ಪಶುವೈದ್ಯಾಧಿಕಾರಿಗಳ ಹುದ್ದೆ ಮಾರಾಟ ಸಂಬಂಧ ಕೆಪಿಎಸ್‌ಸಿ ಕಚೇರಿಯಲ್ಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರಿಗೆ ಒಂದು ಕೋಟಿ ರೂ. ಸಂದಾಯವಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಜ್ಞಾನೇಂದ್ರ ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಶುವೈದ್ಯಾಧಿಕಾರಿಗಳ ಹುದ್ದೆ ಮಾರಾಟ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಯಲ್ಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರಿಗೆ ಒಂದು ಕೋಟಿ ರು. ನಗದು ಸಂದಾಯವಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಈ ಹಣವನ್ನು ಕೆಪಿಎಸ್‌ಸಿ ಸಿಬ್ಬಂದಿ ಮೂಲಕ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರಿಗೆ ಬಸವರಾಜ್ ಕನ್ನಾಳೆ ಗ್ಯಾಂಗ್ ತಲುಪಿಸಿದ್ದು, ಈ ಹಣ ಪೂರೈಕೆ ಸಂಬಂಧ ಸಿಐಡಿ ಮುಂದೆ ಕೆಪಿಎಸ್‌ಸಿ ಸಿಬ್ಬಂದಿ ಗುಟ್ಟು ರಟ್ಟು ಮಾಡಿದ್ದಾರೆ ಎನ್ನಲಾಗಿದೆ.
ಪಶುವೈದ್ಯಾಧಿಕಾರಿ ಹುದ್ದೆಗಳ ಬಿಕರಿ ವಿಚಾರವಾಗಿ ಇದೇ ವರ್ಷದ ಜನವರಿಯಲ್ಲಿ ಜ್ಞಾನೇಂದ್ರ ಮತ್ತು ಬಸವರಾಜು ಮಧ್ಯೆ ಹಲವು ಬಾರಿ ಮಾತುಕತೆ ನಡೆದಿದೆ. ಆದರೆ ಅಭ್ಯರ್ಥಿಗಳ ಜತೆ ನೇರವಾಗಿ ಜ್ಞಾನೇಂದ್ರ ಡೀಲ್ ಕುದುರಿಸಿಲ್ಲ. ತನ್ನ ನಂಬಿಕಸ್ಥ ಬಂಟ ಬಸವರಾಜ್ ಕನ್ನಾಳೆ ಮೂಲಕವೇ ಅವರು ವ್ಯವಹರಿಸಿದ್ದು. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಐಎಎಸ್ ಅಧಿಕಾರಿ ನಡುವೆ ಮಧ್ಯವರ್ತಿಯಾಗಿ ಕನ್ನಾಳೆ ಕೆಲಸ ಮಾಡಿದ್ದಾನೆ. ಹಣದ ವ್ಯವಹಾರ ಸಹ ಆತನೇ ನಡೆಸಿದ್ದಾನೆ ಎನ್ನಲಾಗಿದೆ.
ಹೀಗೆ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಹಣವನ್ನು ಬ್ಯಾಗ್‌ನಲ್ಲಿ ತುಂಬಿ ಜ್ಞಾನೇಂದ್ರ ಅವರಿಗೆ ಕನ್ನಾಳೆ ಗ್ಯಾಂಗ್ ತಲುಪಿಸಿದೆ. ತನ್ನ ಸಿಬ್ಬಂದಿ ಕಳುಹಿಸಿ ಕೆಪಿಎಸ್‌ಸಿ ಕಚೇರಿಗೆ ಆ ಹಣವನ್ನು ಅವರು ತರಿಸಿಕೊಂಡಿದ್ದರು. ಈ ಸಂಬಂಧ ಕೆಲ ಸಿಬ್ಬಂದಿಯನ್ನು ಸಿಐಡಿ ವಿಚಾರಣೆಗೊಳಪಡಿಸಿದೆ ಎಂದು ಮೂಲಗಳು ಹೇಳಿವೆ.
ಸಿಸಿಟಿವಿ ಕ್ಯಾಮೆರಾ ಪರಿಶೀಲನೆ
ಈ ಅಕ್ರಮ ಶಂಕೆ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಸಿಐಡಿ ಜಪ್ತಿ ಮಾಡಿ ಪರಿಶೀಲಿಸಿದೆ. ಆದರೆ ಮೂರು ತಿಂಗಳವರೆಗೆ ಮಾತ್ರ ಆ ಕ್ಯಾಮೆರಾಗಳು ದತ್ತಾಂಶ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜನವರಿಯಲ್ಲಿ ತಿಂಗಳ ಡೇಟಾ ಪತ್ತೆಯಾಗಿಲ್ಲ. ಆದರೆ ತಾಂತ್ರಿಕತೆ ಬಳಸಿ ದತ್ತಾಂಶ ಸಂಗ್ರಹಕ್ಕೆ ಸೈಬರ್ ತಜ್ಞರ ನೆರವನ್ನು ಸಿಐಡಿ ಪಡೆದಿದೆ ಎಂದು ತಿಳಿದು ಬಂದಿದೆ.
