ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ 24 ಗಂಟೆಗಳ ಪ್ರವಾಸಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಅವರ ವಿಶೇಷ 'ಹಾಂಗ್ಕಿ' ಕಾರು, ಆಹಾರ ಪರೀಕ್ಷಕರ ತಂಡ ಮತ್ತು ಅತ್ಯಾಧುನಿಕ ಸಂವಹನ ವ್ಯವಸ್ಥೆಗಳು ಅವರ ಭೇಟಿಯ ಪ್ರಮುಖ ಅಂಶಗಳಾಗಿವೆ.
ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಕೇವಲ 24 ತಾಸಿನ ಅವಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದೆಹಲಿಗೆ ಆಗಮಿಸಿದ್ದಾರೆ. ವಿಶೇಷವೆಂದರೆ, ಪ್ರವಾಸಕ್ಕೂ 10 ದಿನ ಮೊದಲೇ ಚೀನಾದಿಂದ ವಿಶೇಷ ಸರಕು ವಿಮಾನದ ಮೂಲಕ ಕ್ಸಿ ಅವರ ಅಧಿಕೃತ ‘ಹಾಂಗ್ಕಿ’ ಲಿಮೋಸಿನ್ ಕಾರು, ಮತ್ತೊಂದು ಬ್ಯಾಕಪ್ ಕಾರು ಮತ್ತು ಸಂವಹನ ಉಪಕರಣಗಳು ಭಾರತವನ್ನು ತಲುಪಿವೆ.
ಮಿಲಿಟರಿ ಮತ್ತು ಸರ್ಕಾರಿ ಪ್ರಧಾನ ಕಚೇರಿಗಳೊಂದಿಗೆ ದೂರವಾಣಿ ಸಂಪರ್ಕದಲ್ಲಿರಲು ಕ್ಸಿ ತಮ್ಮ ಅಧ್ಯಕ್ಷೀಯ ವಿಮಾನದಲ್ಲಿ ತಮ್ಮದೇ ಆದ ಭಾರೀ ಭದ್ರತೆಯ, ಎನ್‌ಕ್ರಿಪ್ಟ್ ಮಾಡಿದ ಉಪಗ್ರಹ ವ್ಯವಸ್ಥೆ ಬಳಸುತ್ತಾರೆ. ಅಲ್ಲದೆ, ಅವರ ಕಾರಿನಲ್ಲಿ ಕೂಡ ಅವರದ್ದೇ ಆದ ಸಂವಹನ ಉಪಕರಣಗಳಿವೆ. ಭಾರತದಲ್ಲಿ ವಿದೇಶಿಗರು ಅವರದ್ದೇ ಆದ ಸ್ಯಾಟಲೈಟ್ ಫೋನ್ ಬಳಸಲು ನಿರ್ಬಂಧವಿದೆ. ಆದರೆ ಆಯಾ ರಾಯಭಾರ ಕಚೇರಿಗಳು ಸ್ವತಂತ್ರ ಪ್ರದೇಶಗಳಾಗಿರುವ ಕಾರಣ ಅಲ್ಲಿ ಆಯಾ ದೇಶಗಳ ಉಪಗ್ರಹ ನೆಟ್‌ವರ್ಕ್ ಬಳಸಲು ಅವಕಾಶವುಂಟು. ಕ್ಸಿ ಕೂಡ ಅಲ್ಲಿನ ಚೀನೀ ನೆಟ್‌ವರ್ಕ್ ಬಳಸಿ ಸಂವಹನ ನಡೆಸುತ್ತಾರೆ ಎನ್ನಲಾಗಿದೆ.
