ನೇಪಾಳ ಪ್ರವಾಹ ರಕ್ಷಣಾ ಕಾರ್ಯದಲ್ಲಿ ಬರೋಬ್ಬರಿ 9 ದಿನ ಬಳಿಕ ಇಬ್ಬರು ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲಾಗಿದೆ. ಜಗತ್ತಿಗೆ ಅಚ್ಚರಿಯಾಗಿತ್ತು. ಆದರೆ ಇವರು ಇಷ್ಟು ದಿನ ಬದುಕುಳಿದ ಹಿಂದಿನ ಘಟನೆಯನ್ನು ಕಾರ್ಮಿಕರೇ ಬಹಿರಂಗಪಡಿಸಿದ್ದಾರೆ

ಕಾಠ್ಮಂಡು (ಸೆ.04) ನೇಪಾಳದ ಪ್ರವಾಹ ಭೀಕರತೆಗೆ ಜಗತ್ತೇ ಬೆಚ್ಚಿ ಬಿದ್ದಿದೆ. ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಇದರ ನಡುವೆ ಬರೋಬ್ಬರಿ 9 ದಿನದ ಬಳಿಕ ಇಬ್ಬರು ಸುರಂಗ ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಇದು ಪವಾಡವೇ ಸರಿ. ಇದುವರೆಗೂ 9 ದಿನ ಬಳಿಕ ರಕ್ಷಿಸಿದ ಉದಾಹರಣೆ ಇಲ್ಲ. ಆದರೆ ಈ ಇಬ್ಬರು ಕಾರ್ಮಿಕರನ್ನು 9 ದಿನ ಜೀವಂತವಾಗಿರಿಸಿದ್ದು ಹಾಗೂ ರಕ್ಷಣಾ ತಂಡ ಇಬ್ಬರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲು ಸಾಧ್ಯವಾಗಿದ್ದು ಶ್ರೀಕೃಷ್ಣ ಮಹಾಮಂತ್ರ ಎಂದು ಕಾರ್ಮಿಕ ಸಂಜಯ್ ಶಾ ಹೇಳಿದ್ದಾರೆ.

ದೇವರ ಜಪಿಸುತ್ತಾ 9 ದಿನ

ನೇಪಾಳದ ಪ್ರವಾಹದಲ್ಲಿ ಸಿಲುಕಿದ ಸುರಂಗ ಕಾರ್ಮಿಕರು ತಮ್ಮ ರಕ್ಷಣೆಗೆ ಶ್ರೀಕೃಷ್ಣ ಮಹಾಮಂತ್ರ ಜಪಿಸಿದ್ದಾರೆ. ನೆಪಾಳದ ಶಕ್ತಿ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಸಂಜಯ್ ಶಾ ಈ ಮಾತು ಹೇಳಿದ್ದಾರೆ. ನಮ್ಮ ಎಲ್ಲಾ ಬಾಗಿಲು ಮುಚ್ಚಿತ್ತು. ನೀರು, ಮಣ್ಣು ಸುರಂದೊಳಗೆ ಸೇರಿತ್ತು. ನಾವು ಹಲವರಿದ್ದೆವು. ದೇವರ ನಾಮ ಜಪಿಸುತ್ತಾ, ಮಹಾಮಂತ್ರಿ ಜಪಿಸುತ್ತಾ 9 ದಿನ ಕಳೆದೆವು. ಈ ಪ್ರಾರ್ಥನೆ ನಮ್ಮನ್ನು ಭರವಸೆ ಕಳೆದುಕೊಳ್ಳದಂತೆ ಮಾಡಿತು ಎಂದು ಸಂಜಯ್ ಶಾ ಹೇಳಿದ್ದಾರೆ.

