ದೇಶಾದ್ಯಂತ ಖಾಸಗಿ ದ್ವಿಚಕ್ರ ವಾಹನಗಳನ್ನು 'ಬೈಕ್ ಟ್ಯಾಕ್ಸಿ'ಗಳಾಗಿ ಬಳಸಲು ಅನುಮತಿ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಗಳಿಗೆ ಮನವಿ ಮಾಡಿದ್ದಾರೆ. ಈ ಯೋಜನೆಯಿಂದ 8 ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ನವದೆಹಲಿ (ಸೆ.4): ದೇಶಾದ್ಯಂತ ಖಾಸಗಿ ದ್ವಿಚಕ್ರ ವಾಹನಗಳನ್ನು 'ಬೈಕ್ ಟ್ಯಾಕ್ಸಿ'ಗಳಾಗಿ ಬಳಸಿ ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಈ ಯೋಜನೆಯಿಂದ ಗ್ರಾಮೀಣ ಭಾಗವೂ ಸೇರಿದಂತೆ ದೇಶದ ಸುಮಾರು 8 ಕೋಟಿ ಜನರಿಗೆ ಹೊಸ ಉದ್ಯೋಗ ಹಾಗೂ ಜೀವನೋಪಾಯದ ಅವಕಾಶಗಳು ಸಿಗಲಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕೇಂದ್ರ ಸರ್ಕಾರವು ಈ ಸಂಬಂಧ ಮುಕ್ತ ಮನಸ್ಸು ಹೊಂದಿದ್ದರೂ, ಬೈಕ್ ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಂತಿಮ ಹಕ್ಕು ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೇ ಸೇರಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರದ ‘ಸುರಕ್ಷಾ’ ಪ್ರಾಯೋಗಿಕ ಕಾರ್ಯಕ್ರಮದ ಚಾಲನೆ ವೇಳೆ ಮಾತನಾಡಿದ ಗಡ್ಕರಿ, ನಾವು ಕೇಂದ್ರದ ಮಟ್ಟದಲ್ಲಿ ಇದಕ್ಕೆ ಅನುಮತಿ ನೀಡಿದ್ದೇವೆ. ಆದರೆ ಕೆಲವು ರಾಜ್ಯಗಳು ಇದನ್ನು ಜಾರಿಗೆ ತರಲು ಒಪ್ಪುತ್ತಿಲ್ಲ. ಸಾರಿಗೆ ಎಂಬುದು ರಾಜ್ಯ ಪಟ್ಟಿಗೆ ಸೇರಿರುವ ವಿಷಯವಾದ್ದರಿಂದ, ರಾಜ್ಯಗಳೇ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಕೋಟ್ಯಂತರ ಜನರಿಗೆ ಉದ್ಯೋಗ ನೀಡುವ ಈ ಸೌಲಭ್ಯವನ್ನು ಜಾರಿಗೆ ತರಲು ನಾನು ಎಲ್ಲಾ ರಾಜ್ಯಗಳಲ್ಲೂ ಮನವಿ ಮಾಡುತ್ತೇನೆ ಎಂದು ಹೇಳಿದರು.

ನಿಮ್ಮ ಖಾಸಗಿ ಬೈಕ್ ಟ್ಯಾಕ್ಸಿ ಆಗಬಹುದೇ?

ಕೇಂದ್ರ ಸರ್ಕಾರ ರೂಪಿಸಿರುವ 'ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು 2025'ರ ಪ್ರಕಾರ, ಅಗ್ರಿಗೇಟರ್ ಸಂಸ್ಥೆಗಳು (ಆ್ಯಪ್ ಆಧಾರಿತ ಸಂಸ್ಥೆಗಳು) ಖಾಸಗಿ ದ್ವಿಚಕ್ರ ವಾಹನಗಳನ್ನು ಪ್ರಯಾಣಿಕರ ಸಂಚಾರಕ್ಕಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರಗಳು ಅವಕಾಶ ನೀಡಬಹುದಾಗಿದೆ. ಈ ಕಾಯ್ದೆಯಡಿಯಲ್ಲಿ ರಾಜ್ಯಗಳು ತಮ್ಮದೇ ಆದ ನಿಯಮ, ಷರತ್ತುಗಳನ್ನು ವಿಧಿಸಲು ಮತ್ತು ಅಗತ್ಯ ಶುಲ್ಕವನ್ನು ವಸೂಲಿ ಮಾಡಲು ಸ್ವತಂತ್ರವಾಗಿವೆ. ಹೀಗಾಗಿ, ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕ ನಿಯಮಗಳಿರಲಿವೆ.