ಆಹಾರ ಪರೀಕ್ಷಕರೂ ಆಗಮನ!:
ವಿಶೇಷವೆಂದರೆ, ಅವರ ಭದ್ರತಾ ಪಡೆಯ ಜತೆ ‘ಆಹಾರ ಪರೀಕ್ಷಕರು’ ಕೂಡಾ ಆಗಮಿಸಿದ್ದು ಗಮನ ಸೆಳೆದಿದೆ. ವಿಶ್ವದ ಅತ್ಯಂತ ಪ್ರಭಾವಿ ನಾಯಕರು ವಿದೇಶ ಪ್ರವಾಸ ಕೈಗೊಂಡಾಗ ಅವರ ಜೀವಕ್ಕೆ ಎದುರಾಗಬಹುದಾದ ವಿಷಪ್ರಾಶನ ಅಥವಾ ಆಹಾರ ಕಲಬೆರಕೆಯಂತಹ ಗಂಭೀರ ಅಪಾಯಗಳನ್ನು ತಡೆಯಲು ಆಹಾರ ಪರೀಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ. ಅಧ್ಯಕ್ಷರಿಗೆ ಬಡಿಸುವ ಪ್ರತಿಯೊಂದು ಆಹಾರ, ಪಾನೀಯ ಮತ್ತು ಕುಡಿಯುವ ನೀರನ್ನು ಈ ತಂಡ ಪರೀಕ್ಷಿಸುತ್ತದೆ. ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಅದನ್ನು ನಾಯಕರಿಗೆ ಬಡಿಸಲು ಅನುಮತಿ ನೀಡಲಾಗುತ್ತದೆ.
ಇದೇ ರೀತಿ, ಕ್ಸಿಯವರಿಗೆ ನೀಡಲಾಗುವ ಆಹಾರವನ್ನು ಚೀನಾದ ಪರೀಕ್ಷಕರು ರುಚಿ ನೋಡಿ ಪರೀಕ್ಷಿಸಿದ್ದಾರೆ. ಆಹಾರವು ಸಂಪೂರ್ಣ ಸಸ್ಯಾಹಾರವಾಗಿರಲಿದೆ ಎಂದು ವರದಿಯಾಗಿದೆ.
ಭದ್ರತಾ ಸಿಬ್ಬಂದಿ ಸೇರಿ 67 ಸದಸ್ಯರ ತಂಡ:
ಕ್ಸಿ ಜತೆ ರಾಜಕಾರಣಿಗಳು, ರಾಜತಾಂತ್ರಿಕರು, ಭದ್ರತಾ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಒಳಗೊಂಡ 67 ಸದಸ್ಯರ ತಂಡ ಭಾರತಕ್ಕೆ ಆಗಮಿಸಿದೆ. ಲೋನ್-ವೋಲ್ಫ್ (ಒಂಟಿ ದಾಳಿಕೋರ) ದಾಳಿ ಅಥವಾ ಟಿಬೆಟಿಯನ್ ಕಾರ್ಯಕರ್ತರ ಪ್ರತಿಭಟನೆಯ ಆತಂಕದಿಂದಾಗಿ ಈ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಚೀನಾ ವಿರೋಧಿ ಪ್ರಚಾರಕ್ಕಾಗಿ ಡ್ರೋನ್‌ಗಳು, ಬ್ಯಾನರ್‌ಗಳು, ಲೌಡ್‌ಸ್ಪೀಕರ್‌ಗಳು ಮತ್ತು ಬಲೂನ್‌ಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಚೀನಾ ಮುನ್ನೆಚ್ಚರಿಕೆ ನೀಡಿದ್ದು, ಸಣ್ಣ ಗಾತ್ರದ ವೈಮಾನಿಕ ವಸ್ತುಗಳು ಮತ್ತು ಡ್ರೋನ್‌ಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ.
ಅಭೂತಪೂರ್ವ ಭದ್ರತೆ:
2019ರ ನಂತರ ಭಾರತಕ್ಕೆ ಇದು ಕ್ಸಿ ಅವರ ಮೊದಲ ಭೇಟಿಯಾಗಿದ್ದು, ಅವರು ತಂಗುವ ಹೋಟೆಲ್ ಸುತ್ತ ತಾತ್ಕಾಲಿಕ ‘ನೋ ಫ್ಲೈ ಝೋನ್’ ಘೋಷಣೆ ಮಾಡುವುದರಿಂದ ಹಿಡಿದು ಸಂಭವನೀಯ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಅಣು ಬೆದರಿಕೆಗಳ ತಪಾಸಣೆವರೆಗೆ ಹಿಂದೆಂದೂ ಕಾಣದ ಮಟ್ಟದ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಧ್ಯಕ್ಷರು ತಂಗುವ ಹೋಟೆಲ್‌ನಲ್ಲಿ ಅಣು ವಿಕಿರಣ ಮತ್ತು ಜೈವಿಕ ರಾಸಾಯನಿಕ ಸುರಕ್ಷತಾ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ಭೂಗತ ಪೈಪ್‌ಲೈನ್ ಜಾಲಗಳನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ.
