ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್ ವಾಪಸಾತಿಗೆ ಪತ್ರ; ಅಮಾಯಕರಿಗೆ ಶಿಕ್ಷೆ ಸಲ್ಲದೆಂದ ತನ್ವೀರ್ ಸೇಠ್
ನಾನು ತಪ್ಪಿತಸ್ಥರನ್ನು ಬಿಡಬೇಕು ಅಂತಾ ಪತ್ರ ಬರೆದಿಲ್ಲ. ಅಮಾಯಕರು ಅಥವಾ ವಿದ್ಯಾರ್ಥಿಗಳು ವಿನಾಕಾರಣ ಶಿಕ್ಷೆ ಅನುಭವಿಸೋದು ಬೇಡ ಅನ್ನೋದೇ ನನ್ನ ಕಳಕಳಿಯಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಬೆಂಗಳೂರು (ಜು.26): ನಾನು ತಪ್ಪಿತಸ್ಥರನ್ನು ಬಿಡಬೇಕು ಅಂತಾ ಪತ್ರ ಬರೆದಿಲ್ಲ. ಅಥವಾ ಒಂದು ಕೋಮಿನ ವಿಚಾರವನ್ನು ಕೂಡಾ ಪ್ರಸ್ತಾಪ ಮಾಡಿಲ್ಲ. ಅಮಾಯಕರು ಅಥವಾ ವಿದ್ಯಾರ್ಥಿಗಳು ವಿನಾಕಾರಣ ಶಿಕ್ಷೆ ಅನುಭವಿಸೋದು ಬೇಡ ಅನ್ನೋದೇ ನನ್ನ ಕಳಕಳಿಯಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಬೆಂಗಳೂರಿನ ಡಿ.ಜೆ. ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ಮತ್ತು ಶಿವಮೊಗ್ಗ ಸೇರಿದಂತೆ ವಿವಿಧಡೆ ನಡೆದ ಗಲಭೆಗಳಲ್ಲಿ ಮೊಕದ್ದಮೆ ಮರು ಪರಿಶೀಲಿಸಿ ಅಮಾಯಕರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದ ಕುರಿತು ಮಾಧ್ಯಮಗಳೊಂದಿಗೆ ಶಾಸಕ ತನ್ವೀರ್ ಸೇಠ್ ಮಾತನಾಡಿದರು. ಬಿಜೆಪಿಯವರು ಆರೋಪ ಮಾಡ್ತಾ ಇರುವಂತೆ ನಾವು ಒಂದು ಕೋಮು ಓಲೈಕೆ ಮಾಡುವ ಕೆಲಸ ಮಾಡ್ತಾ ಇಲ್ಲ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂಬುದು ನನ್ನ ಆಶಯವಾಗಿದೆ ಎಂದರು.
ಸ್ವತಃ ನನ್ನ ಮೇಲೆ ಆದ ಹಲ್ಲೆ ಬಗ್ಗೆ ಕೂಡಾ ಸರ್ಕಾರ ಸರಿಯಾದ ತನಿಖೆ ನಡೆಸಿಲ್ಲ. ಅದರ ಬಗ್ಗೆ ಕೂಡಾ ತನಿಖೆ ನಡೆಸಿ ಅಂತಾ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅದರ ಬಗ್ಗೆ ಸರಿಯಾದ ತನಿಖೆ ನಡೆದಿಲ್ಲ. ನಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕೂಡಾ ತಪ್ಪಿತಸ್ಥರನ್ನು ಬಿಡಿ ಅಂತಾ ನಾನು ಹೇಳಿಲ್ಲ. ಆ ಗಲಭೆ ಆದ ಹಿನ್ನಲೆ ಏನು ಅಂತಲೂ ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರು ಆರೋಪ ಮಾಡ್ತಾ ಇರುವ ರೀತಿ ನಾವು ಓಲೈಕೆ ಮಾಡ್ತಾ ಇಲ್ಲ. ಒಟ್ಟಾರೆ ಅಮಾಯಕರಿಗೆ ಶಿಕ್ಷೆ ಆಗಬಾರದು ಎಂಬುದೇ ನನ್ನ ಉದ್ದೇಶವಾಗಿದೆ. ಗೃಹ ಸಚಿವ ಪರಮೇಶ್ವರ್ ಅವರೂ ಕೂಡಾ ತಳಮಟ್ಟದಿಂದ ಬಂದವರು. ಅವರು ಕೂಡಾ ಅರ್ಥ ಮಾಡಿಕೊಂಡು ಈ ಪತ್ರದ ಬಗ್ಗೆ ಕ್ರಮ ತೆಗದುಕೊಳ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು.