ಮಾನವೀಯ ದೃಷ್ಟಿಯಿಂದ ಹಣ ನೀಡಿದ್ದೆ, ಆಕೆಯನ್ನು ಯಾರೋ ಎತ್ತಿಕಟ್ಟಿದ್ದಾರೆ!
ಮುಸ್ಲಿಂ ಮಹಿಳೆ ಹಣ ವಾಪಾಸು ಎಸೆದಿರುವ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 'ಆ ಮಹಿಳೆಯನ್ನು ಯಾರೋ ಎತ್ತಿಕಟ್ಟಿದ್ದಾರೆ, ನಾವು ಮಾನವೀಯ ದೃಷ್ಟಿಯಿಂದ ಪರಿಹಾರದ ಹಣ ನೀಡಿದ್ದೀವಿ ಎಂದಿದ್ದಾರೆ
ಬಾದಾಮಿ (ಜುಲೈ 15): ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆರೂರು ಕೋಮು ಘರ್ಷಣೆಯ ಸಂತ್ರಸ್ತರನ್ನು ಭೇಟಿ ಮಾಡಿದರು. ಈ ಭೇಟಿಯ ವೇಳೆ ರಾಜ್ಮಾ ಎಂಬ ಮುಸ್ಲಿಂ ಮಹಿಳೆ ಸಿದ್ದರಾಮಯ್ಯ ನೀಡಿದ 2 ಲಕ್ಷ ಪರಿಹಾರವನ್ನು ಅವರ ಬೆಂಗಾವಲು ವಾಹನಕ್ಕೆ ಎಸೆದಿದ್ದರು.
ನಿಮ್ಮ ದುಡ್ಡು ಯಾರಿಗೆ ಬೇಕು ಸ್ವಾಮಿ ನನಗೆ ನ್ಯಾಯ ಕೊಡಿಸಿ ಎಂದ ಮಹಿಳೆ ಹಣವನ್ನು ಎಸೆದಿದ್ದರು. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿದ್ಧರಾಮಯ್ಯ (Siddaramaiah), ಮಾನವೀಯ ದೃಷ್ಟಿಯಿಂದ ನಾನು ಆಕೆಗೆ ಹಣ ನೀಡಿದ್ದೆ. ಪರಿಹಾರದ ಹಣವನ್ನು ಸಂತ್ರಸ್ತರಿಗೆ ತಲುಪಿಸಿದ್ದೇವೆ. ಅವರು ಪರಿಹಾರ ಪಡೆಯುತ್ತಾರೆ ಎಂದು ಭಾವಿಸಿದ್ದೇನೆ. ಕಷ್ಟಕ್ಕೆಲ್ಲಾ ಆಗುತ್ತೆ ಎಂದು ಹಣ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಹೈಡ್ರಾಮಾ: ಪರಿಹಾರ ಧನವನ್ನೇ ವಾಪಸ್ ಎಸೆದ ಮಹಿಳೆ, ಮುಜುಗರಕ್ಕೀಡಾದ ಸಿದ್ದು..!
ಅಕೆಯನ್ನು ಯಾರೋ ಎತ್ತಿಕಟ್ಟಿದ್ದಾರೆ.ಹಣವನ್ನು ಈಗಾಗಲೇ ಅವರಿಗೆ ವಾಪಾಸ್ ಕೊಟ್ಟಿದ್ದೇವೆ. ಸತ್ತವರು ಯಾರೂ ವಾಪಾಸ್ ಬರೋದಿಲ್ಲ. ಮಾನವೀಯತೆಯ ಕಾರಣಕ್ಕಾಗಿ ಈ ಹಣ ನೀಡಿದ್ದೇವೆ ಎಂದು ಹೇಳಿದ್ದಾರೆ. ಹಿಂಸಾಚಾರದಲ್ಲಿ ರಾಜ್ಮಾ ಅವರ ಸಹೋದರ ರೆಜಿಕ್ ಕೂಡ ಗಾಯಗೊಂಡಿದ್ದರು. ಪರಿಹಾರವನ್ನು ರಾಜ್ಮಾ ಅವರಿಗೆ ಸಿದ್ದರಾಮಯ್ಯ ಹಸ್ತಾಂತರಿಸಿದರು. ಆದರೆ, ಕಾಂಗ್ರೆಸ್ ನಾಯಕ ಹೊರಹೋಗಲು ಮುಂದಾದಾಗ, ರಾಜ್ಮಾ ಆಸ್ಪತ್ರೆಯಿಂದ ಹೊರಬಂದು ಹಣವನ್ನು ಎಸೆದಿದ್ದರು.