ಅತ್ಯಾಧುನಿಕ ಕಾರು:
10 ದಿನ ಮೊದಲೇ ಅವರ ಕಾರು ಭಾರತಕ್ಕೆ ಬಂದಿದೆ. 18 ಅಡಿ ಉದ್ದವಿರುವ ಹಾಂಗ್ಕಿ ಎನ್701 ಕಾರು 21-ಇಂಚಿನ ಬುಲೆಟ್‌ಪ್ರೂಫ್ ವೀಲ್‌ಗಳು, ಗಟ್ಟಿಯಾದ ಬುಲೆಟ್‌ಪ್ರೂಫ್ ಗ್ಲಾಸ್‌ಗಳು ಮತ್ತು ಬಲವರ್ಧಿತ ಶಸ್ತ್ರಸಜ್ಜಿತ ಕವಚವನ್ನು ಹೊಂದಿದೆ. ಸಣ್ಣ ಪ್ರಮಾಣದ ಸ್ಫೋಟಕ ದಾಳಿಗಳನ್ನು ತಡೆಯುವ ಸಾಮರ್ಥ್ಯ ಮಾತ್ರವಲ್ಲದೆ, ವಿಷಕಾರಿ ಅನಿಲ ಅಥವಾ ರಾಸಾಯನಿಕ ದಾಳಿ ನಡೆದರೆ ಕಾರಿನ ಒಳಗಿರುವವರನ್ನು ರಕ್ಷಿಸಲು ಪ್ರತ್ಯೇಕ ಏರ್-ಕಂಪ್ರೆಷನ್ ಆಕ್ಸಿಜನ್ ವ್ಯವಸ್ಥೆಯನ್ನು ಇದು ಹೊಂದಿದೆ. ಚೀನಾದ ಐಷಾರಾಮಿ ವಾಹನ ತಯಾರಿಕಾ ಸಂಸ್ಥೆಯಾದ ಹಾಂಗ್ಕಿ ಇದನ್ನು ಕಸ್ಟಮ್-ಬಿಲ್ಟ್ ಮಾದರಿಯಲ್ಲಿ ಸಿದ್ಧಪಡಿಸಿದೆ.
ಕೆಲವೇ ಕೆಲವರಿಗೆ ಕಾರು ಸೌಲಭ್ಯ:
ವಿದೇಶಿ ಗಣ್ಯರೆಲ್ಲರಿಗೂ ಭಾರತಕ್ಕೆ ಬಂದರೆ ತಮ್ಮದೇ ಆದ ಕಾರು ಬಳಸಲು ಅವಕಾಶವಿಲ್ಲ. ಪುಟಿನ್, ಟ್ರಂಪ್, ಕ್ಸಿ ಅಂಥವರಿಗೆ ಮಾತ್ರ ಇಂಥ ಆವಕಾಶವಿದೆ.
ಪಿಸ್ತೂಲ್ ಬಿಟ್ಟು ಬೇರೆ ಶಸ್ತ್ರಾಸ್ತ್ರ ತರುವಂತಿಲ್ಲ:
ವಿದೇಶಿ ನಿಯೋಗವು ಭಾರತದ ದೂರಸಂಪರ್ಕ ಇಲಾಖೆಯ ಅನುಮತಿ ಪಡೆದು ತಮ್ಮ ಸ್ವಂತ ಸಂವಹನ ಉಪಕರಣಗಳನ್ನು ಭಾರತಕ್ಕೆ ತರಬಹುದಾಗಿದೆ. ಆದರೆ ಉಪಗ್ರಹ ಸಂವಹನ ಉಪಕರಣಗಳನ್ನು ತರಲು ಅನುಮತಿಯಿಲ್ಲ. ಬಂದೂಕು ಮತ್ತು ಮದ್ದುಗುಂಡುಗಳನ್ನು ತರುವ ಅನಿವಾರ್ಯತೆಯಿದ್ದರೆ, ಪಿಸ್ತೂಲ್‌ಗಳಿಗೆ ಅವಕಾಶವಿದೆ. ಆದರೆ ಸಬ್‌ಮಷಿನ್ ಗನ್‌ಗಳು ಮತ್ತು ಆ್ಯಂಟಿ-ಡ್ರೋನ್ ಉಪಕರಣಗಳನ್ನು ಏರ್ಪೋರ್ಟ್‌ನ ಕಸ್ಟಮ್ಸ್ ವಿಭಾಗದಲ್ಲೇ ಇಟ್ಟುಬರಬೇಕಾಗುತ್ತದೆ.


