ನೇಪಾಳದ ಪ್ರವಾಹದ ಬೆನ್ನಲ್ಲೇ ಭಾರತ ಸರ್ಕಾರ 5 ವಿಮಾನಗಳಲ್ಲಿ ಔಷಧ ಸೇರಿದಂತೆ ಪರಿಹಾರ ಸಾಮಾಗ್ರಿ ಕಳುಹಿಸಿಕೊಟ್ಟಿದೆ. ನೇಪಾಳ ಜೊತೆ ನಾವಿದ್ದೇವೆ ಎಂದು ಮೋದಿ ಧೈರ್ಯ ತುಂಬಿದ್ದರು. ಆದರೆ ನೇಪಾಳಕ್ಕೆ ಆದ ಹಾನಿಗೆ ಭಾರತ ಪರಿಹಾರ ನೀಡಬೇಕು ಎಂದು ಬಲೆನ್ ಶಾ ಆಗ್ರಹಿಸಿದ್ದಾರೆ.
ನವದೆಹಲಿ (ಸೆ.02) ನೇಪಾಳದ ಪ್ರವಾಹದ ಸಾವು ನೋವುಗಳ ಸಂಖ್ಯೆ ಆತಂಕ ಹೆಚ್ಚಿಸುತ್ತಿದೆ. ಹಿಮಪಾತದಿಂದ ಸೃಷ್ಟಿಯಾದ ಪ್ರವಾಹದಲ್ಲಿ 4000ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಶಾಲೆಗೆ ಹೋದ ಮಕ್ಕಳು ಓಡೋಡಿ ಬಂದಾಗ ಪೋಷಕರು, ಮನೆ ಯಾವುದೂ ಇಲ್ಲ. ನಾಪತ್ತೆಯಾದ ಪೋಷಕರಿಗಾಗಿ ಮಕ್ಕಳು ಅಳುತ್ತಿದ್ದಾರೆ. ಒಂದೊಂದು ಕಣ್ಣೀರ ಕತೆಗಳು ಹೊರಬರುತ್ತಿದೆ. ಈ ದುರಂತ ಸಂದರ್ಭದಲ್ಲಿ ಭಾರತ ಸರ್ಕಾರ ನೇಪಾಳಕ್ಕೆ ನೆರವಿನ ಅಭಯ ನೀಡಿತ್ತು. ಇದರಂತೆ 5 ವಿಮಾನಗಳಲ್ಲಿ ಔಷದಿ ಸೇರಿದಂತೆ ಹಲವು ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿತು. ಇದೀಗ ನೇಪಾಳ ಪ್ರಧಾನಿ ಬಲೆನ್ ಶಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನೇಪಾಳದ ಹಾನಿಯಲ್ಲಿ ಭಾರತವೂ ಭಾಗಿ. ಹೀಗಾಗಿ ಹಾನಿ ಪರಿಹಾರವನ್ನು ಭಾರತವೂ ನೀಡಬೇಕು ಎಂದಿದ್ದಾರೆ.
ಅಂತಾರಾಷ್ಟ್ರೀಯ ವೇದಿಕೆಗೆ ಕ್ಲೈಮೇಟ್ ಪರಿಹಾರ ಬೇಡಿಕೆ
ನೇಪಾಳ ಪ್ರವಾಹ ದುರಂತ ವಿಚಾರವನ್ನು ಯುನೈಟೆಡ್ ನೇಷನ್‌ಗೆ ಕೊಂಡೊಯ್ಯಲು ಮುಂದಾಗಿದೆ. ಈ ಕುರಿತು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸ್ಪಷ್ಟಪಡಿಸಿದ್ದಾರೆ. ಭಾರತ, ಚೀನಾ ಹಾಗೂ ಅಮೆರಿಕ ಈ ಹಾನಿಗೆ ಪರಿಹಾರ ನೀಡಬೇಕು ಎಂದಿದ್ದಾರೆ. ಪರಿಸರಕ್ಕೆ ಅತೀವ ಹಾನಿ ಮಾಡುವ ಹಾಗೂ ಹಸಿಮನೆ ಅನಿಲ ಹೊರ ಸೂಸುವ ದೇಶಗಳಲ್ಲಿ ಭಾರತ, ಚೀನಾ ಹಾಗೂ ಅಮೆರಿಕ ಮುಂಚೂಣಿಯಲ್ಲಿದೆ. ಈ ಮೂರು ದೇಶಗಳು ನೇಪಾಳಕ್ಕಾದ ಹಾನಿಗೆ ಪರಿಹಾರ ನೀಡಬೇಕು ಎಂದು ಯುನೈಟೆಡ್ ನೇಷನ್‌ನಲ್ಲಿ ಚರ್ಚಿಸಲು ಮುಂದಾಗಿದೆ.
