ಹಾಸನಾಂಬ ಉತ್ಸವದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮಾ ದಂಪತಿ ಪೂಜೆ: ಹಕ್ಕುಚ್ಯುತಿ ಮಂಡಿಸಲು ಮುಂದಾದ ಶಾಸಕ ಸ್ವರೂಪ್
ಹಾಸನಾಂಬ ದೇವರ ಉತ್ಸವದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮಾ ದಂಪತಿ ಸಮೇತ ಪೂಜೆಯಲ್ಲಿ ಭಾಗಿಯಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ.
ಹಾಸನ (ನ.04): ಹಾಸನಾಂಬ ದೇವಿಯ ಉತ್ಸವ ಹಾಗೂ ಕಳಸ ಪ್ರತಿಷ್ಠಾಪನೆಯಲ್ಲಿ ಹಾಸನದ ಶಾಸಕ ಸ್ವರೂಪ್ ಪ್ರಕಾಶ್ ಅವರು ಜಿಲ್ಲಾಧಿಕಾರಿ ಸತ್ಯಭಾಮಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಜಿಲ್ಲಾಧಿಕಾರಿನೇ ಅಧ್ಯಕ್ಷೆ, ಉಪಾಧ್ಯಕ್ಷರೂ ಆಗಿಬಿಟ್ಟಿದ್ದಾರೆ. ಹಾಸನಾಂಬ ದೇವರ ಪೂಜೆಯಲ್ಲಿ ದಂಪತಿಯಿಂದಿಗೆ ಪೂಜೆಯಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಮನಸೋಯಿಚ್ಛೆ ನಡೆದುಕೊಳ್ಳುತ್ತಿದ್ದಾರೆ. ಶಾಸಕರು, ನಗರಸಭೆ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಹೇಳಿದರು.
ಕುಟುಂಬ ಸಮೇತ ಪೂಜೆಗೆ ಕುಳಿತುಕೊಂಡು ದೇವರಿಗೆ ಅಗೌರವ ತೋರಿದ್ದಾರೆ. ಮುಂದಿನ ಅಧಿವೇಶನದಲ್ಲಿ ಮುಜರಾಯಿ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿ ಸತ್ಯಭಾಮಾ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ಸನ್ಮಾನ ಆಗುವಂತಹ ಸಮಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಕೂಡ ಕಡೆಗಣಿಸಿದ್ದಾರೆ. ಇಂದು ಶನಿವಾರ ರಜಾದಿನವಾದ್ದರಿಂದ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಹಾಸನಾಂಬ ದರ್ಶನಕ್ಕೆ ಬರಬೇಕಿತ್ತು. ಆದರೆ, ಜಿಲ್ಲಾಧಿಕಾರಿಯ ಸರ್ವಾಧಿಕಾರಿ ಧೋರಣೆಯಿಂದ ಜನರು ಬೇಸತ್ತಿದ್ದಾರೆ. ಸರಿಯಾದ ಸಮಯಕ್ಕೆ ದರ್ಶನ ಸಿಗದೇ ದೇವರ ದರ್ಶನಕ್ಕೆ ಬರುವುದರ ಬಗ್ಗೆ ತಾತ್ಸಾರ ಮನೋಭಾವನೆ ತೋರುತ್ತಿದ್ದಾರೆ ಎಂದು ಶಾಸಕ ಸ್ವರೂಪ್ ಆಕ್ರೋಶ ವ್ಯಕ್ತಪಡಿಸಿದರು.