ಅಕ್ಬರ್-ಬೀರಬಲ್ ಕಥೆಗಳಲ್ಲಿ ಬೀರಬಲ್‌ನ ಚಾಣಾಕ್ಷತನಕ್ಕೆ ಮತ್ತೊಂದು ಉದಾಹರಣೆ ಈ ಯಮುನಾ ನದಿ ಕಥೆ. ಮಳೆಗಾಲದ ಒಂದು ರಾತ್ರಿ ಯಮುನಾ ನದಿಯ ಭೋರ್ಗರೆತ ಅಕ್ಬರ್‌ಗೆ ಅಳುವಿನಂತೆ ಕೇಳಿಸುತ್ತದೆ. ಮರುದಿನ ದರ್ಬಾರ್‌ನಲ್ಲಿ ಅಕ್ಬರ್ ಇದೇ ಪ್ರಶ್ನೆಯನ್ನು ಸಭಿಕರ ಮುಂದಿಡುತ್ತಾರೆ.
ಮೊಘಲ್ ಚಕ್ರವರ್ತಿ ಅಕ್ಬರ್‌ನ ಆಸ್ಥಾನದಲ್ಲಿ ಬೀರಬಲ್ ಎಂದರೆ ಅವರ ಚಾಣಾಕ್ಷತನ, ಸಮಯಪ್ರಜ್ಞೆ ಮತ್ತು ವಿಭಿನ್ನ ಆಲೋಚನೆಗಳಿಗೆ ಹೆಸರುವಾಸಿಯಾಗಿದ್ದ ವ್ಯಕ್ತಿ. ಯಾರಿಗೂ ಉತ್ತರ ಹೊಳೆಯದಂತಹ ಕಠಿಣ ಪ್ರಶ್ನೆಗಳನ್ನು ಕೂಡ ಬೀರಬಲ್ ತನ್ನ ಜಾಣ್ಮೆಯಿಂದ ಸುಲಭವಾಗಿ ಬಿಡಿಸುತ್ತಿದ್ದ. ಅಕ್ಬರ್ ಕೂಡ ಆಗಾಗ್ಗೆ ಬೀರಬಲ್‌ನ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತಿದ್ದ. ಅಂತಹದ್ದೇ ಒಂದು ಕುತೂಹಲಕಾರಿ ಘಟನೆ ಒಮ್ಮೆ ನಡೆಯಿತು.
ಮಳೆಗಾಲದ ಆ ರಾತ್ರಿ...
ಒಮ್ಮೆ ಮಳೆಗಾಲದಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಮಳೆಯ ಪರಿಣಾಮ ಯಮುನಾ ನದಿ ಉಕ್ಕಿ ಹರಿಯುತ್ತಿತ್ತು. ನದಿ ತೀರದಲ್ಲಿದ್ದ ಅಕ್ಬರ್‌ನ ಅರಮನೆಗೆ ಆ ರಾತ್ರಿ ಯಮುನಾ ನದಿಯ ಭೋರ್ಗರೆತದ ಶಬ್ದ ಜೋರಾಗಿ ಕೇಳಿಸುತ್ತಿತ್ತು. ಆ ರಾತ್ರಿ ಅಕ್ಬರ್ ಮಲಗಲು ಹೋದಾಗ, ಯಮುನೆಯ ರಭಸದ ಸದ್ದು ಅವರ ಕಿವಿಗೆ ಜೋರಾಗಿ ಕೇಳಿಸತೊಡಗಿತು. ಆ ನದಿಯ ಅಬ್ಬರದ ಸದ್ದು ಅವರಿಗೆ ಯಾರೋ ದುಃಖದಿಂದ ಅಳುತ್ತಿರುವಂತೆ ಭಾಸವಾಯಿತು. ಅಕ್ಬರ್ ಕಿಟಕಿಯ ಬಳಿ ಹೋಗಿ ಬಹಳ ಹೊತ್ತು ನಿಂತು ಆ ಶಬ್ದವನ್ನು ಆಲಿಸಿದರು. ಆದರೆ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ. ಕೊನೆಗೆ ನಿದ್ರೆಯನ್ನೇ ಮರೆತು ಯೋಚಿಸುತ್ತಾ ರಾತ್ರಿ ಕಳೆದರು.