ನೇಪಾಳಕ್ಕೆ ನೀಡುವ ಸಹಾಯ ಧರ್ಮದಾನವಲ್ಲ, ಅದು ನೈತಿಕ ಹೊಣೆಗಾರಿಕೆ ಎಂದು ಪರಿಗಣಿಸಬೇಕು. ನೇಪಾಳ ಅತೀ ಹೆಚ್ಚು ಪರಿಸರ ಸಂರಕ್ಷಿತ ದೇಶ. ಆದರೆ ವಿಪರೀತ ಕಾರ್ಬನ್ ಸೇರಿದಂತೆ ವಿಷಕಾರಕ ಅನಿಲ, ಗ್ಲೋಬಲ್ ವಾರ್ಮಿಂಗ್ ಪರಿಣಾಮದಿಂದ ಹಿಮಗಳು ಕರಗುತ್ತಿದೆ. ನೇಪಾಳದ ಪರಿಸರದ ಮೇಲಿನ ತೀವ್ರ ಪರಿಣಾಮ ಬೀರುತ್ತಿದೆ. ಈ ರಾಜತಾಂತ್ರಿಕ ಪ್ರಚಾರದ ಭಾಗವಾಗಿ, ಕಾಠ್ಮಂಡು ಅಧಿಕೃತವಾಗಿ ನಷ್ಟ ಮತ್ತು ಹಾನಿಗೆ ಪ್ರತಿಕ್ರಿಯಿಸುವ ಯುಎನ್ ಬೆಂಬಲಿತ ಫಂಡ್‌ನಿಂದ ತುರ್ತು ಆರ್ಥಿಕ ಸಹಾಯವನ್ನು ಕೋರಿದೆ. ಹವಾಮಾನ, ಸುಲಭವಾಗಿ ಹಾನಿಗೊಳಗಾಗುವ ದೇಶಗಳಿಂದ ಅನುಭವಿಸಿದ ಆರ್ಥಿಕ ಮತ್ತು ಮಾನವೀಯ ವೆಚ್ಚಗಳ ಹೆಚ್ಚಿನ ಮಾನ್ಯತೆಯನ್ನು ಪಡೆಯಲು ನೇಪಾಳವು ಈ ಸಮಸ್ಯೆಯನ್ನು ಇತರ ಅಂತಾರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ಯಲು ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.
ನೇಪಾಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದಲೇ ಹಾನಿ ಪರಿಹಾರ ಕೇಳಲು ಸಜ್ಜಾಗಿದೆ. ಇತ್ತ ಭಾರತ ಬುಧವಾರವೂ ಪರಿಹಾರಾ ಸಾಮಾಗ್ರಿ ಹೊತ್ತ 5ನೇ ವಿಮಾನ ನೇಪಾಳಕ್ಕೆ ಕಳುಹಿಸಿಕೊಟ್ಟಿದೆ. 5 ಟನ್‌ಗಿಂತಲೂ ಹೆಚ್ಚಿನ ಔಷಧಿಗಳು, ಹಲವು ಸಲಕರಣೆಗಳನ್ನು ಕಳುಹಿಸಿಕೊಟ್ಟಿದೆ. ಜೊತೆಗೆ 11 ಸದಸ್ಯರ ಪರಿಹಾರ ತಂಡವನ್ನು ನೇಪಾಳಕ್ಕೆ ಕಳುಹಿಸಿದೆ. ಈ ಮೂಲಕ ನೇಪಾಳಕ್ಕೆ ಭಾರತ ಒಟ್ಟು 68.5 ಟನ್ ಪರಿಹಾರ ಸಾಮಾಗ್ರಿ ನೀಡಿದೆ.


