ಜಿರೋಧಾ ಸಿಇಒ ನಿತಿನ್ ಕಾಮತ್ ತಮ್ಮ 21ನೇ ವಯಸ್ಸಿನಲ್ಲಿ ಮಾಡಿದ 25,000 ರೂ. ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು 2.5 ವರ್ಷ ಪರದಾಡಿದ್ದರು. ಈ ಕಹಿ ಅನುಭವದಿಂದ ಅವರು 12.5 ವರ್ಷಗಳ ಕಾಲ ಕ್ರೆಡಿಟ್ ಕಾರ್ಡ್ ಬಳಸಲಿಲ್ಲ. ಸಾಲ ಮಾಡಿ ವಿಲಾಸಿ ಜೀವನ ನಡೆಸುವುದು ಅಪಾಯಕಾರಿ ಎಂದಿದ್ದಾರೆ.
ಬೆಂಗಳೂರು (ಸೆ.19): ಭಾರತದ ಅತಿ ದೊಡ್ಡ ರಿಟೇಲ್ ಬ್ರೋಕರೇಜ್ ಸಂಸ್ಥೆಯಾದ 'ಜಿರೋಧಾ' (Zerodha) ಸಹ-ಸಂಸ್ಥಾಪಕ ಹಾಗೂ ಸಿಇಒ ನಿತಿನ್ ಕಾಮತ್ (Nithin Kamath), ತಮ್ಮ 20 ರ ಹರೆಯದ ಆರಂಭಿಕ ದಿನಗಳಲ್ಲಿ ಅನುಭವಿಸಿದ ₹25,000 ಗಳ ಕ್ರೆಡಿಟ್ ಕಾರ್ಡ್ ಸಾಲದ ಕಿರಿಕಿರಿ ತಮ್ಮ ಜೀವನದ ಅತಿ ದೊಡ್ಡ ಹಣಕಾಸಿನ ಪಾಠವಾಯಿತು ಎಂದು ಬಹಿರಂಗಪಡಿಸಿದ್ದಾರೆ. ಆ ಕಹಿ ಅನುಭವದಿಂದಾಗಿ ತಾವು ಬರೋಬ್ಬರಿ ಒಂದು ದಶಕಕ್ಕೂ ಹೆಚ್ಚು ಕಾಲ (12 ವರ್ಷ) ಕ್ರೆಡಿಟ್ ಕಾರ್ಡ್‌ಗಳಿಂದ ಸಂಪೂರ್ಣವಾಗಿ ದೂರವಿದ್ದೆ ಎಂದು ಅವರು ಹೇಳಿದ್ದಾರೆ.
'ಜಿರೋಧಾ ವಾರ್ಸಿಟಿ' (Zerodha Varsity) ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿತಿನ್ ಕಾಮತ್, ತಾವು 21 ನೇ ವಯಸ್ಸಿನಲ್ಲಿ ಜಿಮ್ಯಾಟ್ (GMAT) ಪರೀಕ್ಷೆಯ ಶುಲ್ಕ ಪಾವತಿಸಲು ಪ್ರಥಮ ಬಾರಿಗೆ ಕ್ರೆಡಿಟ್ ಕಾರ್ಡ್ ಸಾಲ ಪಡೆದುಕೊಂಡಿದ್ದೆ ಅನ್ನೋದನ್ನು ನೆನಪಿಸಿಕೊಂಡರು. ಆದರೆ, ಆ ಸಣ್ಣ ನಿರ್ಧಾರವೇ ತಮ್ಮನ್ನು ಸುದೀರ್ಘ ಅವಧಿಯ ಸಾಲದ ಸುಳಿಗೆ ಸಿಲುಕಿಸಿತು ಎಂದು ಅವರು ಹೇಳಿದ್ದಾರೆ.
