ಮೈಸೂರಿನಲ್ಲಿ ದೇಗುಲ ತೆರವು ವಿರುದ್ಧ ಆಕ್ರೋಶ, ಸರ್ಕಾರಕ್ಕೆ ಹಿಂಜಾವೇ ಎಚ್ಚರಿಕೆ
ನಂಜನಗೂಡು ತಾಲೂಕಿನ ಹುಚ್ಚಗಣಿಯ ಮಹದೇವಮ್ಮ ಭೈರವೇಶ್ವರ ಪುರಾತನ ದೇವಸ್ಥಾನವನ್ನು ಒಡೆದು ಹಾಕಿರುವುದನ್ನು ವಿರೋಧಿಸಿ ರಾಜ್ಯದ ನಾನಾ ಕಡೆಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ. 17): ನಂಜನಗೂಡು ತಾಲೂಕಿನ ಹುಚ್ಚಗಣಿಯ ಮಹದೇವಮ್ಮ ಭೈರವೇಶ್ವರ ಪುರಾತನ ದೇವಸ್ಥಾನವನ್ನು ಒಡೆದು ಹಾಕಿರುವುದನ್ನು ವಿರೋಧಿಸಿ ರಾಜ್ಯದ ನಾನಾ ಕಡೆಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಮೈಸೂರಿನಲ್ಲಿ ದೇವಸ್ಥಾನ ಕೆಡವಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ್ ಸಿಂಹ ಅವರಿಗೆ ಮೂಡಿಗೆರೆಯಲ್ಲಿ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸಿದರು.
ದೇವಸ್ಥಾನ ತೆರವು ವಿಚಾರದಲ್ಲಿ ಅಧಿಕಾರಿಗಳಿಂದ ತಪ್ಪಾಗಿದೆ ಎಂದು ಮುಖ್ಯಮಂತ್ರಿಗಳು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು. ಜೊತೆಗೆ 10 ದಿನಗಳ ಒಳಗೆ ದೇವಸ್ಥಾನ ಒಡೆದ ಜಿಲ್ಲಾಧಿಕಾರಿ, ತಹಸೀಲ್ದಾರ್ ತಲೆದಂಡ ಆಗಬೇಕು. ದೇವಸ್ಥಾನ ಕೆಡವಿದ ಸ್ಥಳದ ಪಕ್ಕದಲ್ಲೇ ದೇವಸ್ಥಾನ ನಿರ್ಮಾಣ ಆಗಬೇಕು. ಇಲ್ಲವಾದರೆ 10 ದಿನದ ನಂತರ ಮೈಸೂರಿನಿಂದ ಮುಖ್ಯಮಂತ್ರಿ ಮನೆಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಸಿದೆ.