ಅಸಹಜವಾಗಿ ಮೃತಪಡುವ ಕುರಿಗಳ ಪರಿಹಾರ ಮೊತ್ತ ಹೆಚ್ಚಳ: ಪ್ರಭು ಚವ್ಹಾಣ್
ಅನ್ಯ ಕಾರಣಗಳಿಂದಾಗಿ ಕುರಿ, ಮೇಕೆಗಳು ಸಾವನ್ನಪಿದಾಗ ಸಾಕಾಣಿಕೆದಾರರಿಗೆ ನೀಡುತ್ತಿರುವ ಪರಿಹಾರವನ್ನು ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಬೆಂಗಳೂರು (ಫೆ. 22): ಅನ್ಯ ಕಾರಣಗಳಿಂದಾಗಿ ಕುರಿ, ಮೇಕೆಗಳು ಸಾವನ್ನಪಿದಾಗ ಸಾಕಾಣಿಕೆದಾರರಿಗೆ ನೀಡುತ್ತಿರುವ ಪರಿಹಾರವನ್ನು ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶೆಂಪೂರ ಪ್ರಶ್ನೆಗೆ ಉತ್ತರಿಸಿದ ಅವರು, ಕುರಿ, ಮೇಕೆಗಳು ಮೃತಪಟ್ಟಾಗ ಪ್ರಸ್ತುತ ಸಾಕಾಣಿಕೆದಾರರಿಗೆ ನೀಡುತ್ತಿರುವ ಪರಿಹಾರ ಮೊತ್ತವು ಸಾಕಾಗುವುದಿಲ್ಲ ಎಂಬುದು ಸದಸ್ಯರ ಒತ್ತಾಯವಾಗಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು. ಅಲ್ಲದೇ, ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕಾಶೆಂಪೂರ, ಸದ್ಯಕ್ಕೆ ಮರಿ ಕುರಿ, ಮೇಕೆಗಳು ಸಾವನ್ನಪ್ಪಿದರೆ ಎರಡೂವರೆ ಸಾವಿರ ರು., ದೊಡ್ಡ ಕುರಿ, ಮೇಕೆ ಸಾವನ್ನಪ್ಪಿದರೆ ಐದು ಸಾವಿರ ರು. ಪರಿಹಾರವನ್ನು ಸಾಕಾಣಿಕೆದಾರರಿಗೆ ನೀಡಲಾಗುತ್ತಿದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಪರಿಹಾರ ಮೊತ್ತವನ್ನು 10 ಸಾವಿರ ರು.ಗೆ ಹೆಚ್ಚಿಸಬೇಕು. ಅಲ್ಲದೇ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಕುರಿ, ಮೇಕೆ ಸಾಕಾಣಿಕೆಗೆ ಒದಗಿಸುತ್ತಿರುವ ಸಹಾಯಧನದ ಮೊತ್ತವನ್ನು 75 ಸಾವಿರ ರು.ಗೆ ಹೆಚ್ಚಿಸಬೇಕು. ಗಡಿಭಾಗದಲ್ಲಿನ ತೆಲಂಗಾಣದಲ್ಲಿ ಕುರಿ, ಮೇಕೆ ಸಾಕಾಣಿಗೆ ಶೇ.90ರಷ್ಟುಸಬ್ಸಿಡಿ ನಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಬೇಕು ಎಂದರು.