"ನನಗೆ 21 ವರ್ಷವಿದ್ದಾಗ, ಜಿಮ್ಯಾಟ್ ಪರೀಕ್ಷಾ ಶುಲ್ಕ ಪಾವತಿಸಲು ನಾನು ಕ್ರೆಡಿಟ್ ಕಾರ್ಡ್ ತೆಗೆದುಕೊಂಡಿದ್ದೆ. ಆದರೆ, ನಾನು ಎಂಜಿನಿಯರಿಂಗ್ ಶಿಕ್ಷಣವನ್ನು ಪೂರ್ಣಗೊಳಿಸದ ಕಾರಣ ಆ ಜಿಮ್ಯಾಟ್ ಪರೀಕ್ಷೆಯನ್ನು ಎಂದಿಗೂ ಬರೆಯಲೇ ಇಲ್ಲ. ಆದರೂ ಆ ₹25,000 ಸಾಲವನ್ನು ತೀರಿಸಲು ನನಗೆ ಬರೋಬ್ಬರಿ ಎರಡುವರೆ ವರ್ಷಗಳು ಬೇಕಾದವು," ಎಂದು ನಿತಿನ್ ಕಾಮತ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
12.5 ವರ್ಷ ಕ್ರೆಡಿಟ್ ಕಾರ್ಡ್ ಬಳಸಲೇ ಇಲ್ಲ!
₹25,000 ಗಳ ಸಾಲವು ನಿತಿನ್ ಕಾಮತ್ ಅವರ ಹಣಕಾಸಿನ ದೃಷ್ಟಿಕೋನ ಹಾಗೂ ಸಾಲ ಪಡೆಯುವ ಮನಸ್ಥಿತಿಯನ್ನೇ ಸಂಪೂರ್ಣವಾಗಿ ಬದಲಾಯಿಸಿತು. 'ಎರಡೂವರೆ ವರ್ಷಗಳ ಕಷ್ಟದ ನಂತರ ಕೊನೆಗೂ ಆ ಸಾಲವನ್ನು ಪೂರ್ತಿಯಾಗಿ ತೀರಿಸಿದೆ. ತಕ್ಷಣವೇ ಆ ಕ್ರೆಡಿಟ್ ಕಾರ್ಡ್ ಅನ್ನು ಕತ್ತರಿಸಿ ಎಸೆದೆ. 2003 ರಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ನಾನು, ಮತ್ತೆ ಹೊಸ ಕ್ರೆಡಿಟ್ ಕಾರ್ಡ್ ಪಡೆದಿದ್ದು 2014 ರಲ್ಲಿ. ಅಂದರೆ ಸುಮಾರು 12.5 ವರ್ಷಗಳ ಕಾಲ ನಾನು ಯಾವುದೇ ಕ್ರೆಡಿಟ್ ಕಾರ್ಡ್ ಅನ್ನು ಬಳಸಲೇ ಇಲ್ಲ' ಎಂದು ಅವರು ವಿವರಿಸಿದ್ದಾರೆ.
ಸಾಲ ಮಾಡಿ ವಿಲಾಸಿ ಜೀವನ ನಡೆಸುವುದು ಅಪಾಯಕಾರಿ
ಯುವ ಉದ್ಯೋಗಿಗಳು ಮತ್ತು ಸಂಪಾದನೆ ಮಾಡುವ ಯುವ ಪೀಳಿಗೆಯಲ್ಲಿ ಕಂಡುಬರುವ ಅನಗತ್ಯ ಖರ್ಚು ಹಾಗೂ ಲೈಫ್‌ಸ್ಟೈಲ್ ಇನ್ಫ್ಲೇಶನ್ (ಆದಾಯ ಹೆಚ್ಚಿದಂತೆ ಖರ್ಚು ಹೆಚ್ಚಿಸಿಕೊಳ್ಳುವುದು) ಕುರಿತು ಮಾತನಾಡಿದ ಅವರು, ಭವಿಷ್ಯದ ಆದಾಯವನ್ನು ಅಂದಾಜಿಸಿ ವರ್ತಮಾನದಲ್ಲಿ ಸಾಲ ಮಾಡಿ ಖರ್ಚು ಮಾಡುವುದು ಭಾರಿ ಅಪಾಯಕಾರಿ ಎಂದಿದ್ದಾರೆ.
"ನನಗೂ ಕೂಡ ವಿಲಾಸಿಯಾಗಿ ಖರ್ಚು ಮಾಡುವ ಅಭ್ಯಾಸವಿದೆ. ಆದರೆ, ನಿಮ್ಮ ಸ್ವಂತ ಹಣದಲ್ಲಿದ್ದರೆ ಎಷ್ಟು ಬೇಕಾದರೂ ಖರ್ಚು ಮಾಡಿ, ಅದರಲ್ಲಿ ಯಾವುದೇ ತಪ್ಪಿಲ್ಲ. ಪ್ರವಾಸ, ಉತ್ತಮ ಆಹಾರ ಹಾಗೂ ಹೊಸ ಅನುಭವಗಳಿಗಾಗಿ ಹಣ ಖರ್ಚು ಮಾಡುವುದು ಒಳ್ಳೆಯದು, ಏಕೆಂದರೆ ಅದು ಜೀವನದ ದೃಷ್ಟಿಕೋನವನ್ನು ವಿಸ್ತರಿಸುತ್ತದೆ. ಆದರೆ, ಯಾರಿಂದಲೂ ಸಾಲ ಪಡೆದು ಆ ಖರ್ಚುಗಳನ್ನು ಮಾಡಬೇಡಿ. ಸಾಲ ಮಾಡದಿರುವುದೇ ಇಲ್ಲಿ ಅತ್ಯಂತ ಮುಖ್ಯವಾದ ವಿಚಾರ," ಎಂದು ಅವರು ಕಿವಿಮಾತು ಹೇಳಿದ್ದಾರೆ.
