ಮಧ್ಯಪ್ರದೇಶದ 'ಬಿಟ್ಟು ತಬಾಹಿ' ಎಂಬ 20 ವರ್ಷದ ಯುವಕ, ಸರ್ಕಾರಿ ಸಹಾಯವಿಲ್ಲದೆ ಕಲುಷಿತ ಅಜ್ನರ್ ನದಿಯನ್ನು ಸ್ವತಃ ಸ್ವಚ್ಛಗೊಳಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಮತ್ತು ಜನರ ಟೀಕೆಗಳನ್ನು ಎದುರಿಸಿಯೂ, ಬರಿಗೈಯಲ್ಲಿ ಟನ್‌ಗಟ್ಟಲೆ ತ್ಯಾಜ್ಯವನ್ನು ತೆಗೆದುಹಾಕುವ ಅವರ ನಿಸ್ವಾರ್ಥ ಸೇವೆಗೆ ಆನಂದ್ ಮಹೀಂದ್ರಾ ಸೇರಿದಂತೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

ಮಧ್ಯಪ್ರದೇಶದ 20 ವರ್ಷದ ಯುವಕನೊಬ್ಬ ಸರ್ಕಾರಿ ಅಧಿಕಾರಿಗಳು ಅಥವಾ ಸಂಘ ಸಂಸ್ಥೆಗಳ ನೆರವಿಗೆ ಕಾಯದೇ, ತೀವ್ರವಾಗಿ ಕಲುಷಿತಗೊಂಡಿದ್ದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸುವ ಬೃಹತ್ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡು ದೇಶದ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 'ಬಿಟ್ಟು ತಬಾಹಿ' ಎಂದೇ ಜನಪ್ರಿಯರಾಗಿರುವ ಬಿಟ್ಟು, ಸ್ವಂತ ವೆಚ್ಚದಲ್ಲೇ ನದಿ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಿಂದ ಟನ್‌ಗಟ್ಟಲೆ ಪ್ಲಾಸ್ಟಿಕ್ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ತೆರವುಗೊಳಿಸುತ್ತಿದ್ದಾರೆ.

ಬರಿಗೈಯಲ್ಲೇ ನದಿ ಶುಚಿಗೊಳಿಸುವ ಸಾಹಸ, ಆರೋಗ್ಯ ಸಮಸ್ಯೆಗೂ ಬಗ್ಗದ ಛಲ

ನದಿಯನ್ನು ಸ್ವಚ್ಛಗೊಳಿಸಲು ಸೂಕ್ತ ಯಂತ್ರೋಪಕರಣಗಳನ್ನು ತಯಾರಿಸುವ ಆಸೆ ಬಿಟ್ಟುಗಿಗಿತ್ತು. ಆದರೆ, ಬಡತನ ಮತ್ತು ಹಣಕಾಸಿನ ಅಭಾವದಿಂದಾಗಿ ವಿದ್ಯಾರ್ಥಿಯಾಗಿರುವ ಅವರು ತಮ್ಮ ಬರಿಗೈಯಲ್ಲೇ ಕಸ ತೆರವುಗೊಳಿಸಲು ನಿರ್ಧರಿಸಿದರು. ಕಲುಷಿತ ನೀರು ಮತ್ತು ವಿಷಕಾರಿ ತ್ಯಾಜ್ಯದ ನಿರಂತರ ಸಂಪರ್ಕದಿಂದಾಗಿ ಅವರ ಕೈ ಮತ್ತು ಕಾಲುಗಳ ಚರ್ಮ ಸುಲಿದು ತೀವ್ರ ಸೋಂಕಿಗೆ ಈಡಾಯ್ತು. ಪ್ರತಿಯೊಂದು ಘಾಟ್‌ಗಳನ್ನು ಸ್ವಚ್ಛಗೊಳಿಸಲು ಸತತ ಮೂರು ತಿಂಗಳು ಶ್ರಮಿಸಿದ ಬಿಟ್ಟು ಅವರು ದೈಹಿಕ ನೋವಿನ ನಡುವೆಯೂ ತಮ್ಮ ಧ್ಯೇಯದಿಂದ ಹಿಂದೆ ಸರಿಯಲಿಲ್ಲ.

ಜನರ ಗೇಲಿ ಮತ್ತು ಸಾಮಾಜಿಕ ಜಾಲತಾಣದ ಟೀಕೆಗಳಿಗೆ ತಕ್ಕ ಉತ್ತರ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳುವಾಗ ಕೆಲವರು ಇವರನ್ನು "ಪ್ರಚಾರಕ್ಕಾಗಿ ವೀಡಿಯೊ ಮಾಡುತ್ತಿದ್ದಾರೆ" ಎಂದು ನಿಂದಿಸಿದರು. ಇನ್ನು ಕೆಲವರು "ಹುಚ್ಚ", "ನಾಲೆ ಸಾಫ್ ಮಾಡುವವನು" ಎಂದು ಗೇಲಿ ಮಾಡಿದ್ದಲ್ಲದೆ, ತಮ್ಮ ಮನೆ ಮುಂದಿನ ಚರಂಡಿ ಸ್ವಚ್ಛಗೊಳಿಸುವಂತೆ ಪರಿಹಾಸ್ಯ ಮಾಡಿದರು. ಈ ಎಲ್ಲಾ ವ್ಯಂಗ್ಯಗಳಿಗೆ ಕ್ಯಾರೇ ಅನ್ನದ ಬಿಟ್ಟು, "ನಾನು ಕೇವಲ ವೈರಲ್ ಆಗಲು ವೀಡಿಯೊ ಮಾಡುತ್ತಿಲ್ಲ, ಬದಲಿಗೆ ಗ್ರೌಂಡ್ ಹಂತದಲ್ಲಿ ಕೆಲಸ ಮಾಡಿ ನದಿಗೆ ಮರುಜೀವ ನೀಡುತ್ತಿದ್ದೇನೆ" ಎಂದು ಸಾಕ್ಷಿ ಸಮೇತ ವೀಡಿಯೊ ಮೂಲಕವೇ ಸವಾಲೆಸೆದು ಸಾಬೀತುಪಡಿಸಿದ್ದಾರೆ.

ಆನಂದ್ ಮಹೀಂದ್ರಾ ಹಾಗೂ ಬಾಲಿವುಡ್ ತಾರೆಯರ ಮೆಚ್ಚುಗೆ

ಬಿಟ್ಟು ಅವರ ಈ ಅಪರೂಪದ ನಿಸ್ವಾರ್ಥ ಶ್ರಮಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಎಕ್ಸ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್, ಇನ್‌ಫ್ಲುಯೆನ್ಸರ್ ಮುಕ್ತಾ ಸಿಂಗ್ ಸೇರಿದಂತೆ ಲಕ್ಷಾಂತರ ಜನರು ಈ ಯುವಕನ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಾವು ಪ್ರತಿಯೊಬ್ಬರೂ ಬಿಟ್ಟು ಅವರಂತೆ ಯೋಚಿಸಿದರೆ ಭಾರತ ಅತ್ಯಂತ ಸುಂದರ ದೇಶವಾಗುತ್ತದೆ. ಎಂದಿಗಾದರೂ ಒಂದು ದಿನ ಈ ಯುವಕನಿಗೆ ರಾಷ್ಟ್ರೀಯ ಗೌರವ ಸಿಗಲಿದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.