ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ 'ಕಾನೂನುಬಾಹಿರವಾಗಿ' ರಚನೆಯಾದ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಭಾರತ ತಿರಸ್ಕರಿಸಿದ್ದು, ತನ್ನ ಸಾರ್ವಭೌಮ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಲು ಅದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
ನವದೆಹಲಿ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ (Indus Waters Treaty) ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ (Court of Arbitration - CoA) ನೀಡಿರುವ ತೀರ್ಪನ್ನು ಭಾರತ ಸರ್ಕಾರ ಖಡಾಖಡಿಯಾಗಿ ತಿರಸ್ಕರಿಸಿದೆ. ಈ ನ್ಯಾಯಾಲಯದ ರಚನೆಯೇ 'ಕಾನೂನುಬಾಹಿರ' ಎಂದು ಕರೆದಿರುವ ಭಾರತ, ತನ್ನ ಸಾರ್ವಭೌಮ ನಿರ್ಧಾರಗಳ ಮೇಲೆ ಹಸ್ತಕ್ಷೇಪ ಮಾಡಲು ಈ ಸಂಸ್ಥೆಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಏನಿದು ವಿವಾದ?
ಕಳೆದ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಪಾಕಿಸ್ತಾನ ಪ್ರೇರಿತ ಈ ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡಲು ನಿರ್ಧರಿಸಿದ ಭಾರತ ಸರ್ಕಾರ, 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿ (In Abeyance) ಆದೇಶ ಹೊರಡಿಸಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಧ್ಯಸ್ಥಿಕೆ ನ್ಯಾಯಾಲಯದ ವಿರುದ್ಧ ಕಿಡಿಕಾರಿದೆ. ಈ ನ್ಯಾಯಾಲಯವನ್ನು ವಿಶ್ವಬ್ಯಾಂಕ್ ಸ್ಥಾಪಿಸಿರುವುದು ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಇದರ ಯಾವುದೇ ತೀರ್ಪುಗಳಿಗೆ ಕಾನೂನುಬದ್ಧ ಮಾನ್ಯತೆ ಇಲ್ಲ. ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ನಿರ್ಧಾರವು ಬದಲಾಗುವುದಿಲ್ಲ. ಭಯೋತ್ಪಾದನೆ ಮತ್ತು ಮಾತುಕತೆ ಜೊತೆಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂಬುದು ಭಾರತದ ನಿಲುವು.
ನ್ಯಾಯಾಲಯದ ವ್ಯಾಪ್ತಿಗೆ ಹೊರತಾಗಿದೆ: ಭಾರತದ ಸಾರ್ವಭೌಮ ನಿರ್ಧಾರಗಳ ಮೇಲೆ ತೀರ್ಪು ನೀಡಲು ಈ ನ್ಯಾಯಾಲಯಕ್ಕೆ ಯಾವುದೇ ನ್ಯಾಯವ್ಯಾಪ್ತಿ' (Jurisdiction) ಇಲ್ಲ.
ನ್ಯಾಯಾಲಯ ಹೇಳಿದ್ದೇನು?
ಮಧ್ಯಸ್ಥಿಕೆ ನ್ಯಾಯಾಲಯವು ತನ್ನ ಪ್ರಕಟಣೆಯಲ್ಲಿ, ಭಾರತವು ಒಪ್ಪಂದವನ್ನು ಅಮಾನತುಗೊಳಿಸಲು ನೀಡಿರುವ ಕಾರಣಗಳು ಸಮಂಜಸವಾಗಿಲ್ಲ. ಈ ಒಪ್ಪಂದವು ಈಗಲೂ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದೆ ಮತ್ತು ಭಾರತವು ತನ್ನ ಜವಾಬ್ದಾರಿಗಳನ್ನು ಪೂರೈಸಲೇಬೇಕು ಎಂದು ಹೇಳಿತ್ತು. ಆದರೆ, ಈ ನ್ಯಾಯಾಲಯದ ಅಸ್ತಿತ್ವವನ್ನೇ ಭಾರತ ಗುರುತಿಸದ ಕಾರಣ, ಆ ತೀರ್ಪಿಗೆ ಕಿಮ್ಮತ್ತಿಲ್ಲದಂತಾಗಿದೆ.
ಪಾಕಿಸ್ತಾನಕ್ಕೆ ನೀರಿನ ಹರಿವನ್ನು ನಿಯಂತ್ರಿಸುವ ಮೂಲಕ ಆ ದೇಶದ ಆರ್ಥಿಕತೆಗೆ ಪೆಟ್ಟು ನೀಡುವ ತಂತ್ರವನ್ನು ಭಾರತ ಅನುಸರಿಸುತ್ತಿದೆ. ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಸರಣಿ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳುತ್ತಿದೆ, ಅದರಲ್ಲಿ ಸಿಂಧೂ ಒಪ್ಪಂದದ ಅಮಾನತು ಅತ್ಯಂತ ಪ್ರಮುಖವಾದುದು.