ಕರ್ನಾಟಕದಲ್ಲಿ ಏನಾಗಿದೆ? ಬೈಕ್ ಟ್ಯಾಕ್ಸಿ ಬಿಕ್ಕಟ್ಟು

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಜಾರಿ ವಿಚಾರ ವಿವಾದದಲ್ಲಿದೆ. ಈ ವರ್ಷದ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ಬಳಸಬಹುದು ಎಂದು ತೀರ್ಪು ನೀಡಿತ್ತು. ಅಲ್ಲದೆ, ಪ್ರಯಾಣಿಕರ ಸಾಗಣೆಗೆ ಹಳದಿ ಬೋರ್ಡ್ ನೋಂದಣಿ ಮತ್ತು ಪರವಾನಗಿ (ಪರ್ಮಿಟ್) ಕೋರಿ ದ್ವಿಚಕ್ರ ವಾಹನ ಮಾಲೀಕರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸುವಂತೆ ಸಾರಿಗೆ ಇಲಾಖೆಗೆ ನಿರ್ದೇಶಿಸಿತ್ತು.

ಆದರೆ, ಪ್ರಯಾಣಿಕರ ಸುರಕ್ಷತೆ, ವಿಮೆ ಸೌಲಭ್ಯ, ಮಹಿಳೆಯರ ಭದ್ರತೆ ಮತ್ತು ಬೈಕ್ ಟ್ಯಾಕ್ಸಿಗಳಿಗೆ ಸೂಕ್ತ ಸಮಗ್ರ ನಿಯಮಾವಳಿಗಳ ಕೊರತೆಯನ್ನು ಎತ್ತಿಹಿಡಿದ ಕರ್ನಾಟಕ ಸರ್ಕಾರ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಮತ್ತೊಂದೆಡೆ, ಮಹಾರಾಷ್ಟ್ರ ಸರ್ಕಾರವು 2025ರಲ್ಲೇ ಬೈಕ್ ಟ್ಯಾಕ್ಸಿ ನಿಯಮಾವಳಿಗಳನ್ನು ಅಧಿಕೃತವಾಗಿ ಜಾರಿಗೆ ತಂದಿದ್ದು, ಇ-ಬೈಕ್ ಮತ್ತು ಸ್ಕೂಟರ್‌ಗಳನ್ನು ಒಳಗೊಂಡಂತೆ ಅಗ್ರಿಗೇಟರ್‌ಗಳಿಗೆ ಅಗತ್ಯ ಪರ್ಮಿಟ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸೆನ್ಸ್ ರದ್ದು: 'ಸುರಕ್ಷಾ' ಯೋಜನೆ ಚಾಲನೆ

ಬೈಕ್ ಟ್ಯಾಕ್ಸಿ ವಿಚಾರದ ಜೊತೆಗೆ ದೇಶದ ರಸ್ತೆ ಸುರಕ್ಷತೆ ನಿಯಮಗಳಲ್ಲಿ ಪ್ರಮುಖ ಬದಲಾವಣೆ ತರಲು ಸಚಿವಾಲಯ ಮುಂದಾಗಿದೆ. ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವ ಚಾಲಕರಿಗೆ 'ನೆಗೆಟಿವ್ ಪಾಯಿಂಟ್' (ಋಣಾತ್ಮಕ ಅಂಕ) ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ನಿಯಮ ಉಲ್ಲಂಘನೆ ಹೆಚ್ಚಾದಂತೆ ಚಾಲನಾ ಪರವಾನಗಿ (DL) ಅಮಾನತು ಅಥವಾ ಸಂಪೂರ್ಣ ರದ್ದುಗೊಳಿಸುವ ಶಿಕ್ಷೆ ವಿಧಿಸಲಾಗುತ್ತದೆ.

ಇದೇ ವೇಳೆ, ಹೆದ್ದಾರಿ ಮತ್ತು ಗಣಿ ವಲಯದಲ್ಲಿ ಕೆಲಸ ಮಾಡುವ ಚಾಲಕರು ಹಾಗೂ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಆಪ್ತಸಮಾಲೋಚನೆ ನೀಡುವ 'ಸುರಕ್ಷಾ' ಪ್ರಾಯೋಗಿಕ ಯೋಜನೆಗೆ ಗಡ್ಕರಿ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ 44ರ ನಾಗ್‌ಪುರದಿಂದ ಕಾಮ್ಟಿವರೆಗಿನ 150 ಕಿ.ಮೀ. ವ್ಯಾಪ್ತಿ ಹಾಗೂ ಚಂದ್ರಾಪುರದ ಗಣಿ ವಲಯದಲ್ಲಿ ಈ ಯೋಜನೆ ಆರಂಭವಾಗಿದ್ದು, ಮೊದಲ ಹಂತದಲ್ಲಿ 10,000 ಜನರಿಗೆ ವೈದ್ಯಕೀಯ ನೆರವು ನೀಡುವ ಗುರಿ ಹೊಂದಲಾಗಿದೆ.