ಬಿಜಪಿಯಿಂದ ಶಾಸಕ ಬಸನಗೌಡ ಪಾಟೀಲ್ 6 ವರ್ಷ ಉಚ್ಛಾಟನೆಗೆ ಅಸಲಿ ಕಾರಣ ರಿವೀಲ್! ಹೊಸ ಪಕ್ಷ ಕಟ್ತಾರಾ ಯತ್ನಾಳ್!

ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಉಚ್ಛಾಟನೆಯ ಹಿನ್ನೆಲೆ, ಕಾರಣಕರ್ತರು ಹಾಗೂ ಅಸಲಿ ಕಾರಣಗಳ ಎ ಟು ಝಡ್ ಮಾಹಿತಿ ಇಲ್ಲಿದೆ ನೋಡಿ..

Sathish Kumar KH  | Updated: Mar 27, 2025, 4:01 PM IST

ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸಿದ್ದ ಶ್ರೀಕೃಷ್ಣ 101ನೇ ತಪ್ಪು ಮಾಡ್ತಾ ಇದ್ದಂತೆ ಶಿಕ್ಷೆ ಕೊಟ್ಟಿದ್ದ.. ಬಿಜೆಪಿಯ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ಇದೇ ಕಥೆ.. ಹಾದಿ ಬೀದಿಗಳಲ್ಲಿ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಟೀಕೆ, ಹಿಗ್ಗಾಮುಗ್ಗ ವಾಗ್ದಾಳಿ ಮಡಿದ್ದರು. ಬಿಜೆಪಿ ಭೀಷ್ಮಾಚಾರ್ಯ ಯಡಿಯೂರಪ್ಪ ವಿರುದ್ಧ ಹೇಳಿಕೆಗಳು, ಯತ್ನಾಳ್ ಹೇಳಿಕೆಗಳಿಂದ ಶಿಸ್ತಿನ ಪಕ್ಷಕ್ಕೆ ಆಗಿದ್ದ ಮುಜುಗರ ಅಷ್ಟಿಷ್ಟಲ್ಲ. ಎಲ್ಲವನ್ನೂ ಸಹಿಸಿಕೊಂಡಿದ್ದ ಬಿಜೆಪಿ ಹೈಕಮಾಂಡ್ ಸಹನೆಯ ಕಟ್ಟೆಯೊಡೆದಿದೆ. ಬಿಜೆಪಿಯ ರೆಬೆಲ್ ಸ್ಟಾರ್ ಅಂತಾನೇ ಕರೆಸಿಕೊಂಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಯುದ್ಧ ಸಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್, ದೆಹಲಿಯಲ್ಲಿದ್ದಾಗ್ಲೇ ಉಚ್ಚಾಟನೆಯ ಆದೇಶ ಹೊರ ಬಿದ್ದಿದೆ... ತಮ್ಮ ಸಕ್ಕರೆ ಫ್ಯಾಕ್ಟರಿ ಉದ್ಘಾಟನೆಗೆ ಕೇಂದ್ರದ ಬಿಜೆಪಿ ನಾಯಕರನ್ನು ಆಹ್ವಾನಿಸಲು ಯತ್ನಾಳ್ ದೆಹಲಿಗೆ ಹೋಗಿದ್ರು.. ಇದೇ ಹೊತ್ತಲ್ಲಿ ಬಿಜೆಪಿ ಹೈಕಮಾಂಡ್ ಮತ್ತೊಂದು ಹೆಜ್ಜೆ ಇಟ್ಟಿತ್ತು. ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರಿಗೆ ಮಂಗಳವಾರ ನೋಟಿಸ್ ಜಾರಿ ಮಾಡಿತ್ತು. ಮಾಜಿ ಸಚಿವರಾದ, ವಿಜಯೇಂದ್ರ ಬಣದ ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಯತ್ನಾಳ್ ಬಣದ ಶಾಸಕ ಬಿ.ಪಿ ಹರೀಶ್, ಬಂಡಾಯ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್'ಗೆ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿಯಾಗಿತ್ತು. ಎಲ್ಲಾ ಓಕೆ, ವಿಜಯೇಂದ್ರಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಅಂತ ದೆಹಲಿಯಲ್ಲಿ ನಿಂತು ಯತ್ನಾಳ್ ಪ್ರಶ್ನಿಸಿದರು.

ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, ವಿಜಯೇಂದ್ರ ಅವ್ರಿಗೂ ನೋಟಿಸ್ ಕೊಡ್ಬೇಕು ಅಂತ ಹೇಳಿದ ಕೇವಲ ಅರ್ಧ ಗಂಟೆಯಲ್ಲಿ ಯತ್ನಾಳ್ ಅವ್ರನ್ನು ಪಕ್ಷದಿಂದ ಉಚ್ಛಾಚನೆ ಮಾಡಿರೋ ಆದೇಶ ಹೊರ ಬಿದ್ದಿದೆ. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ದೆಹಲಿಯಲ್ಲೇ ಇದ್ರು. ತನ್ನ ಆಪ್ತರಿಗೆ ಹೈಕಮಾಂಡ್ ನೋಟಿಸ್ ಕೊಟ್ಟ ಬೆನ್ನಲ್ಲೇ ವಿಜಯೇಂದ್ರ ದೆಹಲಿಗೆ ತೆರಳಿದ್ರು. ಅವ್ರೇ ಹೋಗಿದ್ರೋ, ಹೈಕಮಾಂಡ್ ನಾಯಕರು ಕರೆಸಿಕೊಂಡಿದ್ರೋ ಗೊತ್ತಿಲ್ಲ.. ವಿಜಯೇಂದ್ರ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದ್ದ ಹೊತ್ತಲ್ಲೇ ಯತ್ನಾಳ್ ಅವ್ರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರೋ ವಿಜಯೇಂದ್ರ, ಯತ್ನಾಳ್ ಉಚ್ಚಾಟನೆ ತಮಗೆ ಖುಷಿ ತಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಶಾಸಕ ಯತ್ನಾಳ್ ಬಣದವರ ಮುಂದಿನ ನಡೆ ಏನು?: ದಿಢೀರನೇ ಬಂದ ಹೈಕಮಾಂಡ್ ನಿರ್ಧಾರ

ಬಸನಗೌಡ ಪಾಟೀಲ್'ರವರ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ. ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ. ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ, ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ, ಸಮರ್ಪಣೆ-ತ್ಯಾಗದ ಪಾಠವನ್ನು ಹೇಳಿಕೊಡುವ ಸಂಸ್ಕಾರವಂತ ಸಂಘಟನೆಯ ವ್ಯವಸ್ಥೆಯಲ್ಲಿ ಬೆಳೆದು ಬಂದ ನಾನು ಸಹನೆ-ತಾಳ್ಮೆಯನ್ನು ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಆಧಾರ ಸ್ಥಂಭವೆಂದು ಪರಿಗಣಿಸಿ ಮುನ್ನಡಿದಿದ್ದೇನೆ. ಈ  ನಿಟ್ಟಿನಲ್ಲಿ ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ. ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ. ವಿಶ್ವಾಸ ರಾಜಕಾರಣವನ್ನು ಎಲ್ಲರೊಡಗೂಡಿ ಮುಂದುವರೆಸಿ ಪಕ್ಷ ಸಂಘಟನೆಗೆ ಕಟ್ಟಕಡೆಯ ಕಾರ್ಯಕರ್ತರನ್ನೂ ಅಣಿಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಲಿದ್ದೇನೆ.

ಬಿಜೆಪಿ ಶಿಸ್ತಿನ ಪಕ್ಷ ಅಂತಾನೇ ಹೆಸರುವಾಸಿ.. ಅಂತಾ ಶಿಸ್ತಿನ ಪಕ್ಷದ ರಾಜ್ಯ ಘಟಕದಲ್ಲಿ ಅಶಿಸ್ತು ತಾಂಡವವಾಡ್ತಾ ಇತ್ತು. ವಿಜಯೇಂದ್ರ ಅವ್ರನ್ನು ಪಕ್ಷದ ರಾಜ್ಯಾಧ್ಯರನ್ನಾಗಿ ನೇಮಕ ಮಾಡಿದ್ದು ಬಿಜೆಪಿ ಹೈಕಮಾಂಡ್.. ಅದನ್ನು ವಿರೋಧಿಸುವ ಮೂಲಕ ಹೈಕಮಾಂಡ್ ನಿರ್ಧಾರವನ್ನೇ ಯತ್ನಾಳ್ ವಿರೋಧ ಮಾಡ್ತಾ ಬಂದಿದ್ರು. ಪಕ್ಷದ ವೇದಿಕೆಗಳಲ್ಲಿ ಪ್ರಶ್ನಿಸಿದ್ದಿದ್ರೆ ಕ್ಷಮಿಸ್ತಾ ಇದ್ರೋ ಏನೋ..? ಆದ್ರೆ ಯತ್ನಾಳ್ ಸಿಕ್ಕ ಸಿಕ್ಕಲ್ಲಿ ಮಾತಾಡ್ತಾ ಬಂದ್ರು.. ವಿಜಯೇಂದ್ರ ವಿರುದ್ಧ ಅಷ್ಟೇ ಅಲ್ಲ, ಯಡಿಯೂರಪ್ಪನವರನ್ನೂ ನಿಂದಿಸ್ತಾ ಹೋದ್ರು. ಯತ್ನಾಳ್ ನಡವಳಿಕೆಯಿಂದ ಕೆರಳಿದ ಹೈಕಮಾಂಡ್ ಎರಡು ಬಾರಿ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡ್ತು. ಫೆಬ್ರವರಿ 10ರಂದು 2ನೇ ಬಾರಿ ನೋಟಿಸ್ ಜಾರಿ ಮಾಡಿ, 72 ಗಂಟೆಗಳಲ್ಲಿ ಉತ್ತರ ಕೊಡುವಂತೆ ಸೂಚನೆ ಕೊಟ್ಟಿತ್ತು. ಯತ್ನಾಳ್ ಉತ್ತರವನ್ನೂ ಕೊಟ್ಟಿದ್ರು. ಇಷ್ಟಾದ್ಮೇಲೂ ಯತ್ನಾಳ್ ತಮ್ಮ ವರಸೆ ಬದಲಿಸ್ಲಿಲ್ಲ. ಕೊನೆಗೂ ಅಳೆದೂ ತೂಗಿ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆಯ ನಿರ್ಧಾರ ತೆಗೆದುಕೊಂಡಿದೆ ಕೇಸರಿ ಹೈಕಮಾಂಡ್.

ಫೆಬ್ರವರಿ 10, 2025 ರಂದು ಹೊರಡಿಸಲಾದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪಕ್ಷದ ಕೇಂದ್ರ ಶಿಸ್ತು ಸಮಿತಿ ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆಯ ಭರವಸೆಗಳನ್ನು ನೀವು ನೀಡಿದ್ದರೂ ಸಹ, ಪಕ್ಷದ ಶಿಸ್ತಿನ ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆದ್ದರಿಂದ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 [ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಮತ್ತು ನೀವು ಇಲ್ಲಿಯವರೆಗೆ ಹೊಂದಿದ್ದ ಪಕ್ಷದ ಎಲ್ಲಾ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಸಾಲು ಸಾಲು ರಾಜೀನಾಮೆ, ವಿಜಯಪುರ ಬಿಜೆಪಿ ನಗರ ಮಂಡಲವೇ ಖಾಲಿ ಖಾಲಿ!

ಯತ್ನಾಳ್ ಅವ್ರಿಗೆ ಇದು ಅತೀ ದೊಡ್ಡ ಶಾಕ್.. ತಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಅಂತ ಯತ್ನಾಳ್ ಅಂದ್ಕೊಂಡಿದ್ರೇನೋ.. ಅದು ಅವರ ಪ್ರತೀ ಮಾತುಗಳಲ್ಲೂ ಗೊತ್ತಾಗ್ತಾ ಇತ್ತು. ತಮ್ಮ ಹೋರಾಟ ಪಕ್ಷದ ವಿರುದ್ಧ ಅಲ್ಲ, ವಿಜಯೇಂದ್ರ ವಿರುದ್ಧ, ಯಡಿಯೂರಪ್ಪ ವಿರುದ್ಧ ಅಂತ ಯತ್ನಾಳ್ ಹೇಳ್ತಾ ಬಂದಿದ್ರು. ಆದ್ರೆ ಆ ಹೋರಾಟದ ಹಾದಿಯಲ್ಲಿ ಡ್ಯಾಮೇಜ್ ಆಗ್ತಾ ಇದ್ದದ್ದು ಮಾತ್ರ ಪಕ್ಷಕ್ಕೆ ಅನ್ನೋ ಕಟು ಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಯತ್ನಾಳ್ ಎಡವಿದ್ರು.. ಆ ಕಾರಣಕ್ಕೆ ಈಗ ಉಚ್ಚಾಟನೆಯ ಶಿಕ್ಷೆ ಸಿಕ್ಕಿದೆ.

ಯತ್ನಾಳ್ ಉಚ್ಛಾಟನೆಗೆ ಅಸಲಿ ಕಾರಣಗಳು!

  • ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಘರ್ಷಣೆ ತಾರಕಕ್ಕೇರಿತ್ತು. 
  • ಎರಡೂ ಬಣಗಳ ಮಧ್ಯೆ ಪ್ರತೀ ದಿನ ಹಾದಿ-ಬೀದಿ ಜಗಳಗಳು ಶುರುವಾಗಿದ್ದವು. 
  • ಇಬ್ಬರ ಮಧ್ಯೆ ಸಂಧಾನಕ್ಕೆ ಪಕ್ಷದ ವರಿಷ್ಠರು ನಡೆಸಿದ ಪ್ರಯತ್ನಗಳು ವಿಫಲವಾದವು. 
  • ಯತ್ನಾಳ್ ಅವರನ್ನು ಕರೆದು ಬುದ್ಧಿ ಹೇಳಿದ್ರೂ ಅವರ ಮಾತಿನಲ್ಲಿ, ನಡವಳಿಕೆಯಲ್ಲಿ ಬದಲಾವಣೆಯಾಗಿರ್ಲಿಲ್ಲ. 
  • ವಿಜಯೇಂದ್ರ ಮತ್ತು ಯತ್ನಾಳ್ ಮಧ್ಯೆ ಹೊಂದಾಣಿಕೆ ಮೂಡುವ ಲಕ್ಷಣಗಳೇ ಕಾಣಲಿಲ್ಲ. 
  • ಹೀಗಾಗಿ ಇಬ್ಬರಲ್ಲಿ ಒಬ್ಬರನ್ನು ಹೊರ ಹಾಕಲೇಬೇಕಾದ ಅನಿವಾರ್ಯತೆ ಬಿಜೆಪಿ ಹೈಕಮಾಂಡ್‌ಗೆ ಎದುರಾಗಿತ್ತು.
  • ವಿಜಯೇಂದ್ರ ಮತ್ತು ಯತ್ನಾಳ್ ಪೈಕಿ ರಾಜ್ಯ ಬಿಜೆಪಿಯಲ್ಲಿ ಯಾರ ಬಲ ಹೆಚ್ಚು ಎಂಬ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಂಡಿತ್ತು.
  • ಆ ವರದಿಯಲ್ಲಿ ಪಕ್ಷದ ಬಹುತೇಕ ನಾಯಕರು ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದರು.
  • ಹೀಗಾಗಿ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡುವ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ.

ಇದನ್ನೂ ಓದಿ: Breaking: ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ; ಶಾಸಕ ಸ್ಥಾನಕ್ಕೂ ಬರುತ್ತಾ ಕುತ್ತು!

'ಸತ್ಯವಂತರಿಗಿದು ಕಾಲವಲ್ಲ' ಎಂದ ಯತ್ನಾಳ್!
ಬಿಜೆಪಿಗೆ ತಾವು ಅನಿವಾರ್ಯ ಅಂದುಕೊಂಡಿದ್ದ ಯತ್ನಾಳ್ ಅವ್ರಿಗೆ ಪಕ್ಷದ ಹೈಕಮಾಂಡ್ ಮರ್ಮಾಘಾತ ಕೊಟ್ಟಿದೆ. ತಿದ್ದಿಕೊಳ್ಳಲು ಸಮಯ ಕೊಟ್ಟರೂ ತಿದ್ದಿಕೊಳ್ಳದ ಯತ್ನಾಳ್ ವಿರುದ್ಧ ಗದಾಪ್ರಹಾರ ನಡೆದಿದೆ.. ಪಕ್ಷದಿಂದಲೇ ಗೇಟ್ ಪಾಸ್ ಕೊಟ್ಟಿದೆ. ಉಚ್ಚಾಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ಸತ್ಯವಂತರಿಗಿದು ಕಾಲವಲ್ಲ ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ, ಪಕ್ಷದೊಳಗಿನ ಸುಧಾರಣೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ, ಏಕವ್ಯಕ್ತಿ ದಬ್ಬಾಳಿಕೆಯನ್ನು ತೆಗೆದುಹಾಕಿ ಮತ್ತು ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ವಿನಂತಿಸಿದ್ದಕ್ಕಾಗಿ ಪಕ್ಷವು ನನ್ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ. ನನ್ನನ್ನು ಅಮಾನತುಗೊಳಿಸುವ ನಿರ್ಧಾರ ಭ್ರಷ್ಟಾಚಾರ, ಕುಟುಂಬ ರಾಜಕೀಯ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಹಿಂದುತ್ವದ ವಿರುದ್ಧದ ನನ್ನ ಹೋರಾಟವನ್ನು ತಡೆಯುವುದಿಲ್ಲ. ನಾನು ನನ್ನ ಜನರಿಗೆ ಅದೇ ಹುರುಪು ಮತ್ತು ದೃಢತೆಯಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ. ಸತ್ಯವಂತರಿಗಿದು ಕಾಲವಲ್ಲ. ದುಷ್ಟಜನರಿಗೆ ಸುಭಿಕ್ಷಕಾಲ. ಉಪಕಾರ ಮಾಡಿದರೆ ಅಪಕರಿಸುವ ಕಾಲ. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ. ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

Read More...