ಹಾವೇರಿ ಜಿಲ್ಲೆಗೆ ರಜತ ಮಹೋತ್ಸವ: ಸಂಭ್ರಮಕ್ಕೆ ಏಷ್ಯಾನೆಟ್ ಸುವರ್ಣನ್ಯೂಸ್- ಕನ್ನಡಪ್ರಭ ವೇದಿಕೆ
ಹಾವೇರಿ ಜಿಲ್ಲೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿದ ರಜತ ಸಂಭ್ರಮ ಕಾರ್ಯಕ್ರಮ ಪತ್ರಿಕೆಯ ಸಾಮಾಜಿಕ ಕಳಕಳಿ ಹಾಗೂ ಜಿಲ್ಲೆಯ ಕುರಿತ ಕಾಳಜಿಗೆ ಸಾಕ್ಷಿಯಾಯಿತು.
ಹಾವೇರಿ (ಸೆ.29): ಹಾವೇರಿ ಜಿಲ್ಲೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿದ ರಜತ ಸಂಭ್ರಮ ಕಾರ್ಯಕ್ರಮ ಪತ್ರಿಕೆಯ ಸಾಮಾಜಿಕ ಕಳಕಳಿ ಹಾಗೂ ಜಿಲ್ಲೆಯ ಕುರಿತ ಕಾಳಜಿಗೆ ಸಾಕ್ಷಿಯಾಯಿತು. ಜಿಲ್ಲೆ ರಚನೆಗಾಗಿ ನಡೆದ ಹೋರಾಟ, ಇಲ್ಲಿಯವರೆಗೆ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂದಿನ ಕನಸುಗಳ ಕುರಿತು ಪತ್ರಿಕೆ ಬೆಳ್ಳಿ ಬೆಡಗು ವಿಶೇಷ ಸಂಚಿಕೆಯಲ್ಲಿ ದಾಖಲೆಗಳ ಮೂಲಕ ತೆರೆದಿಟ್ಟಿದೆ.
ಕಾರ್ಯಕ್ರಮದಲ್ಲಿದ್ದ ವಿವಿಧ ಸಂಘಟನೆಗಳ ಹೋರಾಟಗಾರರು, ಸಾಹಿತಿಗಳು, ರಾಜಕೀಯ ಪಕ್ಷದ ಮುಖಂಡರು, ಸಾಧಕರು ಪತ್ರಿಕೆ ಪುಟ ಪುಟಗಳೆನ್ನಲ್ಲ ತಿರುವುತ್ತಾ ಪ್ರಶಂಸೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯ ರಜತ ಮಹೋತ್ಸವದ ಕಾರ್ಯಕ್ರಮವನ್ನು ಇನ್ನಷ್ಟುಅರ್ಥ ಪೂರ್ಣವಾಗಿಸಿದ್ದು ಹಾವೇರಿ ಜಿಲ್ಲೆಯಾಗಿ ರೂಪುಗೊಳ್ಳುವಲ್ಲಿ ಶ್ರಮಿಸಿದವರು. ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಹೋರಾಟಗಾರರು, ಸಾಹಿತಿಗಳು, ಮಹಿಳಾ ಸಾಧಕಿಯರನ್ನು ಗುರುತಿಸಿ ಸನ್ಮಾನಿಸುವ ಮೂಲಕ ‘ಕನ್ನಡಪ್ರಭ’ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು. ಸನ್ಮಾನಿತರಲ್ಲಿಯೂ ಕೂಡಾ ಧನ್ಯತಾ ಭಾವ ಮೂಡಿತ್ತು.