ಮರುದಿನ ಬೆಳಗ್ಗೆ ದರ್ಬಾರ್ ಸೇರಿತು. ಅಕ್ಬರ್ ತಮ್ಮ ಸಭಿಕರತ್ತ ನೋಡುತ್ತಾ, ನಿನ್ನೆ ರಾತ್ರಿ ಯಮುನಾ ನದಿ ತುಂಬಾ ದುಃಖದಿಂದ ಅಳುತ್ತಿತ್ತು. ಆಕೆಗೇನಾಗಿದೆ? ಯಾಕೆ ಅಳುತ್ತಿದ್ದಾಳೆ ಎಂದು ನಿಮ್ಮಲ್ಲಿ ಯಾರಾದರೂ ಹೇಳಬಲ್ಲಿರಾ? ಎಂದು ಪ್ರಶ್ನಿಸಿದರು. ಪ್ರಶ್ನೆ ಕೇಳುತ್ತಿದ್ದಂತೆ ಸಭಿಕರೆಲ್ಲ ಗೊಂದಲಕ್ಕೊಳಗಾದರು. ನದಿಗೆ ಹೇಗೆ ಮಾತು ಬರುತ್ತದೆ? ಅದು ಯಾಕೆ ಅಳಬೇಕು? ಎಂಬುದು ಯಾರಿಗೂ ಅರ್ಥವಾಗಲಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡುತ್ತಾ ಮೌನವಾಗಿ ಕುಳಿತರು.
ಬೀರಬಲ್ ಕೂಡಲೇ ಉತ್ತರಿಸಲಿಲ್ಲ!
ಆಗ ಬೀರಬಲ್ ಎದ್ದು ನಿಂತು, ಮಹಾರಾಜಾ, ನಾನು ಆ ಶಬ್ದವನ್ನು ಸ್ವತಃ ಕೇಳಿದರೆ ಮಾತ್ರ ಯಮುನಾ ಯಾಕೆ ಅಳುತ್ತಿದೆ ಎಂಬುದನ್ನು ಹೇಳಲು ಸಾಧ್ಯ ಎಂದನು. ಬೀರಬಲ್‌ನ ಮಾತು ಕೇಳಿದ ಅಕ್ಬರ್‌ಗೆ ಕುತೂಹಲ ಮತ್ತಷ್ಟು ಹೆಚ್ಚಾಯಿತು. ಆ ರಾತ್ರಿ ಬೀರಬಲ್‌ನನ್ನೂ ಅರಮನೆಗೆ ಕರೆಸಿಕೊಂಡರು. ರಾತ್ರಿ ಇಬ್ಬರೂ ಕಿಟಕಿಯ ಬಳಿ ನಿಂತು ಯಮುನೆಯ ಅಬ್ಬರದ ಸದ್ದನ್ನು ಗಮನವಿಟ್ಟು ಆಲಿಸಿದರು. ಬೀರಬಲ್ ಬಹಳ ಹೊತ್ತು ಆ ಶಬ್ದವನ್ನು ಕೇಳಿದ ಬಳಿಕ ಸುಮ್ಮನೆ ನಕ್ಕರು. ಮರುದಿನ ದರ್ಬಾರ್‌ನಲ್ಲಿ ಅಕ್ಬರ್ ಕೇಳುವ ಪ್ರಶ್ನೆಗೆ ಉತ್ತರ ಸಿದ್ಧವಾಗಿತ್ತು.
ಬೀರಬಲ್ ಕೊಟ್ಟ ಉತ್ತರವೇನು?
