ಶಕ್ತಿ ಯೋಜನೆ ಜಾರಿ ನಂತರ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಹೆಚ್ಚಾಯ್ತು; ಡ್ಯೂಟಿನೇ ಬೇಡ ಎಂತಿರೋ ನೌಕರರು!
ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಿದ್ದು, ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ನಿಂದನೆ ಪ್ರಕರಣಗಳು ಹೆಚ್ಚುತ್ತಿವೆ. ಯಾದಗಿರಿ, ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಸಾರಿಗೆ ಸಿಬ್ಬಂದಿ ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ.
ಶಕ್ತಿ ಯೋಜನೆ ಎಫೆಕ್ಟ್ ಸರ್ಕಾರಿ ಬಸ್‌ಗಳು ಫುಲ್ ರಶ್. ಜನದಟ್ಟಣೆ, ಒತ್ತಡದಿಂದ ಕಂಗೆಟ್ಟ ಸಾರಿಗೆ ಸಿಬ್ಬಂದಿ ಮೇಲೆ ಪ್ರಯಾಣಿಕರಿಂದ ಹಲ್ಲೆ ಮತ್ತು ನಿಂದನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್‌ಗಳ ಕಂಡಕ್ಟರ್ ಮೇಲೆ ಮೂರ್ನಾಲ್ಕು ಮಾರಣಾಂತಿಕ ಹಲ್ಲೆಗಳು ನಡೆದಿವೆ. ಇದರ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿಯೂ ಸಾರಿಗೆ ಸಿಬ್ಬಂದಿಯ ಮೇಲೆ ಪ್ರಯಾಣಿಕರು ಹಲ್ಲೆ ಮಾಡುವ ಪ್ರಮಾಣ ಹೆಚ್ಚಾಗಿತ್ತಿವೆ.
ಯಾದಗಿರಿ, ಕಲಬುರಗಿ ಸೇರಿ ರಾಜಾದ್ಯಂತ ಸಾರಿಗೆ ಸಂಸ್ಥೆಯ ನೌಕರರು ಭಯದಿಂದ ಕೆಲಸ ಮಾಡುವಂತಾಗಿದೆ. ಇನ್ನು ಕೆಲವರು ಕೆಲವೊಂದು ರೂಟ್‌ಗಳಲ್ಲಿ ಜನರು ಹಲ್ಲೆ ಮಾಡುತ್ತಾರೆ ಎಂಬ ಭಯದಿಂದ ಅಲ್ಲಿ ಆದಾ ಬರುತ್ತಿದ್ದರೂ ಸಾರಿಗೆ ಸಿಬ್ಬಂದಿ ಆ ಮಾರ್ಗದ ಬಸ್‌ಗಲ್ಲಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವೊಂದು ಸ್ಥಳಗಳಲ್ಲಿ ಬಸ್ ನಿಲ್ಲಿಸುವ ವಿಚಾರಕ್ಕೆ, ಪ್ರಯಾಣಿಕರು ಬಸ್ ಇಳಿಯುವುದು ಹಾಗೂ ಹತ್ತುವುದರ ವಿಚಾರಕ್ಕೆ ಜೊತೆಗೆ ಚಿಲ್ಲರೆಗಾಗಿ ಗಲಾಟೆ ಮಾಡುತ್ತಿದ್ದಾರೆ.
ಶಕ್ತಿ ಯೋಜನೆ ಜಾರಿಯಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಪ್ರತಿಯೊಂದು ಬಸ್‌ನಲ್ಲಿ 54 ಪ್ರಯಾಣಿಕರ ಸಾಮರ್ಥ್ಯವಿದ್ದರೆ ಶಕ್ತಿ ಯೋಜನೆ ಜಾರಿಗೆ ಬಂದ ನಂತರದಿಂದ 100ಕ್ಕೂ ಹೆಚ್ಚು ಜನರು ಒಂದೊಂದು ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಕಂಡಕ್ಟರ್ ನಡೆದುಕೊಂಡು ಹೋಗಿ ಟಿಕೆಟ್ ವಿತರಣೆ ಮಾಡಲೂ ಪರದಾಡಬೇಕಾಗುತ್ತದೆ. ಇನ್ನು ಸೀಟಿಗಾಗಿ ಕೆಲವರು ಹೊಡೆದಾಡುವ ಪ್ರಕರಣಗಳು ಸಾಮಾನ್ಯವಾಗಿವೆ. ಇದರೊಂದಿಗೆ ಟಿಕೆಟ್ ಕೊಡುವಾಗ ಮಹಿಳೆಯರಿಗೆ ಕಂಡಕ್ಟರ್ ಮೈ ಟಚ್ ಮಾಡಿದರೂ ದೊಡ್ಡ ಗಲಾಟೆ ಮಾಡುತ್ತಾರೆ. ಬಸ್‌ನಲ್ಲಿ ಮುಂದಕ್ಕೆ ಹೋಗಿ ಎಂದು ಹೇಳಿದರೂ ಹಲ್ಲೆ ಮಾಡಲು ಮುಂದಾಗುತ್ತಾರೆ. ಒಟ್ಟಾರೆಯಾಗಿ ಸಾರಿಗೆ ಸಿಬ್ಬಂದಿ ಪ್ರಯಾಣಿಕರ ನಡೆಯಿಂದ ಬೇಸಸತ್ತು ಹೋಗಿದ್ದಾರೆ.