Omicron Variant: ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ, ಎಲ್ಲಾ ಡಿಸಿಗಳಿಗೆ ಸೂಚನೆ

- ಒಮಿಕ್ರೋನ್‌ ಭೀತಿ ಹಿನ್ನೆಲೆ: ತಜ್ಞರ ಸಮಿತಿ ಶಿಫಾರಸು

- ಸರ್ಕಾರಿ ಸೇವೆ, ಸಾರ್ವಜನಿಕ ಸ್ಥಳ ಪ್ರವೇಶಕ್ಕೆ ಲಸಿಕೆ ಕಡ್ಡಾಯ ಮಾಡಿ

- ಲಸಿಕೆ ಪಡೆಯದವರಿಗೆ ಪಡಿತರ, ವೇತನ, ಪಿಂಚಣಿ ಸೇರಿ ಯಾವುದೇ ಸೇವೆ ಬೇಡ

- ಬಸ್‌, ಚಿತ್ರಮಂದಿರ, ಮಾಲ್‌, ದೇಗುಲಗಳಿಗೂ ಪ್ರವೇಶ ಬೇಡ: 13 ಶಿಫಾರಸು

 

First Published Dec 1, 2021, 9:21 AM IST | Last Updated Dec 1, 2021, 9:21 AM IST

ಬೆಂಗಳೂರು (ಡಿ. 01):  ಕೊರೋನಾ ಲಸಿಕೆಯ (Corona Vaccine) ಎರಡು ಡೋಸ್‌ ಪಡೆದವರಿಗೆ ಮಾತ್ರ ಪಡಿತರ (Ration Card), ವೇತನ, ಪಿಂಚಣಿ ಸೇರಿದಂತೆ ಸರ್ಕಾರದ ಎಲ್ಲ ನಾಗರಿಕ ಸೇವೆಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬುದೂ ಸೇರಿದಂತೆ ಒಮಿಕ್ರೋನ್‌ ರೂಪಾಂತರಿ ಹಾವಳಿ ತಡೆಗೆ ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ 13 ಪ್ರಮುಖ ಶಿಫಾರಸುಗಳನ್ನು ಮಾಡಿದೆ.

ಮಂಗಳವಾರ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಶಿಫಾರಸುಗಳನ್ನು ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ನೀಡಿದೆ. ಪ್ರಮುಖವಾಗಿ ಪಡಿತರ, ಪೆಟ್ರೋಲ್‌, ಡೀಸೆಲ್‌, ವೇತನ, ಪಿಂಚಣಿ, ನೀರು ಸಂಪರ್ಕ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಪಡೆಯಲು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ಸೌಲಭ್ಯ ಬಳಸಲು ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವುದನ್ನು ಕಡ್ಡಾಯಗೊಳಿಸಬೇಕು. ಅಲ್ಲದೆ, ಚಿತ್ರಮಂದಿರ, ಮಾಲ್‌, ದೇವಾಲಯ, ಪ್ರವಾಸಿ ತಾಣಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳ ಪ್ರವೇಶ ಹಾಗೂ ಸಂಚಾರಕ್ಕೂ ಎರಡೂ ಡೋಸ್‌ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಎಂಬ ನಿಯಮ ರೂಪಿಸಿ ಎಂದು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.