ಮಂಗಳೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪರೀಕ್ಷಾರ್ಥ ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ. ಯಶವಂತಪುರ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ವರೆಗೆ ನಡೆಯಲಿರುವ ಈ ಪ್ರಾಯೋಗಿಕ ಓಟದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಮಂಗಳೂರು (ಸೆ.4): ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಘಾಟ್ ವಿಭಾಗದಲ್ಲಿ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿರುವ ವಂದೇ ಭಾರತ್ ಇದೀಗ ಬೆಂಗಳೂರು-ಮಂಗಳೂರು ನಡುವೆ ಇಡೀ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರಕ್ಕೆ ದಿನ ನಿಗದಿಪಡಿಸಿದೆ. ಶನಿವಾರ ಬೆಂಗಳೂರಿನ ಯಶವಂತಪುರ ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಪರೀಕ್ಷಾರ್ಥ ಸಂಚಾರ ನಡೆಸಲಿದೆ.

ತಾತ್ಕಾಲಿಕ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿ

ಯಶವಂತಪುರ ಜಂಕ್ಷನ್‌ನಿಂದ ಮಂಗಳೂರಿಗೆ ಬೆಳಗ್ಗೆ 6.05ಕ್ಕೆ ರೈಲು ಹೊರಡಲಿದ್ದು, ಹಾಸನಕ್ಕೆ 9 ಗಂಟೆಗೆ ಬರಲಿದೆ, ಅಲ್ಲಿಂದ 9.05ಕ್ಕೆ ಹೊರಡಲಿದ್ದು, ಸಕಲೇಶಪುರಕ್ಕೆ 9.55ಕ್ಕೆ ತಲುಪಲಿದೆ. ಅಲ್ಲಿಂದ 10 ಗಂಟೆಗೆ ಹೊರಡಲಿರುವ ರೈಲು ಸುಬ್ರಹ್ಮಣ್ಯ ರಸ್ತೆಗೆ ಮಧ್ಯಾಹ್ನ 12.30ಕ್ಕೆ ತಲುಪಲಿದೆ. ಅಲ್ಲಿಂದ 12.35ಕ್ಕೆ ಹೊರಡುವ ರೈಲು, ಮಧ್ಯಾಹ್ನ 2.25ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ.

ಇನ್ನು ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿರುವ ರೈಲು ಸುಬ್ರಹ್ಮಣ್ಯ ರಸ್ತೆ ರೈಲ್ವೇ ಸ್ಟೇಷಲ್‌ನೆ ಸಂಜೆ 4.30ಕ್ಕೆ ತಲುಪಲಿದೆ. ಸಕಲೇಶಪುರಕ್ಕೆ ಸಂಜೆ 6.30, ಹಾಸನಕ್ಕೆ ರಾತ್ರಿ 9.20 ಹಾಗೂ ಯಶವಂತಪುರ ಜಂಕ್ಷನ್‌ಗೆ ರಾತ್ರಿ 11 ಗಂಟೆಗೆ ತಲುಪಲಿದೆ.

ಯಶವಂತಪುರ - ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಅಧಿಕೃತ ಟಿಕೆಟ್ ದರವನ್ನು ರೈಲ್ವೆ ಇಲಾಖೆ ಇನ್ನು ಪ್ರಕಟಿಸಿಲ್ಲ. ಸದ್ಯಕ್ಕೆ ಕೇವಲ ಪ್ರಾಯೋಗಿಕ ಸಂಚಾರ (Trial Run) ಮಾತ್ರ ನಡೆಯುತ್ತಿರುವುದರಿಂದ, ವಾಣಿಜ್ಯ ಸಂಚಾರ ಆರಂಭವಾಗುವ ಮುನ್ನ ದರ ಪಟ್ಟಿ ಬಿಡುಗಡೆಯಾಗಲಿದೆ.