ಸಕಲ ಸರ್ಕಾರಿ ಗೌರವದೊಂದಿಗೆ ಎಸ್.ಎಂ. ಕೃಷ್ಣ ಅಂತ್ಯಕ್ರಿಯೆ; ಯಾರಾರು ಬಂದು ಹೋದ್ರು ಗೊತ್ತಾ?
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಗಣ್ಯರು, ಸ್ವಾಮೀಜಿಗಳು, ಸಚಿವರು ಸೇರಿದಂತೆ ಅಪಾರ ಸಂಖ್ಯೆಯ ಜನರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಕುಶಾಲತೋಪು ಸಿಡಿಸಿ, ರಾಷ್ಟ್ರಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ, ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನಿನ್ನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ಬಳಿಯ ಸೋಮನಹಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಇಡೀ ರಾಜ್ಯ ಸರ್ಕಾರದ ಗಣ್ಯ ನಾಯಕರು ಹಾಗೂ ಕೇಂದ್ರ ಸರ್ಕಾರದ ಭಾಗವಾಗಿರುವ ರಾಜ್ಯದ ಎಲ್ಲ ಗಣ್ಯರು ಕೂಡ ಮಾಜಿ ಸಿಎಂ ಕೃಷ್ಣ ಅವರ ಅಂತ್ಯಕ್ರಿಯೆಯನ್ನು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕೃಷ್ಣ ಅವರ ಸಂಬಂಧಿಕರೂ ಆಗಿರುವ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹೆಚ್.ಡಿ. ಕುಮಾರಸ್ವಾಮಿ, ಒಕ್ಕಲಿಗ ಸಮುದಾಯದ ಸ್ವಾಮೀಜಿ ಶ್ರೀ ನಿರ್ಮಲಾನಂದನಾಥ, ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯ ಸ್ವಾಮಿ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್. ಅಶೋಕ್, ಸಚಿವರಾದ ಕೃಷ್ಣ ಬೈರೇಗೌಡ, ಮುನಿಯಪ್ಪ, ಹೆಚ್.ಸಿ. ಮಹದೇವಪ್ಪ, ಎಂ.ಸಿ. ಸುಧಾಕರ್, ಜಿ.ಪರಮೇಶ್ವರ್, ಹೆಚ್.ಕೆ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಕೃಷ್ಣ ಅವರ ಮೃತದೇಹಕ್ಕೆ ಪುಷ್ಪಗುಚ್ಛ ಇಟ್ಟು ಅಂತಿಮ ನಮನ ಸಲ್ಲಿಕೆ ಮಾಡಲು ಅವಕಾಶ ನೀಡಲಾಯಿತು.
ಇದನ್ನೂ ಓದಿ: ಪ್ರಧಾನಿ ಮೋದಿ ಕಾಲಿಟ್ಟಿದ್ದೇ ತಡ, ಪ್ರವಾಸಿಗರ ಸ್ವರ್ಗವಾದ ಲಕ್ಷದ್ವೀಪ
ಎಸ್.ಎಂ. ಕೃಷ್ಣ ಅವರ ಮೃತದೇಹ ಅಂತಿಮ ದರ್ಶನ ಮುಕ್ತಾಯದ ನಂತರ ಪೊಲೀಸ್ ಇಲಾಖೆಯಿಂದ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಕೆ ಮಾಡಲಾಯಿತು. ಈ ವೇಳೆ ಮೂರು ಸುತ್ತು ಕುಶಾಲತೋಪು ಸಿಡಿಸಿದ ಪೊಲೀಸರು ಸರ್ಕಾರದಿಂದ ಗೌರವ ಸಲ್ಲಿಕೆ ಮಾಡಿದರು. ಪಾರ್ಥಿವ ಶರೀರದ ಮೇಲೆ ಇದ್ದ ರಾಷ್ಟ್ರಧ್ವಜವನ್ನು ಕೃಷ್ಣ ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ನಂತರ, ಮೃತದೇಹವನ್ನು ಅಲ್ಲಿಯೇ ಹೂವಿನ ಪಲ್ಲಕ್ಕಿಯ ರೀತಿ ಮಾಡಲಾಗಿದ್ದ ಚಟ್ಟದಲ್ಲಿ ಹೊತ್ತು ಮುರು ಸುತ್ತು ಸುತ್ತಲಾಯಿತು. ಇದಾದ ನಂತರ ಚಿತೆಯನ್ನು ಭಾಗಶಃ ಶ್ರೀಗಂಧದ ಕಟ್ಟಿಗೆಯಲ್ಲಿ ಸಿದ್ಧಪಡಿಸಲಾಗಿತ್ತು. ಮೃತದೇಹ ಚಿತೆಯ ಮೇಲಿಟ್ಟು ಅವರ ಹಿರಿಯ ಮೊಮ್ಮಗ ಅಮಾರ್ಥ್ಯ ಸಿದ್ಧಾರ್ಥ ಹೆಗಡೆ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಕೃಷ್ಣ ಅವರು ಪಂಚಭೂತಗಳಲ್ಲಿ ಲೀನರಾದರು.