ಬೆಳಗಾವಿ[ಆ.11]: ಮೊದಲಿಗೆ ಸರ್ಕಾರವನ್ನು ದೂಷಿಸುವುದಿಲ್ಲ ಎಂದು ಮೊದಲಿಗೆ ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಹೇಳಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದಾದ ಸ್ವಲ್ಪ ಸಮಯದಲ್ಲೇ ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಪರಿಹಾರ ಕೇಂದ್ರದಲ್ಲಿ ನೆರೆ ಸಂತ್ರಸ್ತರ ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈ ವೇಳೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿಗಳೇ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಬ್ಬರೇ ಪ್ರವಾಹ ಪೀಡಿತ ಪ್ರದೇಶ ಪರಿಶೀಲಿಸುತ್ತಿದ್ದಾರೆ. ಈ ಭಾಗದ ಅಧಿಕಾರಿಗಳು ನೆರೆ ಸಂತ್ರಸ್ತರ ವಿಚಾರದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದ ಅವರು, ನಾನು ಸರ್ಕಾರವನ್ನು ದೂಷಿಸುವುದಿಲ್ಲ ಎಂದಿದ್ದರು.

ಇದಾದ ಬಳಿಕ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ನೆರೆ ಪೀಡಿತ ಕೆಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರದಲ್ಲಿ ಆರ್ಥಿಕವಾಗಿ ಯಾವುದೇ ರೀತಿ ಸಮಸ್ಯೆಗಳು ಇಲ್ಲದಿದ್ದರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದುವರೆಗೂ ಯಾರಿಗೂ ಪರಿಹಾರ ಕೊಟ್ಟಿಲ್ಲ. ಒಂದೆಡೆ ಯಡಿಯೂರಪ್ಪನವರಿಗೆ ವಯಸ್ಸಿನ ಸಮಸ್ಯೆ ಕಾಡುತ್ತಿರಬಹುದು. ಮತ್ತೊಂದೆಡೆ ಸಚಿವ ಸಂಪುಟ ಇಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬಹಳ ಸಮರ್ಥರಿದ್ದಾರೆ. ಅವರ ಸಲಹೆ ಪಡೆದುಕೊಂಡು ಪರಿಹಾರೋಪಾಯ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಬೇಕು ಎಂದರು.

ಹಣ ಖರ್ಚು ಮಾಡಲಿಕ್ಕೆ ಸರ್ಕಾರದಲ್ಲಿ ಅವಕಾಶಗಳಿವೆ. ಕೇಂದ್ರ ಸರ್ಕಾರದ ಮುಂದೆ ಮನವಿ ಮಾಡಬೇಕು. ನಾನು ಕೆಲವು ಗಂಜಿ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಯಾರಿಗೂ ಪರಿಹಾರ ಕೊಟ್ಟಿಲ್ಲ. ಕಳೆದ ಬಾರಿ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಪರಿಹಾರ ಕೇಂದ್ರಗಳಲ್ಲಿದ್ದ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಿದ್ದೆ. ಆದರೆ, ರಾಜ್ಯ ಸರ್ಕಾರ ಇದುವರೆಗೂ ಪರಿಹಾರ ನೀಡಿಲ್ಲ ಎಂದು ದೂರಿದರು.

ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಶಾಶ್ವತ ಸೂರು ನೀಡುವುದು ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು. ಸಾಧ್ಯವಾದರೆ ಪ್ರಧಾನಿ ಅವರನ್ನೇ ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದರು.