ಮಳೆ ಚಚ್ಚುತ್ತಿದೆ, ಬದುಕು ಕೊಚ್ಚಿಹೋಗುತ್ತಿದೆ. ನೆಲಮುಗಿಲು ಒಂದಾದಂತೆ ಕುಂಭದ್ರೋಣ ಮಳೆ ಮುಸಲಧಾರೆಯಾಗುತ್ತಿದೆ. ಇಂಥ ಮಳೆಯನ್ನು ನಾವು ನೋಡೇ ಇಲ್ಲ ಅನ್ನುತ್ತಾರೆ ಹಿರಿಯರು. ಕುಸಿದ ಮನೆಗಳು, ಜರಿದ ಗುಡ್ಡಗಳು, ಮುಳುಗಿದ ತೋಟಗಳು, ನೆಲವೆಲ್ಲ ಸಪಾಟಾದಂತೆ ಎಲ್ಲೆಲ್ಲೂ ಬರೀ ಕೆಂಪು ಕೆಂಪು ನೀರು. ಮಳೆಯ ವಿರುದ್ಧ ಈಜಲು ಹೊರಟ ನೆಲದ ತೋಳು ಕುಸಿದಿದೆ. ಇಂಥ ಜಲಪ್ರಳಯದ ಹೊತ್ತಲ್ಲೂ ಮತ್ತೊಬ್ಬರಿಗೆ ನೆರವಾಗುತ್ತಾ, ಮಳೆಯನ್ನೂ ಲೆಕ್ಕಿಸದೇ ಜೀವನ್ಮರಣದ ನಡುವೆ ಹೋರಾಡುತ್ತಾ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಜಾನುವಾರುಗಳನ್ನು ರಕ್ಷಿಸುತ್ತಾ, ಮಳೆಯಲ್ಲಿ ನಡುಗುವ ಮಕ್ಕಳ ನೆತ್ತಿಯೊರೆಸುತ್ತಾ ಮಾತೃರೂಪಿ ಕೈಯೊಂದು ಎಲ್ಲವನ್ನೂ ಸಲಹುತ್ತಿದೆ. ಒದ್ದೆಯಾಗಿರುವುದು ಬರೀ ನೆಲವಷ್ಟೇ ಅಲ್ಲ, ಕಣ್ಣು ಕೂಡ. ಇಂಥ ಹೊತ್ತಲ್ಲಿ ಮಳೆಯನ್ನು ಎದುರಿಸಿ ನಿಂತು ಹಲ್ಲುಕಚ್ಚಿಹಿಡಿದು ಕಾಯುತ್ತಿರುವ ಎಲ್ಲರಿಗೂ ನಮನಗಳನ್ನು ಸಲ್ಲಿಸುತ್ತಾ ಈ ಮಳೆ ಸಂಚಿಕೆಯ ಮೂಲಕ ಕೃತಜ್ಞತೆ ಸಲ್ಲಿಸುತ್ತಿದೆ ಸಾಪ್ತಾಹಿಕ ಪ್ರಭ