ ಅನ್ವಯಿಸುವ ಬಡ್ಡಿದರವೇ ಸಿಗುತ್ತದೆ. ಪ್ರಸ್ತುತ ಪಿಎಫ್ ಬಡ್ಡಿದರ ಶೇ.8.25ರಷ್ಟಿದೆ. ಹೀಗಾಗಿ ಖಾತೆಯಲ್ಲಿರುವ ಹಣಕ್ಕೆ ಹೊಸದಾಗಿ ಹಣ ನೀಡದಿದ್ದರೂ ಅದರ ಮೇಲೆ ಬಡ್ಡಿ ಬೆಳೆಯುತ್ತಲೇ ಇರುತ್ತದೆ..
₹10 ಲಕ್ಷ 50 ವರ್ಷಕ್ಕೆ ಹೇಗೆ ₹32.84 ಲಕ್ಷವಾಗುತ್ತದೆ?
ಸದ್ಯ ನಿಮ್ಮ ವಯಸ್ಸು35 ವರ್ಷ ಭಾವಿಸೋಣ. ನಿಮ್ಮ ಪಿಎಫ್ ಖಾತೆಯಲ್ಲಿ ಈಗಾಗಲೇ ₹10 ಲಕ್ಷ ಇದೆ ಎಂದುಕೊಳ್ಳೋಣ. ಇದಾದ ನಂತರ ನೀವು ಯಾವುದೋ ಕಾರಣಕ್ಕಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರೆ, ಅಥವಾ ಕೆಲಸ ಕಳೆದುಕೊಂಡಿದ್ದರೆ ಖಾತೆಗೆ ಯಾವುದೇ ಹೊಸ ಹಣ ಜಮಾ ಮಾಡಲು ಆಗುತ್ತಿಲ್ಲ ಎಂದರೂ ಈಗಾಗಲೇ ಇರುವ ಹತ್ತು ಲಕ್ಷ ರೂಪಾಯಿ ಹಣಕ್ಕೆ ವಾರ್ಷಿಕ ಶೇ.8.25ರ ಬಡ್ಡಿದರ ಮುಂದುವರಿಯುತ್ತದೆ. ಅದು 15 ವರ್ಷಗಳ ಅವಧಿಯಲ್ಲಿ ಈ ಹಣದ ಮೇಲೆ ಬಡ್ಡಿ ಸೇರುತ್ತಾ ಹೋಗುತ್ತದೆ.
- ಆರಂಭಿಕ ಪಿಎಫ್ ಮೊತ್ತ: ₹10 ಲಕ್ಷ
- ವಯಸ್ಸು: 35 ವರ್ಷ
- ಅವಧಿ: 15 ವರ್ಷ
- ಅಂದಾಜು ಬಡ್ಡಿದರ: ಶೇ.8.25
- 15 ವರ್ಷಗಳಲ್ಲಿ ಅಂದಾಜು ಬಡ್ಡಿ: ₹22.84 ಲಕ್ಷ
- 50ನೇ ವಯಸ್ಸಿನಲ್ಲಿ ಒಟ್ಟು ಮೊತ್ತ: ₹32.84 ಲಕ್ಷ
ಅಂದರೆ, ಹೊಸದಾಗಿ ಯಾವುದೇ ಹಣ ಜಮೆ ಮಾಡದಿದ್ದರೂ ₹10 ಲಕ್ಷದ ಹಣವು ಬಡ್ಡಿ ಸೇರುವ ಮೂಲಕ ಸುಮಾರು ₹32.84 ಲಕ್ಷವಾಗಿರುತ್ತದೆ.
ಆದರೆ ಇದು ಅಂದಾಜಿನ ಲೆಕ್ಕಾಚಾರ. ಮುಂದಿನ ವರ್ಷಗಳಲ್ಲಿ ಪಿಎಫ್ ಬಡ್ಡಿದರ ಬದಲಾಗಬಹುದು. ಬಡ್ಡಿದರ ಕಡಿಮೆಯಾದರೆ ಅಂತಿಮ ಮೊತ್ತವೂ ಕಡಿಮೆಯಾಗಬಹುದು. ಅದೇ ರೀತಿ ಖಾತೆಗೆ ಹೊಸದಾಗಿ ಹಣ ಜಮೆಯಾದರೆ ನಿವೃತ್ತಿಯ ವೇಳೆಗೆ ಸಂಗ್ರಹವಾಗುವ ಹಣ ಇನ್ನಷ್ಟು ಹೆಚ್ಚಾಗಬಹುದು.
ಪಿಎಫ್ ಖಾತೆ ಯಾವಾಗ ನಿಷ್ಕ್ರಿಯವಾಗುತ್ತದೆ?
ಪಿಎಫ್ ಖಾತೆಗೆ ಹಣ ಜಮೆಯಾಗುತ್ತಿಲ್ಲ ಎಂದ ಮಾತ್ರಕ್ಕೆ ಅದು ತಕ್ಷಣ ನಿಷ್ಕ್ರಿಯವಾಗುವುದಿಲ್ಲ. ಕೆಲಸ ಬಿಟ್ಟ ನಂತರವೂ ಖಾತೆಯಲ್ಲಿರುವ ಹಣಕ್ಕೆ ನಿಯಮಾನುಸಾರ ಬಡ್ಡಿ ಮುಂದುವರಿಯುತ್ತದೆ.
2016ರಲ್ಲಿ ನಿಯಮಗಳಲ್ಲಿ ಬದಲಾವಣೆ ಮಾಡಿದ ನಂತರ, ಉದ್ಯೋಗದಲ್ಲಿದ್ದೀರೋ ಇಲ್ಲವೋ ಎಂಬುದನ್ನು ಆಧರಿಸಿ ಖಾತೆಗೆ ಬಡ್ಡಿ ನಿಲ್ಲುವುದಿಲ್ಲ. ಸಾಮಾನ್ಯವಾಗಿ 58 ವರ್ಷ ವಯಸ್ಸಿನವರೆಗೆ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಸಿಗುತ್ತದೆ. ಆದರೆ ನಿವೃತ್ತಿ, ವಿದೇಶದಲ್ಲಿ ಶಾಶ್ವತವಾಗಿ ನೆಲೆಸುವುದು ಅಥವಾ ಖಾತೆದಾರರ ಮರಣದಂತಹ ಸಂದರ್ಭಗಳಲ್ಲಿ ಮೂರು ವರ್ಷಗಳವರೆಗೆ ಯಾವುದೇ ಹಣ ಜಮಾ ಇಲ್ಲದಿದ್ದರೆ, ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸುವ ನಿಯಮಗಳಿವೆ.
ಹೀಗಾಗಿ ಕೆಲಸ ಕಳೆದುಕೊಂಡರೂ ಅಥವಾ ಉದ್ಯೋಗ ತೊರೆದರೂ, ಪಿಎಫ್ ಖಾತೆಯಲ್ಲಿರುವ ಹಣವನ್ನು ತಕ್ಷಣವೇ ಕಡಿಮೆ ಎಂದು ಭಾವಿಸುವ ಅಗತ್ಯವಿಲ್ಲ. ಹೊಸ ಹಣ ಜಮೆಯಾಗದಿದ್ದರೂ, ಖಾತೆಯಲ್ಲಿರುವ ಮೊತ್ತಕ್ಕೆ ಬಡ್ಡಿ ಸೇರುವುದರಿಂದ ನಿವೃತ್ತಿ ಉಳಿತಾಯ ನಿಧಾನವಾಗಿ ಬೆಳೆಯುತ್ತಲೇ ಇರಬಹುದು.