ಅಪಾಯದ ಸೂಚನೆ ಸಿಕ್ಕ ತಕ್ಷಣ ಅಲರ್ಟ್ ನೀಡಲಾಯಿತು.ಆದರೆ ಪ್ರವಾಹದ ವೇಗದ ಮುಂದೆ ನಮಗೆ ಎಲ್ಲರನ್ನು ರಕ್ಷಿಸಿ ನಾವು ಹೊರಬರಲು ಸಾಧ್ಯವಾಗಲಿಲ್ಲ. ಇತರರ ಬಿಟ್ಟು ನಾನು ಸುರಕ್ಷಿತವಾಗಲು ಹೇಗೆ ಸಾಧ್ಯ. ಇತರರ ಉಳಿಸುವ ಪ್ರಯತ್ನದಲ್ಲಿ ನಮಗೆ ಸುರಕ್ಷಿತವಾಗುವ ಮಾರ್ಗಗಳು ಬಂದ್ ಆಯಿತು. ನೀರು, ಮಣ್ಣುು ನುಗ್ಗಿತ್ತು. ಎಲ್ಲಾ ಮಾರ್ಗ ಮುಚ್ಚಿ ಹೋಯಿತು. ನಾವು ಸುರಂಗದಲ್ಲಿ ಸಿಲುಕಿದೆವು. ಹೊರಬರಲು ಯಾವ ದಾರಿಯೂ ಇರಲಿಲ್ಲ ಎಂದು ಸಂಜಯ್ ಶಾ ಹೇಳಿದ್ದಾರೆ.

ದೇವರು ಕಾಪಾಡುತ್ತಾನೆ ಅನ್ನೋ ನಂಬಿಕೆ ಇತ್ತು

ಯಾರು ಎಲ್ಲಿದ್ದಾರೆ ಅನ್ನೋದು ತಿಳಿಯದಾಯಿತು. ನನ್ನ ಸುತ್ತಲೂ ಆರು ಮಂದಿ ಇದ್ದರು. ನಾವು ಧೈರ್ಯ ಕಳೆದುಕೊಳ್ಳಲಿಲ್ಲ. ದೇವರನ್ನು ಪ್ರಾರ್ಥಿಸಿದೆವು. ಶ್ರೀಕೃಷ್ಣ ಮಹಾಮಂತ್ರ ಪಠಿಸಿದೆವು. 9 ದಿನ ಆಹಾರ, ನೀರು ಇಲ್ಲದೆ ಮಾತ್ರವಲ್ಲ, ನಾವು ಬದುಕುತ್ತಿವೋ ಅನ್ನೋ ಯಾವ ಭರವಸೆ ಇಲ್ಲದೆ ಜೀವಂತವಾಗಿ ಉಳಿಯುವುದು ಸವಾಲಾಗಿತ್ತು. ಮಹಾಮಂತ್ರ ಪಠಿಸುತ್ತಾ ದೇವರ ಜಪ ಮಾಡುತ್ತಾ ಕಳೆದೆವು. ಹೇಗಾದರೂ ಭಗವಂತ ಕಾಪಾಡುತ್ತಾನೆ ಅನ್ನೋ ನಂಬಿಕೆ ಇತ್ತು. ಇದೀಗ ಹೊಸ ಜನ್ಮ ಸಿಕ್ಕಿದೆ ಎಂದು ಸಂಜಯ್ ಶಾ ಹೇಳಿದ್ದಾರೆ.

4.5 ಕಿಲೋಮೀಟರ್ ಉದ್ದದ ಸುರಂಗ, ಇದರ ನೀರು, ಮಣ್ಣು ಒಳಗೆ ಸೇರಿದರೂ ಉಸಿರಾಡಲು ಕೊಂಚ ಗಾಳಿಯ ಲಭ್ಯತೆ ಇತ್ತು. ಜೊತೆಗೆ ಸುರಂಗದ ಒಳಗೆ ಸೇರಿದ ಪ್ರವಾಹ ನೀರೆ ಕುಡಿದು ಜೀವ ಉಳಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ರಕ್ಷಣಾ ಪಡೆಗಳು ಇಬ್ಬರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದೆ.