ಸಂತ್ರಸ್ತರಿಗೆ ತಕ್ಷಣ ಪರಿಹಾರ: ಹಣಕಾಸು ಸಚಿವರ ಭರವಸೆಯ ಮಾತು
ಮುಳುಗಿರುವ ಬೆಳೆಗೆ ತಕ್ಷಣ ಪರಿಹಾರ ಒದಗಿಸಲಾಗುವುದು ಎಂದು ಸಂತ್ರಸ್ತರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರವಸೆಯ ನೀಡಿದ್ದಾರೆ. ಹಾಗಾದ್ರೆ ಪ್ರವಾಹ ವೀಕ್ಷಿಸಿ ದೆಹಲಿಗೆ ಹೊರಡುವ ಮುನ್ನ ಹಣಕಾಸು ಸಚಿವರು ಏನೆಲ್ಲ ಹೇಳಿದರು ಅನ್ನೋದನ್ನು ಮುಂದೆ ಓದಿ.
ಬೆಳಗಾವಿ, [ಆ.10]: ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಮುಳುಗಿರುವ ಬೆಳೆಗೆ ತಕ್ಷಣವೇ ತಾತ್ಕಾಲಿಕ ಪರಿಹಾರವನ್ನು ನೀಡುವಂತೆ ವಿಮಾ ಕಂಪೆನಿಗಳಿಗೆ ಸೂಚನೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಇಂದು [ಶನಿವಾರ] ಭೇಟಿ ಹಾಗೂ ವೈಮಾನಿಕ ಸಮೀಕ್ಷೆ ಬಳಿಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಳೆವಿಮೆ ಕಂಪನಿಗಳು ಪ್ರವಾಹ ಬಾಧಿತ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ, ಮುಳುಗಡೆಯಾಗಿರುವ ಬೆಳೆಯ ಸಮೀಕ್ಷೆಗೆ ಮುಂದಾಗದೇ ತಕ್ಷಣವೇ ತಾತ್ಕಾಲಿಕವಾಗಿ ಪರಿಹಾರ ನೀಡಬೇಕು. ಸಮೀಕ್ಷೆ ಹಾಗೂ ಹೆಚ್ಚಿನ ಪರಿಹಾರದ ಬಗ್ಗೆ ನಂತರ ನಿರ್ಧರಿಸಬೇಕು ಎಂದು ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಬೆಳೆವಿಮೆ ಕಂತು ಪಾವತಿಸುವ ಅವಧಿಯನ್ನು ವಿಸ್ತರಿಸುವ ಅಗತ್ಯತೆ ತಮಗೆ ಮನವರಿಕೆಯಾಗಿದೆ. ಆದ್ದರಿಂದ ಬೆಳೆವಿಮೆ ಕಂತು ಪಾವತಿಸುವ ಅವಧಿ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.