ಜಿರೋಧಾ ಸಂಸ್ಥೆಯ ಮೂಲಮಂತ್ರವಾದ 'ಸಾಲ ರಹಿತ' ಸಿದ್ಧಾಂತ
ಆರಂಭಿಕ ದಿನಗಳಲ್ಲಿ ಸಿಕ್ಕ ಈ ಸಾಲದ ಪಾಠವೇ ನಿತಿನ್ ಕಾಮತ್ ಅವರು 2010 ರಲ್ಲಿ ತಮ್ಮ ಸಹೋದರ ನಿಖಿಲ್ ಕಾಮತ್ ಅವರೊಂದಿಗೆ ಸೇರಿ 'ಜಿರೋಧಾ' ಸಂಸ್ಥೆಯನ್ನು ಕಟ್ಟಲು ಅಡಿಪಾಯವಾಯಿತು. ಯಾವುದೇ ಪ್ರಮುಖ ವೆಂಚರ್ ಕ್ಯಾಪಿಟಲ್ (VC) ನಿಧಿಯನ್ನು ಪಡೆಯದೆ, ಸಂಪೂರ್ಣವಾಗಿ ಸ್ವಂತ ಬಂಡವಾಳದಿಂದ (Bootstrapped) ಬೆಳೆದ ಜಿರೋಧಾ, ಇಂದು ದೇಶದ ಅಗ್ರಗಣ್ಯ ಬ್ರೋಕರೇಜ್ ಸಂಸ್ಥೆಯಾಗಿ ಹೊರಹೊಮ್ಮಿದೆ.
ಸಂಸ್ಥೆಯನ್ನು ಪ್ರಾರಂಭಿಸುವ ಮೊದಲು, ಹದಿಹರೆಯದಲ್ಲೇ ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಆರಂಭಿಸಿದ್ದ ನಿತಿನ್ ಕಾಮತ್, ವರ್ಷಗಳ ಕಾಲ ಟ್ರೇಡರ್ ಹಾಗೂ ಸಬ್-ಬ್ರೋಕರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಕಡಿಮೆ ವೆಚ್ಚ ಹಾಗೂ ತಂತ್ರಜ್ಞಾನ ಆಧಾರಿತ ಮಾದರಿಯ ಮೂಲಕ ಜಿರೋಧಾವನ್ನು ಯಶಸ್ಸಿನ ತುದಿಗೆ ತಲುಪಿಸಿದರು. "ನನ್ನ ಇಡೀ ಉದ್ಯಮ ಪಯಣದಲ್ಲಿ ಎಲ್ಲೂ ಸಾಲ ಮಾಡಬಾರದು ಎಂಬುದೇ ನನ್ನ ಸ್ಪಷ್ಟ ನಿಯಮವಾಗಿತ್ತು. ಅನೇಕ ಜನರು ತಮ್ಮ ಭವಿಷ್ಯದ ಆದಾಯವನ್ನು ಲೆಕ್ಕ ಹಾಕಿ 'ನನಗೇನೂ ಆಗಲ್ಲ, ತೀರಿಸಬಲ್ಲೆ' ಎಂದು ಭಾವಿಸಿ ಸಾಲ ಮಾಡಿ ಖರ್ಚು ಮಾಡುತ್ತಾರೆ. ಆದರೆ ಅದು ಕೆಲವೊಮ್ಮೆ ದೊಡ್ದ ಆರ್ಥಿಕ ಬಲೆಯಾಗಿ ಮಾರ್ಪಡುತ್ತದೆ," ಎಂದು ನಿತಿನ್ ಕಾಮತ್ ಎಚ್ಚರಿಸಿದ್ದಾರೆ.


