ರೆಬೆಲ್ ಯತ್ನಾಳ್ ಜೊತೆಗೆ ರಾಜೀ ಸಂಧಾನಕ್ಕೆ ಮುಂದಾಯ್ತಾ ಬಿಜೆಪಿ ಹೈಕಮಾಂಡ್?

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಕ್ಫ್ ವಿರುದ್ಧದ ಹೋರಾಟದಲ್ಲಿ ಪಕ್ಷದ ನಾಯಕರನ್ನು ಕಡೆಗಣಿಸಿದ್ದಕ್ಕೆ ಹೈಕಮಾಂಡ್ ನೋಟಿಸ್ ನೀಡಿದೆ. ಯತ್ನಾಳ್‌ರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ.

First Published Dec 3, 2024, 3:55 PM IST | Last Updated Dec 3, 2024, 3:55 PM IST

ಕರ್ನಾಟಕ ರಾಜ್ಯದ ಬಿಜೆಪಿ ನಾಯಕತ್ವ ವಿಚಾರದಲ್ಲಿ ರಗಳೆ ಮುಗಿಯುತ್ತಿಲ್ಲ. ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಮಾಡಿದರೂ, ಪಕ್ಷಕ್ಕಾಗಿ ದುಡಿಯುತ್ತಾ ಜೀವನ ಸವೆಸಿದ ಹಿರಿಯ ನಾಯಕರನ್ನು ಬಿಟ್ಟು ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಪಡೆದುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಟ್ಟಾಗಿದ್ದಾರೆ. 

ರಾಜ್ಯದಲ್ಲಿ ಹಿಂದೂ ಹುಲಿ ಎಂದು ಖ್ಯಾತಿ ಆಗಿದ್ದರೂ ಪಕ್ಷದಿಂದ ಯಾವುದೇ ಒಂದು ಜವಾಬ್ದಾರಿಯುತ ಹುದ್ದೆಯನ್ನೂ ನೀಡಲಿಲ್ಲ. ಕೇಂದ್ರ ಸರ್ಕಾರದಲ್ಲಿಯೇ ಸಚಿವರಾಗಿ ಆಡಳಿತ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್‌ ಅವರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನ ನೀಡದೇ ಕೈಬಿಡಲಾಗಿತ್ತು. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ವಿಪಕ್ಷ ಸ್ಥಾನವಾಗಿರುವ ಬಿಜೆಪಿ ತಮ್ಮನ್ನು ವಿಪಕ್ಷ ನಾಯಕರನ್ನಾಗಲೀ, ಪಕ್ಷದ ರಾಜ್ಯಾಧ್ಯಕ್ಷರನ್ನಾಗಲೀ ಮಾಡಲಿದೆ ಎಂದು ಯತ್ನಾಳ್ ನಿರೀಕ್ಷೆ ಇಟ್ಟುಕೊಂಡಿದ್ದರು. ಯಾವಾಗ ಎರಡೂ ನಿರೀಕ್ಷೆಗಳು ಸುಳ್ಳಾದವೋ ಆಗ ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ತೊಡೆ ತಟ್ಟಿದ್ದಾರೆ. 

ಹೀಗಾಗಿ ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಅನೇಕ ಬಿಜೆಪಿ ನಾಯಕರ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ. ಇದರ ಬೆನ್ನಲ್ಲಿಯೇ ವಕ್ಫ್ ಕುರಿತ ಹೋರಾಟದ ವಿಚಾರದಲ್ಲಿ ಬಿಜೆಪಿ ರಾಜ್ಯ ನಾಯಕರನ್ನು ಹೊರಗಿಟ್ಟು ತಮ್ಮದೇ ನಾಯಕರ ತಂಡ ಸೃಷ್ಟಿಸಿಕೊಂಡು ಯತ್ನಾಳ್ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಆದರೆ, ಇದೊಂದು ಪಕ್ಷ ವಿರೋಧಿ ಕಾರ್ಯಕ್ರಮವೆಂದು ಹಾಗೂ ರಾಜ್ಯಾಧ್ಯಕ್ಷರಿಗೆ ನಾಲಿಗೆ ಹರಿಬಿಟ್ಟು ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಹೈಕಮಾಂಡ್‌ನಿಂದ ನೋಟೀಸ್ ಜಾರಿ ಮಾಡಲಾಗಿದೆ. ಇದೀಗ ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡುತ್ತಿದ್ದು, ಯಾವ ಕ್ರಮ ಕೈಗೊಳ್ಳಲಿದೆ ಎಂಬ ತೀರ್ಮಾನ ಕುತೂಹಲ ಕೆರಳಿಸಿದೆ.