ಆಟೋ ಚಾಲಕರಿಂದ 'ನಮ್ಮ ಯಾತ್ರಿ' ಆ್ಯಪ್ ಬಿಡುಗಡೆಗೆ ಸಿದ್ಧತೆ!
ತಮ್ಮದೇ ಆದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್, "ನಮ್ಮ ಯಾತ್ರಿ" ಅನ್ನು ಅಭಿವೃದ್ಧಿಪಡಿಸುವ ಮೂಲಕ, ಬೆಂಗಳೂರಿನ ಆಟೋ ಯೂನಿಯನ್‌ಗಳು ಒಲಾ ಮತ್ತು ಉಬರ್‌ನಂತಹ ಅಗ್ರಿಗೇಟರ್‌ಗಳು ಮತ್ತು ರೈಡ್ ಕಂಪನಿಗಳಿಗೆ ಸವಾಲೊಡ್ಡಲು ಬಯಸಿದೆ.
ಬೆಂಗಳೂರು (ಅ.10): ಒಲಾ, ಉಬರ್ ಹಾಗೂ ರಾಪಿಡೋ ಅಪ್ಲಿಕೇಶನ್‌ಗಳಿಗೆ ಸೆಡ್ಡು ಹೊಡೆಯಲು ಬಯಸಿರುವ ಆಟೋ ಯೂನಿಯನ್‌ಗಳು ತಮ್ಮದೇ ಆದ ನಮ್ಮ ಯಾತ್ರಿ ಆ್ಯಪ್ ಬಿಡುಗಡೆಗೆ ಸಿದ್ಧತೆ ಆರಂಭಿಸಿದೆ. ಆಟೋ ರಿಕ್ಷಾ ಚಾಲಕರ ಸಂಘ (ಎಆರ್‌ಡಿಯು) ನವೆಂಬರ್ 1 ರಂದು ಈ ಆ್ಯಪ್‌ಅನ್ನು ಬಿಡುಗಡೆ ಮಾಡಲಿದೆ. ಇನ್ಫೋಸಿಸ್ ಕೋ ಫೌಂಡೇಷನ್ ನಂದನ್ ನಿಲಕೇಣಿ ಬೆಂಬಲಿತ ಬೆಕನ್ ಫೌಂಡೇಷನ್ ಈ ಆ್ಯಪ್‌ಅನ್ನು ತಯಾರಿಸಲಿದೆ ಎನ್ನಲಾಗಿದೆ.
ಸರ್ಕಾರ ನಿಗದಿ ಮಾಡಿದಷ್ಟೇ ದರವನ್ನು ಈ ಆ್ಯಪ್ ಹೊಂದಿರಲಿದೆ. ಇದರ ಅನ್ವಯ ಪ್ರತಿ ಎರಡು ಕಿಲೋಮೀಟರ್‌ಗೆ 30 ರೂಪಾಯಿ ಮಾತ್ರವೇ ಚಾರ್ಜ್ ಇರಲಿದೆ. ಅದರೊಂದಿಗೆ ಬುಕ್ಕಿಂಗ್ ಚಾರ್ಜ್ ಆಗಿ 10 ರೂಪಾಯಿ ಇರಲಿದೆ. ಈ ಬುಕ್ಕಿಂಗ್ ಚಾರ್ಜ್ ಅನ್ವಯ ನೀವು ಬುಕ್ ಮಾಡಿದ ಸ್ಥಳಕ್ಕೆ ಆಟೋ ಬರಲಿದೆ. ನಿಗದಿತ ದೂರಕ್ಕಿಂತ ಇನ್ನೂ ದೂರ ಸಂಚಾರಕ್ಕೆ 1 ಕಿಲೋಮೀಟರ್‌ಗೆ 15 ರೂಪಾಯಿ ನಿಗದಿಯಾಗಲಿದೆ.
ಓಲಾ, ಉಬರ್ ಕಂಪನಿಗಳ ಕಳ್ಳಾಟಕ್ಕೆ ಇಂದೇ ಬೀಳುತ್ತಾ ಬ್ರೇಕ್..?
ಓಲಾ, ಉಬರ್ ಕಂಪನಿಗಳಿಗೆ 2016ರ ನಿಯಮದ ಅಡಿಯಲ್ಲಿ ಟ್ಯಾಕ್ಸಿಗಳನ್ನು ಮಾತ್ರ ಓಡಿಸಲು ಪರವಾನಗಿ ಇತ್ತು. ನಿಯಮ ಗಾಳಿಗೆ ತೂರಿದ ಕಂಪನಿಗಳು ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡಲು ಕೂಡ ಆರಂಭಿಸಿದ್ದವು. ಹಾಗಿದ್ದರೂ ಈ ಕಂಪನಿಗಳು ಅಕ್ರಮವಾಗಿ ವ್ಯವಹಾರ ನಡೆಸುತ್ತಿದ್ದವು.