ಮರುದಿನ ಬೀರಬಲ್ ಅಕ್ಬರ್ ಮುಂದೆ ನಿಂತು, ಮಹಾರಾಜಾ, ಯಮುನಾ ನದಿ ತನ್ನ ತವರು ಮನೆಯನ್ನು ಬಿಟ್ಟು ಅತ್ತೆಮನೆಗೆ ಹೋಗುತ್ತಿರುವ ಹೆಣ್ಣಿನಂತೆ ದುಃಖಿಸುತ್ತಿದೆ ಎಂದನು. ಸಭಿಕರಿಗೆ ಇನ್ನೂ ಅರ್ಥವಾಗಲಿಲ್ಲ. ಬೀರಬಲ್ ತನ್ನ ಮಾತನ್ನು ಮುಂದುವರಿಸಿದ. ಹಿಮಾಲಯವೇ ಯಮುನೆಯ ಹುಟ್ಟುಸ್ಥಳ. ಅಲ್ಲಿ ಆಕೆ ಹುಟ್ಟಿ ಬೆಳೆದಳು. ಆದರೆ ಈಗ ತನ್ನ ಮನೆಯನ್ನು ಬಿಟ್ಟು ಸಮುದ್ರದತ್ತ ಸಾಗುತ್ತಿದ್ದಾಳೆ. ಕಣ್ಣಿನ ರೆಪ್ಪೆಯಂತೆ ಕಾಪಾಡಿದ ತಂದೆಯನ್ನು, ತಾನು ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ದೂರ ಹೋಗಬೇಕಾದ ನೋವು ಆಕೆಯನ್ನು ಕಾಡುತ್ತಿದೆ.
ಆ ವಿರಹದ ನೋವಿನಿಂದಲೇ ಯಮುನಾ ನದಿ ಅಳುತ್ತಿದೆ, ಮಹಾರಾಜಾ!. ಬೀರಬಲ್‌ನ ಈ ಕಲ್ಪನೆ ಕೇಳುತ್ತಿದ್ದಂತೆ ದರ್ಬಾರ್ ಇಡೀ ಕ್ಷಣಕಾಲ ಮೌನವಾಯಿತು. ನಂತರ ಅಕ್ಬರ್ ಬಾದ್‌ಷಾ ಬೀರಬಲ್‌ನ ಜಾಣ್ಮೆ ಮತ್ತು ಕಲ್ಪನಾಶಕ್ತಿಗೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ಸಾಮಾನ್ಯ ನದಿಯ ಹರಿವಿನ ಸದ್ದಿನಲ್ಲೂ ಇಷ್ಟೊಂದು ಸುಂದರವಾದ ಅರ್ಥವನ್ನು ಕಂಡುಕೊಳ್ಳುವುದು ಬೀರಬಲ್‌ನ ಚಾಣಾಕ್ಷತನಕ್ಕೆ ಸಾಕ್ಷಿಯಾಗಿತ್ತು.
ಅಂದು ಯಮುನಾ ನದಿಯ ಭೋರ್ಗರೆತ ಅಕ್ಬರ್‌ಗೆ ಅಳುವಿನಂತೆ ಕೇಳಿಸಿತ್ತು. ಆದರೆ ಬೀರಬಲ್ ಅದರಲ್ಲಿ ಕಂಡುಕೊಂಡಿದ್ದು, ತವರು ಮನೆಯನ್ನು ಬಿಟ್ಟು ಹೊರಡುವ ಮಗಳ ವಿರಹದ ನೋವನ್ನು!
ನೀತಿ: ಸಮಸ್ಯೆಗೆ ಉತ್ತರ ಹುಡುಕಲು ಕೇವಲ ಜ್ಞಾನ ಸಾಕಾಗುವುದಿಲ್ಲ; ಸೃಜನಶೀಲವಾಗಿ ಯೋಚಿಸುವ ಸಾಮರ್ಥ್ಯವೂ ಬೇಕು.