ಕೆಪಿಎಸ್ಸಿ ಅಕ್ರಮ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅಮಾನತು
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಜ್ಞಾನೇಂದ್ರ ಕುಮಾರ್ ಅವರು ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂಬ ಗಂಭೀರ ಆರೋಪಗಳಿವೆ. ಅದಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರ ಜತೆಗೆ ಸಿಐಡಿ ಪೊಲೀಸರು ಜ್ಞಾನೇಂದ್ರ ಕುಮಾರ್ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಅಖಿಲ ಭಾರತ ಸೇವಾ ನಿಯಮಗಳ ಪ್ರಕಾರ ಅಧಿಕಾರಿಯೊಬ್ಬರು 48 ಗಂಟೆಗಳಿಗೂ ಹೆಚ್ಚಿನ ಕಾಲ ಪೊಲೀಸ್ ವಶದಲ್ಲಿ ಅಥವಾ ನ್ಯಾಯಾಂಗ ಬಂಧನದಲ್ಲಿರುವಾಗ ಅವರನ್ನು ಅಮಾನತುಗೊಳಿಸುವುದು ಕಡ್ಡಾಯ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆ ಬಾಕಿ ಇರುವವರೆಗೆ ಜ್ಞಾನೇಂದ್ರ ಕುಮಾರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಅಮಾನತು ಸಂದರ್ಭದಲ್ಲಿ ಜ್ಞಾನೇಂದ್ರ ಕುಮಾರ್ ಅವರು ರಾಜ್ಯ ಸರ್ಕಾರದ ಲಿಖಿತ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೆಪಿಎಸ್‌ಸಿ ಅಕ್ರಮ: ಸಾಹುಕಾರ್‌ಗೆ ಸಿಐಡಿ ನೋಟಿಸ್, ಬಂಧನ ಭೀತಿ
ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ 2ನೇ ಬಾರಿಗೆ ವಿಚಾರಣೆಗೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ. ಈ ನೋಟಿಸ್ ಬೆನ್ನಲ್ಲೇ ಶಿವಶಂಕರಪ್ಪ ಅವರಿಗೆ ಬಂಧನ ಭೀತಿ ಹೆಚ್ಚಾಗಿದೆ. ಇದುವರೆಗೆ ತನಿಖೆಯಲ್ಲಿ ಲಭ್ಯವಾದ ಮಾಹಿತಿ ಆಧರಿಸಿ ಆಯೋಗದ ಅಮಾನತುಗೊಂಡಿರುವ ಅಧ್ಯಕ್ಷರ ವಿಚಾರಣೆಗೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಸಿಐಡಿ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ಎರಡು ದಿನಗಳಲ್ಲಿ ಹಾಜರಾಗುವಂತೆ ಶಿವಶಂಕರಪ್ಪ ಅವರಿಗೆ ತನಿಖಾಧಿಕಾರಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಥವಾ ಶನಿವಾರ ಸಿಐಡಿ ಮುಂದೆ ಅವರು ಹಾಜರಾಗಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಇದೇ ಪ್ರಕರಣ ಸಂಬಂಧ ಕಳೆದ ವಾರ ಸಿಐಡಿ ವಿಚಾರಣೆಯನ್ನು ಶಿವಶಂಕರಪ್ಪ ಎದುರಿಸಿದ್ದರು. ಆಗ ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಅವರಿಗೆ ಸಿಐಡಿ ಅಧಿಕಾರಿಗಳು ಸೂಚಿಸಿದ್ದರು. ಈ ಹಗರಣದಲ್ಲಿ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಬಂಧನವಾಗಿದೆ. ಹೀಗಾಗಿ ಈ ಇಬ್ಬರು ಆರೋಪಿಗಳು ವಿಚಾರಣೆ ವೇಳೆ ನೀಡಿರುವ ಹೇಳಿಕೆ ಆಧರಿಸಿ ಶಿವಶಂಕರಪ್ಪ ಅವರನ್ನು ಅಧಿಕಾರಿಗಳು ಪ್ರಶ್ನಿಸಲಿದ್ದಾರೆ ಎಂದು ತಿಳಿದು ಬಂದಿದೆ.


